ಮತಾಂತರ ಆರೋಪ: ಕ್ರೈಸ್ತ ಶಿಕ್ಷಣ ಸಂಸ್ಥೆಯ ಅಧಿಕಾರಿಗಳಿಗೆ ಉತ್ತರಪ್ರದೇಶ ಪೊಲೀಸರ ನೋಟಿಸ್

Update: 2022-12-28 15:08 GMT

ಲಕ್ನೋ, ಡಿ.29: ಫತೇಹಪುರ ಜಿಲ್ಲೆಯಲ್ಲಿ ಕಾನೂನುಬಾಹಿರವಾಗಿ ನಡೆದಿದೆಯೆನ್ನಲಾದ ಮತಾಂತರ ಪ್ರಕರಣದಲ್ಲಿ ತಮ್ಮ ಪಾತ್ರವನ್ನು ವಿವರಿಸುವಂತೆ ಕ್ರೈಸ್ತ ಶಿಕ್ಷಣ ಸಂಸ್ಥೆಯೊಂದರ ಕುಲಪತಿ, ಉಪಕುಲಪತಿ ಹಾಗೂ ಇನ್ನೋರ್ವ ಅಧಿಕಾರಿ ಮತ್ತು ಬಿಷಪ್ ಅವರಿಗೆ ಉತ್ತರಪ್ರದೇಶ ಪೊಲೀಸರು ಬುಧವಾರ ನೋಟಿಸ್ ಜಾರಿಗೊಳಿಸಿದ್ದಾರೆ.

ಸ್ಥಳೀಯರನ್ನು ಮತಾಂತರಿಸಲಾಗುತ್ತಿದೆ ಎಂದು ಆರೋಪಿಸಿ ಫತೇಹಪುರದ ಹರಿಹರಗಂಜ್ ಪ್ರದೇಶದಲ್ಲಿರುವ ಇವಾಂಜೆಲಿಕಲ್ ಚರ್ಚ್ ಆಫ್ ಇಂಡಿಯಾದ ಹೊರಭಾಗದಲ್ಲಿ ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರು ಎಪ್ರಿಲ್ 14ರಂದು ಪ್ರತಿಭಟನೆ ನಡೆಸಿದ ಬಳಿಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಶ್ವಹಿಂದೂ ಪರಿಷತ್ ನಾಯಕ ಹಿಮಾಂಶು ದೀಕ್ಷಿತ್ ಅವರು ನೀಡಿದ ದೂರನ್ನು ಆಧರಿಸಿ ಪೊಲೀಸರು ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿಕೊಂಡಿದ್ದಾರೆಂದು ‘ದಿ ವೈರ್’ ಸುದ್ದಿಜಾಲತಾಣ ವರದಿ ಮಾಡಿದೆ.

ಕಾನೂನು ಬಾಹಿರವಾಗಿ ನಡೆದಿದೆಯೆನ್ನಲಾದ ಮತಾಂತರ ಚಟುವಟಿಕೆಗಳಲ್ಲಿ ಸ್ಯಾಮ್ ಹಿಗ್ಗಿನ್ಬಾಥಮ್ ಕೃಷಿ ವಿವಿಯ ಕುಲಪತಿ ಜೆಟ್ಟಿ ಎ. ಓಲಿವರ್, ಉಪಕುಲಪತಿ ರಾಜೇಂದ್ರ ಬಿ.ಲಾಲ್ ಹಾಗೂ ಆಡಳಿತಾಧಿಕಾರಿ ವಿನೋದ್ ಬಿ.ಲಾ ಅವರ ಪಾತ್ರವಿರುವುದು ಬೆಳಕಿಗೆ ಬಂದಿದೆ ಎಂದು ತನಿಖಾಧಿಕಾರಿ ಅಮಿತ್ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ಗಳಾದ 153ಎ ( ಧರ್ಮದ ಆಧಾರದಲ್ಲಿ ವಿಭಿನ್ನ ಗುಂಪುಗಳ ನಡುವೆ ವೈರತ್ವಕ್ಕೆ ಪ್ರಚೋದನೆ), 506 (ಕ್ರಿಮಿನಲ್ ಬೆದರಿಕೆ),420 (ವಂಚನೆ), 467 ಹಾಗೂ 468 (ಫೋರ್ಜರಿ, ವಂಚನೆ) ಮತ್ತು ಉತ್ತರಪ್ರದೇಶದ 2021ರ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಉತ್ತರಪ್ರದೇಶದ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆಯಡಿ ಆರೋಪಿಗಳಿಗೆ ಒಂದರಿಂದ ಐದು ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ಕನಿಷ್ಠ 15 ಸಾವಿರ ರೂ. ದಂಡ ವಿಧಿಸಬಹುದಾಗಿದೆ.

Similar News