ಅಸ್ಸಾಂ ರೈನ್‌ಫಾರೆಸ್ಟ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಕ್ಯಾಂಪಸ್‌ನಲ್ಲಿ ಚಿರತೆ ದಾಳಿ: 15 ಮಂದಿಗೆ ಗಾಯ

Update: 2022-12-27 09:41 GMT

ಗುವಹಾಟಿ: ಅಸ್ಸಾಂ ರಾಜ್ಯದ ಜೋರ್ಹಟ್‌ ಎಂಬಲ್ಲಿರುವ ರೈನ್‌ ಫಾರೆಸ್ಟ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಕ್ಯಾಂಪಸ್‌ನಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ನಡೆದ ಚಿರತೆ ದಾಳಿಯಲ್ಲಿ ಮೂವರು ಅರಣ್ಯಾಧಿಕಾರಿಗಳು, ಮಹಿಳೆಯರು, ಮಕ್ಕಳು ಸೇರಿದಂತೆ ಕನಿಷ್ಠ 15 ಜನರು ಗಾಯಗೊಂಡಿದ್ದಾರೆ.

ಅರಣ್ಯಾಧಿಕಾರಿಗಳು ಸೆರೆಹಿಡಿದಿರುವ ವೀಡಿಯೋವೊಂದರಲ್ಲಿ ಚಿರತೆ ಕ್ಯಾಂಪಸ್‌ನ ತಡೆಬೇಲಿಯನ್ನು ಹಾರಿ ಒಳಬರುತ್ತಿರುವುದು ಹಾಗೂ ಅಲ್ಲಿ ಸಾಗುತ್ತಿರುವ ಕಾರೊಂದರ ಮೇಲೆ ದಾಳಿ ನಡೆಸುತ್ತಿರುವುದು ಕಾಣಿಸುತ್ತದೆ.

ರೈನ್‌ಫಾರೆಸ್ಟ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಜೋರ್ಹಟ್‌ ನಗರದ ಹೊರವಲಯದಲ್ಲಿದ್ದು ಸುತ್ತಲೂ ಅರಣ್ಯ ಪ್ರದೇಶವಿರುವುದರಿಂದ ಚಿರತೆ ಅಲ್ಲಿಂದ ಕ್ಯಾಂಪಸ್‌ಗೆ ನುಗ್ಗಿದೆ.

ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆಹಿಡಿಯುವ ಯತ್ನಗಳು ನಡೆಯುತ್ತಿವೆ ಎಂದು ತಿಳಿಸಿರುವ ಅರಣ್ಯಾಧಿಕಾರಿಗಳು ನಿವಾಸಿಗಳಿಗೆ ಹೊರಬಾರದಂತೆ ಸೂಚನೆ ನೀಡಿದ್ದಾರೆ.

ಗಾಯಾಳುಗಳೆಲ್ಲರನ್ನೂ ಆಸ್ಪತ್ರೆಗೆ ಸೇರಿಸಲಾಗಿದ್ದು ಎಲ್ಲರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.

Similar News