ಮುಂದುವರಿದ ಅನಿಶ್ಚಿತತೆ: ಜೆಟ್ ಏರ್ವೇಸ್ ನಿಂದ ಪೈಲಟ್ ಗಳು, ಅಧಿಕಾರಿಗಳ ಸಾಮೂಹಿಕ ನಿರ್ಗಮನ

Update: 2022-12-27 10:08 GMT

ಹೊಸದಿಲ್ಲಿ,ಡಿ.27: ಸ್ಥಗಿತಗೊಂಡಿರುವ ಜೆಟ್ ಏರ್‌ವೇಸ್‌ ನ ಪುನರಾರಂಭ ಕುರಿತು ಹೆಚ್ಚುತ್ತಿರುವ ಅನಿಶ್ಚಿತತೆಯ ನಡುವೆಯೇ ಅದರ ಕೆಲವು ಹಿರಿಯ ಅಧಿಕಾರಿಗಳು, ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿ ಸಂಸ್ಥೆಗೆ ಗುಡ್‌ಬೈ ಹೇಳಿದ್ದಾರೆ. ಕೆಲವು ಹಿರಿಯ ಅಧಿಕಾರಿಗಳನ್ನು ವೇತನರಹಿತ ರಜೆಯ ಮೇಲೆ ಕಳುಹಿಸಲಾಗಿದೆ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ ಕಪೂರ್ ಮತ್ತು ಮುಖ್ಯ ಹಣಕಾಸು ಅಧಿಕಾರಿ ವಿಪುಲಾ ಗುಣತಿಲಕ ಅವರು ವೇತನ ಕಡಿತದೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸಿದ್ದಾರೆ ಎಂಬ ವರದಿಗಳೂ ಇವೆ.

ಜೂನ್ 2021ರಲ್ಲಿ ದಿವಾಳಿತನ ಪರಿಹಾರ ಪ್ರಕ್ರಿಯೆಯಡಿ ಜಲಾನ್ ಕಾಲ್ರಾಕ್ ಕನ್ಸಾರ್ಟಿಯಂ ಜೆಟ್ ಏರ್‌ವೇಸ್ ಖರೀದಿಗೆ ಯಶಸ್ವಿ ಬಿಡ್‌ದಾರನಾಗಿ ಹೊರಹೊಮ್ಮಿತ್ತು. ಆದರೆ ಕಾರ್ಯಾಚರಣೆಗಳನ್ನು ಆರಂಭಿಸಲು ಉದ್ಯಮದ ಹಳೆಯ ಹುಲಿಗಳನ್ನು ನೇಮಿಸಿಕೊಂಡಿದ್ದರೂ ಜೆಟ್ ಏರ್‌ವೇಸ್ ಇನ್ನೂ ನಿಶ್ಚಲವಾಗಿಯೇ ಉಳಿದುಕೊಂಡಿದೆ.

ಇಂಜಿನಿಯರಿಂಗ್ ಮತ್ತು ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷರು ವಿಮಾನಯಾನ ಸಂಸ್ಥೆಯನ್ನು ತೊರೆದಿದ್ದಾರೆ. ಕೆಲವು ವಿಮಾನಯಾನ ಸಂಸ್ಥೆಗಳು ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವುದರಿಂದ ಕೆಲವು ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿಗಳೂ ಉತ್ತಮ ಅವಕಾಶಗಳನ್ನು ಕಂಡುಕೊಳ್ಳಲು ಜೆಟ್ ಏರ್‌ವೇಸ್‌ನ್ನು ತೊರೆದಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಜೆಟ್ ಏರ್‌ವೇಸ್‌ನ ಪ್ರಸ್ತುತ ಉದ್ಯೋಗಿಗಳ ಸಂಖ್ಯೆಯನ್ನು ದೃಢಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಸಂಸ್ಥೆಯು ಪುನರುಜ್ಜೀವನಗೊಂಡ ಬಳಿಕ ಅದ್ಭುತ ಪ್ರಗತಿಯನ್ನು ಸಾಧಿಸಲಿದೆ ಎಂದು ಸಂಸ್ಥೆಯ ಹಿರಿಯ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು. ಈ ಹಿಂದೆ ತನ್ನ ಭವಿಷ್ಯದ ಕುರಿತು ಅನಿಶ್ಚಿತತೆಯ ನಡುವೆಯೇ ಸಂಸ್ಥೆಯು ತನ್ನ ಹಲವಾರು ಉದ್ಯೋಗಿಗಳ ವೇತನಗಳನ್ನು ಕಡಿತಗೊಳಿಸಿತ್ತು ಮತ್ತು ಇನ್ನೂ ಹಲವು ಉದ್ಯೋಗಿಗಳನ್ನು ವೇತನರಹಿತ ರಜೆಯಲ್ಲಿ ಕಳುಹಿಸಿತ್ತು.

 ಅಕ್ಟೋಬರ್ ‌ನಲ್ಲಿ ರಾಷ್ಟ್ರೀಯ ಕಂಪನಿ ಕಾಯ್ದೆ ಮೇಲ್ಮನವಿ ನ್ಯಾಯಾಧಿಕರಣವು ಉದ್ಯೋಗಿಗಳ ಭವಿಷ್ಯನಿಧಿ ಮತ್ತು ಗ್ರಾಚ್ಯುಯಿಟಿ ಬಾಕಿಗಳನ್ನು ಪಾವತಿಸುವಂತೆ ಕನ್ಸಾರ್ಟಿಯಮ್‌ಗೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಕನ್ಸಾರ್ಟಿಯಂ,ಹಣದ ಹರಿವನ್ನು ನಿಯಂತ್ರಿಸಲು ಸದ್ಯೋಭವಿಷ್ಯದಲ್ಲಿ ತಾನು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ನ.18ರಂದು ಹೇಳಿತ್ತು.

Similar News