ಸುಶಾಂತ್ ಸಿಂಗ್ ನ ಮಾಜಿ ಮ್ಯಾನೇಜರ್ ಸಾವು ಪ್ರಕರಣ: ತನಿಖೆಗೆ ಸರಕಾರದಿಂದ ಸಿಟ್ ರಚನೆ

Update: 2022-12-23 15:09 GMT

ಮುಂಬೈ, ಡಿ. 23: ದಿವಂಗತ ಬಾಲಿವುಡ್ ನಟ ಸುಶಾಂತ್ ರಜಪೂತ್(Sushant Singh Rajput)ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್(Disha Salian) ಸಾವಿನ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರೂಪಿಸಲಾಗುವುದು ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್(Devendra Fadnavis) ಗುರುವಾರ ಹೇಳಿದ್ದಾರೆ.

ಸಾಲಿಯಾನ್ 2020 ಜೂನ್ 8ರಂದು ಮುಂಬೈಯ ಮಲಾಡ್ ಪ್ರದೇಶದಲ್ಲಿರುವ ಕಟ್ಟಡದ 14ನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ. ಜೂನ್ 14ರಂದು ಸುಶಾಂತ್ ರಜಪೂತ್ ಅವರು ತನ್ನ ನಿವಾಸದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮುಂಬೈ ಪೊಲೀಸರು ಈ ಪ್ರಕರಣವನ್ನು 2021ರಲ್ಲಿ ಅಂತಿಮಗೊಳಿಸಿದ್ದರು. ಸುಶಾಂತ್ ರಜಪೂತ್ನ ಸಾವಿನಲ್ಲಿ ಯಾರದೇ ಕೈವಾಡ ಇರುವುದಕ್ಕೆ ಪುರಾವೆಗಳು ಇಲ್ಲ ಎಂದು ಅವರು ಹೇಳಿದ್ದರು.

ಸಾಲಿಯಾನ್ ಸಾವಿನ ಘಟನೆ ಬಗ್ಗೆ ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ಬಿಜೆಪಿ ಶಾಸಕರು ಹಾಗೂ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಬಣ ಪ್ರಶ್ನೆ ಎತ್ತಿತ್ತು. ಸತ್ಯ ಬಹಿರಂಗವಾಗಬೇಕಾದರೆ ಶಿವಸೇನೆ (ಉದ್ಧವ್ ಬಾಲಾಸಾಹೇಬ್ ಠಾಕ್ರೆ)ಯ  ನಾಯಕ ಆದಿತ್ಯ ಠಾಕ್ರೆ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಬಿಜೆಪಿ ಶಾಸಕ ನಿತೇಶ್ ರಾಣೆ ಆಗ್ರಹಿಸಿದ್ದರು.

ಆದರೆ, ನಾಗಪುರ ಸುಧಾರಣಾ ಟ್ರಸ್ಟ್ ವಿವಾದದಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಮಹಾರಾಷ್ಟ್ರ ಸರಕಾರ ಈ ವಿಷಯವನ್ನು ಎತ್ತಿದೆ ಎಂದು ಮಾಜಿ ರಾಜ್ಯ ಸಚಿವ ಠಾಕ್ರೆ ಅವರು ಆರೋಪಿಸಿದ್ದರು. 

Similar News