74 ದಿನ ಸಿಜೆಐ ಆಗಿದ್ದ ಜ. ಯು.ಯು. ಲಲಿತ್‌ ನಿವಾಸದಲ್ಲಿದ್ದರು 40ಕ್ಕೂ ಅಧಿಕ ಸಹಾಯಕ ಸಿಬ್ಬಂದಿ!

Update: 2022-12-28 13:49 GMT

ಹೊಸದಿಲ್ಲಿ: ಆಗಸ್ಟ್‌ 27 ರಿಂದ ನವೆಂಬರ್‌ 8ರ ತನಕ, ಒಟ್ಟು 74 ದಿನಗಳ ಕಾಲ  ಸುಪ್ರೀಂ ಕೋರ್ಟಿನ 49 ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದ ಜಸ್ಟಿಸ್‌ ಯು ಯು ಲಲಿತ್‌ ತಮ್ಮ ಅಧಿಕಾರಾವಧಿಯಲ್ಲಿ 19, ಅಕ್ಬರ್‌ ರೋಡ್‌ನಲ್ಲಿದ್ದ ತಮ್ಮ ಅಧಿಕೃತ ನಿವಾಸದಲ್ಲಿ ದಾಖಲೆ 40 ಕ್ಕೂ ಹೆಚ್ಚು ಸಹಾಯಕ ಸಿಬ್ಬಂದಿಗಳನ್ನು ಹೊಂದಿದ್ದರು. ರಾಷ್ಟ್ರಪತಿ ಭವನ ಅಥವಾ ಪ್ರಧಾನಿ ನಿವಾಸ ಹೊರತುಪಡಿಸಿ ಬೇರೆ ಯಾವುದೇ ಸಂವಿಧಾನಿಕ ಹುದ್ದೆ ಹೊಂದಿದವರ ಗೃಹ ಕಚೇರಿಯಲ್ಲಿ ಇಷ್ಟೊಂದು ಸಂಖ್ಯೆಯ ಸಿಬ್ಬಂದಿ ಹೊಂದಿದ ಇತಿಹಾಸವಿಲ್ಲ ಎಂದು timesofindia ವರದಿ ಮಾಡಿದೆ.

ಸಿಜೆಐ ಆಗಿ ನಿವೃತ್ತರಾದಾಗ ಕೆಲವೊಂದು ಸಿಬ್ಬಂದಿಗಳನ್ನು ಜಸ್ಟಿಸ್‌ ಲಲಿತ್‌ ಕೈಬಿಟ್ಟರಾದರೂ ಈಗ  28 ಅಟೆಂಡರುಗಳು ಹಾಗೂ ಸಹಾಯಕ ಸಿಬ್ಬಂದಿ ಅವರ ನಿವಾಸದಲ್ಲಿದ್ದಾರೆ. ಈ ಸಿಬ್ಬಂದಿಯಲ್ಲಿ ಸುಪ್ರೀಂ ಕೋರ್ಟ್‌ ಸ್ವಚ್ಛತೆ ಮತ್ತಿತರ ಕಾರ್ಯಗಳಿಗಾಗಿ ಸಿಬ್ಬಂದಿ ನೇಮಿಸಲು ಹೊರಗುತ್ತಿಗೆ ನೀಡಿದ್ದ ಬಿವಿಜಿ ಇಂಡಿಯಾದಿಂದ ಬಂದ ಕೆಲ ಸಿಬ್ಬಂದಿಗಳೂ ಇದ್ದಾರೆ.

ಸಾಮಾನ್ಯವಾಗಿ ಮುಖ್ಯ ನ್ಯಾಯಮೂರ್ತಿಗಳು 12-15 ಸಹಾಯಕ ಸಿಬ್ಬಂದಿ ಹೊಂದಿರುತ್ತಿದ್ದರೆ ನಿವೃತ್ತರಾದ ನಂತರ 2-3 ಸಹಾಯಕ ಸಿಬ್ಬಂದಿಗಳನ್ನು ಹೊಂದಿರುತ್ತಾರೆ. ನಿವೃತ್ತ ಸಿಜೆಐ ದಿಲ್ಲಿಯಲ್ಲಿಯೇ ಉಳಿದುಕೊಂಡರೆ ಸಿಬ್ಬಂದಿಯನ್ನು ಸುಪ್ರೀಂ ಕೋರ್ಟ್‌ ಒದಗಿಸುತ್ತದೆ, ಅವರು ತಮ್ಮ ತವರು ರಾಜ್ಯಕ್ಕೆ ಮರಳಿದರೆ ಆಯಾ ರಾಜ್ಯದ ಹೈಕೋರ್ಟುಗಳು ಸಹಾಯಕ ಸಿಬ್ಬಂದಿಯನ್ನು ಒದಗಿಸುತ್ತವೆ.

ಈಗಿನ ಸಿಜೆಐ ಡಿ ವೈ ಚಂದ್ರಚೂಡ್‌ ಅವರು ಸದ್ಯ ಜಸ್ಟಿಸ್‌ ಲಲಿತ್‌ ಇರುವ ನಿವಾಸದಲ್ಲಿ ವಾಸಿಸಲು ನಿರ್ಧರಿಸಿರುವುದರಿಂದ ಜಸ್ಟಿಸ್‌ ಲಲಿತ್‌ ಅವರಿಗೆ ಸಫ್ದರ್‌ಜಂಗ್‌ ರಸ್ತೆಯಲ್ಲಿರುವ ಬಂಗಲೆ ಒದಗಿಸಲಾಗಿದೆ. ಆದರೆ ಹೊಸ ನಿವಾಸಕ್ಕೆ ತೆರಳಿದ ನಂತರ ಈಗಿನ 28 ಸಹಾಯಕ ಸಿಬ್ಬಂದಿ ಪೈಕಿ ಕನಿಷ್ಠ 12 ಮಂದಿಯನ್ನು ಉಳಿಸಿಕೊಳ್ಳಲು ಜಸ್ಟಿಸ್‌ ಲಲಿತ್‌ ಅವರ ಕಚೇರಿ ಮನವಿ ಮಾಡಿದೆಯೆನ್ನಲಾಗಿದೆ.

Similar News