ಭಾರತ್‌ ಜೋಡೋ ಯಾತ್ರೆ ವೇಳೆ ಹಲವು ಬಾರಿ ರಾಹುಲ್‌ ಗಾಂಧಿಯ ಭದ್ರತೆಯಲ್ಲಿ ಲೋಪ: ಗೃಹ ಸಚಿವರಿಗೆ ಪತ್ರ ಬರೆದ ಕಾಂಗ್ರೆಸ್

Update: 2022-12-28 10:54 GMT

ಹೊಸದಿಲ್ಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆಯ ವೇಳೆ ಹಲವು ಬಾರಿ ಭದ್ರತಾ ಲೋಪಗಳು ಉಂಟಾಗಿವೆ ಎಂದು ಆರೋಪಿಸಿರುವ ಕಾಂಗ್ರೆಸ್‌, ತನ್ನ‌ ನಾಯಕನಿಗೆ ಸೂಕ್ತ ರಕ್ಷಣೆಯೊದಗಿಸಬೇಕೆಂದು ಕೋರಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದಿದೆ.

ಶನಿವಾರ ಯಾತ್ರೆ ದಿಲ್ಲಿ ಪ್ರವೇಶಿಸಿದ ನಂತರ ಹಲವು ಬಾರಿ ಭದ್ರತಾ ಲೋಪ ಉಂಟಾಗಿದೆ ಎಂದು ಶಾ ಅವರಿಗೆ ಬರೆದ ಪತ್ರದಲ್ಲಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್‌ ದೂರಿದ್ದಾರೆ.

ಕೇಂದ್ರ ಗೃಹ ಸಚಿವಾಲಯದ ಸುಪರ್ದಿಯಲ್ಲಿರುವ ದಿಲ್ಲಿ ಪೊಲೀಸರು ಯಾತ್ರೆಯ ಸಂದರ್ಭ ಸೇರಿದ್ದ ಭಾರೀ ಜನಜಂಗುಳಿಯನ್ನು ನಿಭಾಯಿಸಲು ವಿಫಲವಾಗಿದ್ದಾರೆ ಹಾಗೂ ಝೆಡ್+‌ ಭದ್ರತೆ ಹೊಂದಿರುವ ರಾಹುಲ್‌ ಗಾಂಧಿಯಿಂದ ಅಂತರ ಕಾಪಾಡಲು ವಿಫಲವಾಗಿದ್ದಾರೆ," ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಪರಿಸ್ಥಿತಿ ಎಷ್ಟೊಂದು ಗಂಭೀರವಾಗಿತ್ತೆಂದರೆ ಪಕ್ಷ ಕಾರ್ಯಕರ್ತರು ಮತ್ತು ಯಾತ್ರೆಯಲ್ಲಿ  ರಾಹುಲ್‌ ಪಕ್ಕದಲ್ಲಿ ಹೆಜ್ಜೆ ಹಾಕಿದವರೇ ಭದ್ರತೆಯ ವರ್ತುಲ ಮಾಡಬೇಕಾಯಿತು, ದಿಲ್ಲಿ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಹರ್ಯಾಣ ರಾಜ್ಯ ಗುಪ್ತಚರ ಇಲಾಖೆಗೆ ಸೇರಿದ ಅಪರಿಚಿತ ವ್ಯಕ್ತಿಗಳು ಹರ್ಯಾಣಾದ ಗುರ್ಗಾಂವ್‌ನಲ್ಲಿ ಭಾರತ್‌ ಜೋಡೋ ಯಾತ್ರೆಯ ಕಂಟೇನರ್‌ಗಳನ್ನು ಪ್ರವೇಶಿಸಿದ್ದ ಕುರಿತು ದಾಖಲಿಸಲಾಗಿರುವ ದೂರನ್ನೂ ವೇಣುಗೋಪಾಲ್‌ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮುಂದೆ ಜನವರಿ 3, 2023 ರಿಂದ ಯಾತ್ರೆ ಸೂಕ್ಷ್ಮ ಪ್ರದೇಶಗಳಾದ ಪಂಜಾಬ್‌ ಮತ್ತು ಜಮ್ಮು ಕಾಶ್ಮೀರದಲ್ಲಿ ಸಾಗಲಿರುವುದರಿಂದ ಈ ಸಂದರ್ಭ ರಾಹುಲ್‌ ಗಾಂಧಿ ಹಾಗೂ  ಯಾತ್ರೆಯಲ್ಲಿ ಭಾಗವಹಿಸುವ ನಾಯಕರು ಹಾಗೂ ಅದನ್ನು ಸೇರುವವರೆಲ್ಲರಿಗೂ ಸೂಕ್ತ  ಭದ್ರತೆ ಒದಗಿಸಲು ಕ್ರಮಕೈಗೊಳ್ಳಬೇಕೆಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

Similar News