ಸೋಲಾರ್ ವಂಚನೆ ಪ್ರಕರಣ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲಗೆ ಕ್ಲೀನ್ ಚಿಟ್ ನೀಡಿದ ಸಿಬಿಐ

Update: 2022-12-24 17:18 GMT

ತಿರುವನಂತಪುರ,ಡಿ.24: ಸೋಲಾರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ(KC Venugopal) ಅವರಿಗೆ ಕ್ಲೀನ್ ಚಿಟ್ ನೀಡಿರುವ ಸಿಬಿಐ(CBI),ಈ ಸಂಬಂಧ ವರದಿಯನ್ನು ಶುಕ್ರವಾರ ಇಲ್ಲಿಯ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿದೆ.

ದೂರುದಾರರಾದ ಸರಿತಾ ನಾಯರ್(Sarita Nair) ಅವರು ಉಲ್ಲೇಖಿಸಿರುವ ಆರೋಪಗಳೊಂದಿಗೆ ಆರೋಪಿಯ ಸಂಬಂಧ ಕಲ್ಪಿಸುವ ಯಾವುದೇ ಸಾಕ್ಷ್ಯಾಧಾರಗಳನ್ನು ಕಂಡುಕೊಳ್ಳಲು ತನಗೆ ಸಾಧ್ಯವಾಗಿಲ್ಲ ಎಂದು ವರದಿಯಲ್ಲಿ ತಿಳಿಸಿರುವ ಸಿಬಿಐ, ಪ್ರಕರಣವನ್ನು ಮುಚ್ಚಲು ನ್ಯಾಯಾಲಯದ ಅನುಮತಿಯನ್ನು ಕೋರಿದೆ. ಸಿಬಿಐ ಇದಕ್ಕೂ ಮುನ್ನ ಮೂವರು ಕಾಂಗ್ರೆಸ್ ನಾಯಕರಾದ ಮಾಜಿ ಸಚಿವ ಎ.ಪಿ.ಅನಿಲ ಕುಮಾರ ಹಾಗೂ ಸಂಸದರಾದ ಹಿಬಿ ಈಡೆನ್ ಮತ್ತು ಆಡೂರ ಪ್ರಕಾಶ್ ಅವರಿಗೆ ಕ್ಲೀನ್ ಚಿಟ್ಗಳನ್ನು ನೀಡಿತ್ತು.

ಕಾಂಗ್ರೆಸ್ ನಾಯಕರು ನಾಲ್ಕು ಸಂದರ್ಭಗಳಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ನಾಯರ್ ದೂರಿನಲ್ಲಿ ಆಪಾದಿಸಿದ್ದರೂ,ಆಕೆಯ ವಿವರಣೆ ಮತ್ತು ನಂತರದ ಸಾಕ್ಷ್ಯಾಧಾರಗಳು ತಾಳೆಯಾಗಿಲ್ಲ ಮತ್ತು ಪ್ರಕರಣವನ್ನು ಮುಂದುವರಿಸಲು ಸಾಕಾಗುತ್ತಿಲ್ಲ ಎಂದು ಸಿಬಿಐ ಹೇಳಿದೆ.

Similar News