ಎಲ್ಗಾರ್ ಪರಿಷದ್ ಪ್ರಕರಣದ ಆರೋಪಿಗಳ ಬಿಡುಗಡೆ ಮತ್ತು ಕಲ್ಪಿತ ಸಾಕ್ಷ್ಯಾಧಾರಗಳ ಕುರಿತು ತನಿಖೆಗೆ ಕಾರ್ಯಕರ್ತರ ಆಗ್ರಹ

Update: 2022-12-24 11:46 GMT

ಹೊಸದಿಲ್ಲಿ: ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಬಂಧಿತ ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಮತ್ತು ಎಲ್ಲ ಆರೋಪಿಗಳ ವಿದ್ಯುನ್ಮಾನ ಸಾಧನಗಳಲ್ಲಿ ಕಲ್ಪಿತ ಸಾಕ್ಷ್ಯಾಧಾರಗಳ ಸೇರಿಸಿರುವ ಬಗ್ಗೆ ನಿಷ್ಪಕ್ಷ ತನಿಖೆಯನ್ನು ನಡೆಸಬೇಕು ಎಂದು ಮಾನವ ಹಕ್ಕು ಕಾರ್ಯಕರ್ತರು,ವಕೀಲರು ಮತ್ತು ಶಿಕ್ಷಣ ತಜ್ಞರು ಕರೆ ನೀಡಿದ್ದಾರೆ.

ಗುರುವಾರ ಮುಂಬೈನ ಮರಾಠಿ ಪತ್ರಕರ್ತರ ಸಂಘದಲ್ಲಿ ಸಮಾವೇಶಗೊಂಡಿದ್ದ ಅವರು ಮಾನವ ಹಕ್ಕು ರಕ್ಷಕರ ಮೇಲಿನ ದಾಳಿಗಳ ವಿರುದ್ಧ ಧ್ವನಿಯೆತ್ತಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಫಾ.ಸ್ಟಾನ್ ಸ್ವಾಮಿಯವರ ಲ್ಯಾಪ್ ಟಾಪ್ ನಲ್ಲಿ ದೋಷಾರೋಪದ ಸಾಕ್ಷ್ಯಗಳನ್ನು ಸೇರಿಸಲಾಗಿತ್ತು ಎಂದು ಅಮೆರಿಕದ ವಿಧಿವಿಜ್ಞಾನ ಸಂಸ್ಥೆ ಆರ್ಸೆನಲ್ ಕನ್ಸಲ್ಟಿಂಗ್ ವಾರದ ಹಿಂದೆ ತನ್ನ ಡಿಜಿಟಲ್ ಫಾರೆನ್ಸಿಕ್ ವರದಿಯಲ್ಲಿ ಬಹಿರಂಗಗೊಳಿಸಿತ್ತು. ಎಲ್ಗಾರ್ ಪರಿಷದ್ ಪ್ರಕರಣದಲ್ಲಿ 2020, ಅ.8ರಂದು ಬಂಧಿಸಲ್ಪಟ್ಟಿದ್ದ ಸ್ವಾಮಿ ಕಳೆದ ವರ್ಷ ತೀವ್ರ ಅನಾರೋಗ್ಯದಿಂದಾಗಿ ಜೈಲಿನಲ್ಲಿ ನಿಧನರಾಗಿದ್ದಾರೆ. ಸ್ವಾಮಿಯವರ ಕಂಪ್ಯೂಟರ್ ಪ್ರವೇಶಿಸಿದ್ದ ಹ್ಯಾಕರ್ ಮಾಲ್ವೇರ್ ಮೂಲಕ ಅವರಿಗೆ ತಿಳಿಯದೆ ರಹಸ್ಯ ಫೋಲ್ಡರ್ ನಲ್ಲಿ ಡಝನ್ ಗಟ್ಟಲೆ ದಾಖಲೆಗಳನ್ನು ಸೇರಿಸಿದ್ದು, ಇವುಗಳಲ್ಲಿ ಪೊಲೀಸರು ಸ್ವಾಮಿ ಮತ್ತು ಇತರರ ವಿರುದ್ಧ ಸಾಕ್ಷ್ಯಾಧಾರಗಳೆಂದು ಉಲ್ಲೇಖಿಸಿರುವ ತಥಾಕಥಿತ ‘ಮಾವೋವಾದಿಗಳಿಗೆ ಬರೆದ ಪತ್ರಗಳು’ ಸೇರಿವೆ ಎಂದು ಆರ್ಸೆನಲ್ ತನ್ನ ವರದಿಯಲ್ಲಿ ಹೇಳಿದೆ.

