ಬಯಾಲಾಜಿಕಲ್, ಭಾರತ್ ಬಯೊಟೆಕ್ ಬಳಿ 25 ಕೋ.ಟಿ ಡೋಸ್ ಕೋವಿಡ್ ಲಸಿಕೆ ದಾಸ್ತಾನು

Update: 2022-12-28 16:40 GMT

ಹೈದರಾಬಾದ್,ಡಿ.28: ಹೈದರಾಬಾದ್ನ ಎರಡು ಪ್ರಮುಖ ಲಸಿಕೆ ತಯಾರಿಕೆ ಕಂಪನಿಗಳಾದ ಬಯಾಲಾಜಿಕಲ್ ಇ ಲಿಮಿಟೆಡ್ ಮತ್ತು ಭಾರತ ಬಯೊಟೆಕ್ ಬಳಿ ಒಟ್ಟು ಸುಮಾರು 25 ಕೋ.ಡೋಸ್ಗಳಷ್ಟು ಕೋವಿಡ್ ಲಸಿಕೆ ದಾಸ್ತಾನಿದೆ. ಇವು ಬೇಡಿಕೆಗಳು ಬಂದಾಗ ರವಾನೆಗೆ ಸಿದ್ಧವಾಗಿವೆ.

ಬಯಾಲಾಜಿಕಲ್ ಇ ಕೊರ್ಬೆವ್ಯಾಕ್ಸ್ ಲಸಿಕೆಯ 20 ಕೋ.ಡೋಸ್ಗಳನ್ನು ಮತ್ತು ಭಾರತ ಬಯೊಟೆಕ್ ಕೋವ್ಯಾಕ್ಸಿನ್ನ 5 ಕೋ.ಡೋಸ್ಗಳನ್ನು ದಾಸ್ತಾನಿನಲ್ಲಿ ಹೊಂದಿವೆ ಎಂದು ಆಯಾ ಕಂಪನಿಗಳ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ. ಬಯಾಲಾಜಿಕಲ್ ಇ ಒಟ್ಟು 30 ಕೋ.ಡೋಸ್ ಕೊರ್ಬೆವ್ಯಾಕ್ಸ್ ಲಸಿಕೆಯನ್ನು ತಯಾರಿಸಿದ್ದು,‌ ಈ ಪೈಕಿ 10 ಕೋ.ಡೋಸ್ಗಳನ್ನು ಮಾರ್ಚ್ 22ರಲ್ಲಿ ಕೇಂದ್ರ ಸರಕಾರಕ್ಕೆ ಪೂರೈಸಿತ್ತು.

ಕೊರ್ಬೆವ್ಯಾಕ್ಸ್ ಲಸಿಕೆಯನ್ನು ಟೆಕ್ಸಾಸ್ನ ಚಿಲ್ಡ್ರನ್ಸ್ ಹಾಸ್ಪಿಟಲ್ ಸೆಂಟರ್ ಫಾರ್ ವ್ಯಾಕ್ಸಿನ್ ಡೆವಲಪ್ಮೆಂಟ್ ಮತ್ತು ಹ್ಯೂಸ್ಟನ್ನ ಬೇಲರ್ ಕಾಲೇಜ್ ಆಫ್ ಮೆಡಿಸಿನ್ ಸಹಭಾಗಿತ್ವದಲ್ಲಿ ಅಭಿವೃದ್ಧಿಗೊಳಿಸಲಾಗಿದೆ.

 ಭವಿಷ್ಯದ ಬೇಡಿಕೆಗಳ ಎಂಟು ದಿನಗಳಲ್ಲಿ ಹೆಚ್ಚುವರಿ ಲಸಿಕೆ ಪೂರೈಕೆಯನ್ನು ಕಂಪನಿಯು ಆರಂಭಿಸಲಿದೆ ಮತ್ತು ಪ್ರತಿ ತಿಂಗಳು ಅಂದಾಜು 10 ಕೋ.ಡೋಸ್ಗಳನ್ನು ತಯಾರಿಸಲು ಮತ್ತು ಪೂರೈಸಲು ಸಮರ್ಥವಾಗಿದೆ ಎಂದು ಬಯಾಲಾಜಿಕಲ್ ಇ ಲಿ.ನ ಕಾರ್ಯನಿರ್ವಾಹಕ ಉಪಾಧ್ಯಕ್ಷ (ತಯಾರಿಕೆ) ಡಾ.ವಿಕ್ರಮ ಪರಡ್ಕರ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಭಾರತ ಬಯೊಟೆಕ್ ಬಳಿ ಐದು ಕೋ.ಗೂ ಅಧಿಕ ಡೋಸ್ ಲಸಿಕೆ ಸಿದ್ಧಸ್ಥಿತಿಯಲ್ಲಿ ಲಭ್ಯವಿದೆ ಮತ್ತು 20 ಕೋ.ಡೋಸ್ಗೂ ಅಧಿಕ ಡ್ರಗ್ ಸಬ್ಸ್ಟನ್ಸ್ನ್ನು ಹೊಂದಿದೆ. ಬೇಡಿಕೆಯನ್ನು ಪೂರೈಸಲು ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯವನ್ನೂ ಹೊಂದಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.
ಕೋವ್ಯಾಕ್ಸಿನ್ ಅನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆಯ ಸಹಭಾಗಿತ್ವದಲ್ಲಿ ಅಭಿವೃದ್ಧಿಗೊಳಿಸಲಾಗಿದೆ.

Similar News