ಶಾಲಾ ಆವರಣದಲ್ಲಿ ವಾಜಪೇಯಿ ಜಯಂತಿ ಕಾರ್ಯಕ್ರಮಕ್ಕೆ ವಿರೋಧ: ಮುಖ್ಯೋಪಾಧ್ಯಾಯಿನಿ ಅಮಾನತು

Update: 2022-12-26 16:18 GMT

ಪ್ರಯಾಗರಾಜ್(ಉ.ಪ್ರ),ಡಿ.26: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ(Atal Bihari Vajpayee) ಅವರ ಜಯಂತಿ ಅಂಗವಾಗಿ ಅವರಿಗೆ ಗೌರವಾರ್ಪಣೆಗಾಗಿ ರವಿವಾರ ಇಲ್ಲಿಯ ಶಾಲೆಯೊಂದರ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ವಿರೋಧಿಸಿದ್ದಕ್ಕಾಗಿ ಮುಖ್ಯೋಪಾಧ್ಯಾಯಿನಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಮುಖ್ಯೋಪಾಧ್ಯಾಯಿನಿ ಆಗಮಿಸಿದಾಗ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ವರ್ಷದ ಅಂತಿಮ ‘ಮನ್ ಕಿ ಬಾತ್’ (Man ki baat)ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತಿತ್ತು ಮತ್ತು ಕಾರ್ಯಕ್ರಮವನ್ನು ನಿಲ್ಲಿಸುವಂತೆ ಅವರು ಪಟ್ಟು ಹಿಡಿದಿದ್ದರು.

ತನ್ನ ಅನುಮತಿಯಿಲ್ಲದೆ ಕಾರ್ಯಕ್ರಮವನ್ನು ಏರ್ಪಡಿಸಿದ್ದಕ್ಕಾಗಿ ಮುಖ್ಯೋಪಾಧ್ಯಾಯಿನಿ ಕಲ್ಪನಾ ತ್ಯಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಪ್ರಯಾಗರಾಜ್ ನ ಆರೈಲ್ ಪ್ರದೇಶದಲ್ಲಿಯ ಉನ್ನತ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದ್ದು,ಬಿಜೆಪಿ ಶಾಸಕ ಪಿಯೂಷ್ ರಂಜನ್ ನಿಷಾದ್(Piyush Ranjan Nishad) ಅವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿದ್ದರು.

ಅನುಮತಿ ಅಗತ್ಯವಿಲ್ಲದ ಪಂಚಾಯತ ಭವನದಲ್ಲಿ ಕಾರ್ಯಕ್ರಮ ನಡೆಯುತ್ತಿದೆ,ಮೇಲಾಗಿ ರವಿವಾರವಾಗಿರುವುದರಿಂದ ಶಾಲೆಗೆ ರಜೆಯೂ ಇದೆ ಎಂದು ಶಾಸಕರು ವಿವರಿಸಿದರಾದರೂ ತ್ಯಾಗಿ ತನ್ನ ಪಟ್ಟು ಬಿಡದೆ ವಾಗ್ವಾದ ಮುಂದುವರಿಸಿದ್ದರು. ತಕ್ಷಣ ಶಿಕ್ಷಣಾಧಿಕಾರಿಗಳನ್ನು ಶಾಲೆಗೆ ಕರೆಸಲಾಗಿತ್ತು.

ತ್ಯಾಗಿ ತಪ್ಪು ಮಾಡಿದ್ದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಗೊಂಡ ಬಳಿಕ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಶಿಕ್ಷಣಾಧಿಕಾರಿ ಪ್ರವೀಣಕುಮಾರ್ ತಿವಾರಿ ಸುದ್ದಿಗಾರರಿಗೆ ತಿಳಿಸಿದರು.

Similar News