ಕೋವಿಡ್ ಉಲ್ಬಣ: ಯಾವುದೇ ನಿರ್ಬಂಧ ಹೇರುವ ಯೋಜನೆ ಹೊಂದಿಲ್ಲ ಎಂದ ಕೇಂದ್ರ ಆರೋಗ್ಯ ಸಚಿವ

Update: 2022-12-24 07:09 GMT

ಹೊಸ ದಿಲ್ಲಿ: ಕೋವಿಡ್ ಸೋಂಕು ತೀವ್ರ ಸ್ವರೂಪದಲ್ಲಿರುವ ದೇಶಗಳಿಂದ ಬರುವ ವಿಮಾನಗಳನ್ನು ನಿಷೇಧಿಸುವುದರೊಂದಿಗೆ ಯಾವುದೇ ಕೋವಿಡ್ ಸಂಬಂಧಿ ನಿರ್ಬಂಧಗಳನ್ನು ಹೇರುವ ಯೋಜನೆ ಭಾರತದ ಮುಂದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ ಎಂದು Hindustan Times ವರದಿ ಮಾಡಿದೆ.

ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, "ಕಠಿಣ ಕ್ರಮಗಳನ್ನು ಜಾರಿಗೊಳಿಸುವಷ್ಟರ ಮಟ್ಟಿಗೆ ದೇಶದ ಸ್ಥಿತಿ ಗಂಭೀರವಾಗಿಲ್ಲ. ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ ಮತ್ತು ಇಷ್ಟು ಸಮಯದ ನಂತರ ಜನರೇ ಸಾಕಷ್ಟು ಜಾಗರೂಕರಾಗಿದ್ದು, ಸ್ವಯಂಪ್ರೇರಿತರಾಗಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಅಗತ್ಯವೇ ಇಲ್ಲದ ಸಂದರ್ಭದಲ್ಲಿ ಗಾಬರಿಗೊಳಿಸುವಂತಹ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವೇ ಇಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ನೆರೆ ದೇಶವಾದ ಚೀನಾದಲ್ಲಿ ಕೋವಿಡ್ ಪ್ರಕರಣಗಳು  ಉಲ್ಬಣಿಸುತ್ತಿರುವ ವರದಿಗಳ ಬೆನ್ನಿಗೇ ಸಚಿವರಿಂದ ಈ ಹೇಳಿಕೆ ಹೊರ ಬಿದ್ದಿದೆ.

ಆರೋಗ್ಯ ಸಚಿವಾಲಯವು ದೇಶಾದ್ಯಂತ ಇರುವ ಪ್ರಮುಖ ಆಸ್ಪತ್ರೆಗಳಲ್ಲಿ ಲಭ್ಯವಿರುವ ಮಾನವ ಸಂಪನ್ಮೂಲ, ಆಮ್ಲಜನಕ ಪೂರೈಕೆ, ಹಾಸಿಗೆಗಳ ಸಾಮರ್ಥ್ಯದ ಕುರಿತು ಮಂಗಳವಾರ ಪರಾಮರ್ಶೆ ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ.

"ಇದು ಯುದ್ಧ ಸಿದ್ಧತೆಗೆ ಸಂಬಂಧಿಸಿದ ವಿಷಯವಾಗಿದ್ದು, ನಾವು ಯದ್ಧಕ್ಕಾಗಿ ಉತ್ತಮವಾಗಿ ಸನ್ನದ್ಧಗೊಂಡಿರಬೇಕಾಗುತ್ತದೆ. ಅದಕ್ಕಾಗಿ ನಡೆಯುವ ಪರಾಮರ್ಶೆಯು ಸನ್ನದ್ಧತೆಯನ್ನು ಪರೀಕ್ಷಿಸುವ ಪರಿಣಾಮಕಾರಿ ಮಾರ್ಗವಾಗಿದೆ. ಮುಖ್ಯ ಸಂಗತಿಯೆಂದರೆ, ಗಾಬರಿಗೊಳ್ಳಬೇಕಾದ ಸಂದರ್ಭ ಉದ್ಭವಿಸಿಲ್ಲ ಎಂಬುದು" ಎಂದು ಅವರು ಹೇಳಿದ್ದಾರೆ.

ಈ ನಡುವೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ Test-Track-Treat-Vaccination ಕ್ರಮಗಳನ್ನು ಅನುಸರಿಸುವ ಕಡೆ ಗಮನ ನೀಡುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ. ಇದರೊಂದಿಗೆ ದೃಢಪಟ್ಟಿರುವ ವಂಶಾವಳಿ ಅನುಕ್ರಮ (Genome Sequencing) ಮಾದರಿಗಳನ್ನು ಕಳಿಸಿಕೊಡುವುದರಿಂದ ಹೊಸ ತಳಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಲು ಅನುಕೂಲವಾಗುತ್ತದೆ ಎಂದು ಸೂಚಿಸಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

"ಮುಂಬರುವ ಹಬ್ಬದ ಋತುವಿನಲ್ಲಿ ಸನ್ನದ್ಧ ಸ್ಥಿತಿಯಲ್ಲಿರಲು ಸಮಾರಂಭ ಆಯೋಜಕರು, ವ್ಯಾಪಾರದ ಮಾಲೀಕರು, ಮಾರುಕಟ್ಟೆ ಸಂಘಗಳು ಮುಂತಾದವರು ಅತಿಯಾದ ಜನಜಂಗುಳಿ ಸೇರುವುದನ್ನು ನಿಯಂತ್ರಿಸುವುದು, ಮುಖ್ಯವಾಗಿ ಒಳಾಂಗಣಗಳಲ್ಲಿ ಸಮರ್ಪಕವಾಗಿ ಗಾಳಿ ಬೆಳಕು ಬೀಳುವಂತ ವ್ಯವಸ್ಥೆ ಕೈಗೊಳ್ಳುವುದು ಹಾಗೂ ಜನಜಂಗುಳಿ ಇರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವ ಕ್ರಮಗಳನ್ನು ಜಾರಿಗೊಳಿಸುವುದು ಬಹು ಮುಖ್ಯ ಸಂಗತಿಯಾಗಿದೆ" ಎಂದು ಆರೋಗ್ಯ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Similar News