ಸಮಾವೇಶದಲ್ಲಿ ಮಾತನಾಡಿದ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಾಮೆಂಟಲ್ ರೀಸರ್ಚ್ನ ಹೋಮಿ ಭಾಭಾ ಸೆಂಟರ್ ಫಾರ್ ಸೈನ್ಸ್ ಎಜ್ಯುಕೇಶನ್ನ ಮಾಜಿ ಪ್ರೊಫೆಸರ್ ನಾಗಾರ್ಜುನ ಜಿ.ಅವರು,ಸ್ವಾಮಿ ಮತ್ತು ಕಂಪ್ಯೂಟರ್ ನ ಹಾರ್ಡ್ಡಿಸ್ಕ್ ನಲ್ಲಿ ಸೇರಿಸಲಾದ ದಾಖಲೆಗಳ ನಡುವೆ ಯಾವುದೇ ಸಂವಹನ ನಡೆದಿತ್ತು ಎನ್ನುವುದನ್ನು ತೋರಿಸುವ ಯಾವುದೇ ಡಿಜಿಟಲ್ ಸಾಕ್ಷಿ  ಕಂಡು ಬಂದಿಲ್ಲ ಎಂದು ಆರ್ಸೆನಲ್ ತನ್ನ ವರದಿಯಲ್ಲಿ ಹೇಳಿದೆ. ಅಲ್ಲದೆ ಎನ್ಐಎ ಸಾಕ್ಷಾಧಾರವನ್ನಾಗಿ ವಶಪಡಿಸಿಕೊಂಡಿರುವ ದಾಖಲೆಗಳನ್ನು ಎಷ್ಟೊಂದು ಅಲ್ಪಾವಧಿಯಲ್ಲಿ ಸೃಷ್ಟಿಸಲಾಗಿತ್ತೆಂದರೆ ಮಾನವ ಅದನ್ನು ಮಾಡಲು ಸಾಧ್ಯವಿಲ್ಲ ಎಂದೂ ವರದಿಯು ಬೆಟ್ಟು ಮಾಡಿದೆ ಎಂದು ಹೇಳಿದರು.

ವರದಿಯಲ್ಲಿ ಉಲ್ಲೇಖಿಸಲಾಗಿರುವ ಅಂಶಗಳ ಬಗ್ಗೆ ಎನ್ಎಐಯ ವರ್ತನೆಯೇ ಶಂಕಾಸ್ಪದವಾಗಿದೆ ಎಂದು ಹೇಳಿದ ನ್ಯಾಯಾಲಯದಲ್ಲಿ ಸ್ವಾಮಿಯವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮಿಹಿರ ದೇಸಾಯಿ ಅವರು,ಮೊದಲನೆಯದಾಗಿ ಪ್ರಾಸಿಕ್ಯೂಷನ್ ಏಜೆನ್ಸಿಯು ಕಂಪ್ಯೂಟರ್ ಆಧಾರಿತ ಸಾಕ್ಷವನ್ನು ಮಾತ್ರ ನೆಚ್ಚಿಕೊಂಡಿದ್ದರೆ ಅದು ಕೆಲಸ ಮಾಡುತ್ತದೆ ಎನ್ನುವುದು ಅವರಿಗೆ ಖಚಿತವಿರಬೇಕು ಮತ್ತು ಸಾಕ್ಷಾಧಾರಗಳನ್ನು ಕಂಪ್ಯೂಟರ್ನಲ್ಲಿ ಸೇರಿಸಲಾಗಿದೆ ಎನ್ನುವುದು ಅವರಿಗೆ ಗೊತ್ತಿಲ್ಲದಿದ್ದರೆ ಅವರು ಅಷ್ಟೊಂದು ಆತ್ಮವಿಶ್ವಾಸ ಹೊಂದಿರಲು ಸಾಧ್ಯವಿಲ್ಲ. ಮುಖ್ಯವಾಗಿ ಅವರು ದೇಶದ ಭದ್ರತೆಗೆ ಬೆದರಿಕೆಯಾಗಿದ್ದಾರೆ ಎನ್ನುವುದು ಬಂಧಿತ ಎಲ್ಲ ಆರೋಪಿಗಳ ವಿರುದ್ಧದ ಆರೋಪವಾಗಿದ್ದರೆ ಇದು ಹೇಗೆ ದೊಡ್ಡ ಬೆದರಿಕೆಯಲ್ಲ? ದೂರದಿಂದಲೇ ಕಂಪ್ಯೂಟರ್ನಲ್ಲಿ ಹೇಗೆ ದಾಖಲೆಗಳನ್ನು ಸೇರಿಸಬಹುದು ಎನ್ನುವುದನ್ನು ತಿಳಿಯುವ ಕುತೂಹಲ ನಿಮಗಿಲ್ಲವೇ? ಇದು ನಾಳೆ ಪ್ರಧಾನ ಮಂತ್ರಿ ಅಥವಾ ಗೃಹಸಚಿವರಿಗೂ ಸಂಭವಿಸಬಹುದು ಎಂಬ ಕಳವಳ ನಿಮಗಿಲ್ಲವೇ ಎಂದು ಪ್ರಶ್ನಿಸಿದರು.

