ಭ್ರಷ್ಟಾಚಾರ ಪ್ರಕರಣ: ಒಂದು ವರ್ಷದ ಬಳಿಕ ಜೈಲಿನಿಂದ ಹೊರಬಂದ ಅನಿಲ್ ದೇಶಮುಖ್‌

Update: 2022-12-28 16:27 GMT

ಮುಂಬೈ,ಡಿ.28: ಸಿಬಿಐ ದಾಖಲಿಸಿದ್ದ ಭ್ರಷ್ಟಾಚಾರ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಗೃಹಸಚಿವ ಅನಿಲ್ ದೇಶಮುಖ್ (Anil Deshmukh) ಅವರಿಗೆ ಜಾಮೀನು ಮಂಜೂರು ಮಾಡಿರುವ ಆದೇಶದ ಮೇಲಿನ ತನ್ನ ತಡೆಯಾಜ್ಞೆಯನ್ನು ವಿಸ್ತರಿಸಲು ಬಾಂಬೆ ಉಚ್ಚ ನ್ಯಾಯಾಲಯವು ಮಂಗಳವಾರ ನಿರಾಕರಿಸಿದೆ. ಹೀಗಾಗಿ ದೇಶಮುಖ್ ಒಂದು ವರ್ಷದ ಬಳಿಕ ಕೊನೆಗೂ ಇಲ್ಲಿಯ ಆರ್ಥರ್ ರೋಡ್ ಜೈಲಿನಿಂದ ಬುಧವಾರ ಬಿಡುಗಡೆಗೊಂಡಿದ್ದಾರೆ.

ನ್ಯಾ.ಎಂ.ಎಸ್.ಕಾರ್ಣಿಕ್ ಅವರು ಡಿ.12ರಂದು ಎನ್‌ಸಿಪಿ ನಾಯಕ ದೇಶಮುಖ (73) ಅವರಿಗೆ ಜಾಮೀನು ಮಂಜೂರು ಮಾಡಿದ್ದರಾದರೂ ಅದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಿಬಿಐ ಕಾಲಾವಕಾಶ ಕೋರಿದ್ದರಿಂದ ತನ್ನ ಆದೇಶವನ್ನು 10 ದಿನಗಳ ಅವಧಿಗೆ ತಡೆಹಿಡಿದಿದ್ದರು.
‘ದೇಶಮುಖ್ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿತ್ತು ಎನ್ನುವುದು ಸಾಬೀತಾಗಿದೆ. ನಾವು ಅವರ ಪ್ರಕರಣವನ್ನು ಜನರ ಬಳಿಗೆ ಕೊಂಡೊಯ್ಯುತ್ತೇವೆ ಮತ್ತು ಅವರಿಗೆ ಅನ್ಯಾಯದ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸುತ್ತೇವೆ ’ಎಂದು ಎನ್‌ಸಿಪಿಯ ಮುಖ್ಯ ವಕ್ತಾರ ಮಹೇಶ ತಾಪ್ಸೆ ಸುದ್ದಿಗಾರರಿಗೆ ತಿಳಿಸಿದರು.

ಸಿಬಿಐ ದೇಶಮುಖ ಅವರಿಗೆ ಜಾಮೀನು ಆದೇಶದ ವಿರುದ್ಧ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿಯನ್ನು ಸಲ್ಲಿಸಿದೆಯಾದರೂ ರಜೆಗಾಗಿ ನ್ಯಾಯಾಲಯವನ್ನು ಮುಚ್ಚಿರುವುದರಿಂದ ಜನವರಿ 2023ರಲ್ಲಿ ಅದರ ವಿಚಾರಣೆ ನಡೆಯಲಿದೆ.

Similar News