ಸ್ವಾಮಿಯವರ ಕಂಪ್ಯೂಟರ್ನಲ್ಲಿ ಸಾಕ್ಷವನ್ನು ತಿರುಚಿದ ಮತ್ತು ಕಲ್ಪಿತ ಸಾಕ್ಷಗಳನ್ನು ಸೇರಿಸಿದ ಬಗ್ಗೆ ಎನ್ಐಎ ತನಿಖೆಯನ್ನು ನಡೆಸುತ್ತಿಲ್ಲ ಅಥವಾ ಅವರು ಬಹಿರಂಗಗೊಳಿಸಲು ಬಯಸದ ಅಂಶಗಳನ್ನು ತನಿಖೆಯು ತೋರಿಸಿದೆ. ಅವರು ತನಿಖೆಯನ್ನು ಮುಚ್ಚಿಡಲು ಪ್ರಯತ್ನಿಸುತ್ತಿರಬಹುದು ಎನ್ನುವುದು ತನ್ನ ಏಕೈಕ ತೀರ್ಮಾನವಾಗಿದೆ ಎಂದರು.

ಸ್ವಾಮಿಯವರ ವಕೀಲರ ಕೋರಿಕೆಯ ಮೇರೆಗೆ ಅವರ ಕಂಪ್ಯೂಟರ್ನ ಇಲೆಕ್ಟ್ರಾನಿಕ್ ಕಾಪಿಯನ್ನು ಆರ್ಸೆನಲ್ ಪರೀಕ್ಷಿಸಿತ್ತು.

ವಾಸ್ತವದಲ್ಲಿ ಸ್ವಾಮಿಯವರ ಕಂಪ್ಯೂಟರ್ನಲ್ಲಿ ಕೈವಾಡ ನಡೆಸಿದ್ದ ಹ್ಯಾಕರ್ ಕಾರ್ಯಕರ್ತ ರೋನಾ ವಿಲ್ಸನ್ ಅವರ ಲ್ಯಾಪ್ಟಾಪ್ನ್ನು ಹ್ಯಾಕ್ ಮಾಡಿದ್ದ ಎಂದು ಆರ್ಸೆನಲ್ ತನ್ನ ವರದಿಯಲ್ಲಿ ಒತ್ತಿ ಹೇಳಿದೆ.

ತನ್ನ ಬಂಧನಕ್ಕೆ ಮುನ್ನ ತನ್ನ ಲ್ಯಾಪ್ಟಾಪ್ನಲ್ಲಿ ದಾಖಲೆಗಳನ್ನು ಸೇರಿಸಿದ ಆರೋಪದ ಕುರಿತು ತನಿಖೆ ಕೋರಿ ವಿಲ್ಸನ್ ಫೆಬ್ರವರಿಯಲ್ಲಿ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಇದಕ್ಕೆ ಉತ್ತರವಾಗಿ ಎನ್ಐಎ ವಿಲ್ಸನ್ ರ  ಕಂಪ್ಯೂಟರ್ನಲ್ಲಿ ಆಕ್ಷೇಪಾರ್ಹ ದಾಖಲೆಗಳನ್ನು ಸೇರಿಸಲಾಗಿದೆ ಎಂದು ಆರ್ಸೆನಲ್ ಹೇಳಿದ್ದನ್ನು ತಿರಸ್ಕರಿಸಿತ್ತು.

Similar News