ವಲಸೆ ಮತದಾರರಿಗೆ ಹಕ್ಕು ಚಲಾಯಿಸಲು ವಿನೂತನ ಆರ್ವಿಎಂ ಮತಯಂತ್ರ: ಚುನಾವಣಾ ಆಯೋಗ ಸಿದ್ಧತೆ

Update: 2022-12-29 15:45 GMT

ಹೊಸದಿಲ್ಲಿ,ಡಿ.29: ದೇಶದಲ್ಲಿನ ವಲಸೆ ಕಾರ್ಮಿಕರು ಮತದಾನ ಮಾಡುವುದಕ್ಕೆ ನೆರವಾಗುವಂತಹ ದೂರಗಾಮಿ ವಿದ್ಯುನ್ಮಾನ ಮತಯಂತ್ರ(ರಿಮೋಟ್ ಇಲೆಕ್ಟ್ರಾನಿಕ್ ವೋಟಿಂಗ್ ಮೆಶಿನ್)ದ ಮೂಲಮಾದರಿಯನ್ನು ಭಾರತೀಯ ಚುನಾವಣಾ ಆಯೋಗ (ECI)ವು ಅಭಿವೃದ್ಧಿಪಡಿಸಿದೆ. ಜನವರಿ 16ರಂದು ನಡೆಯಲಿರುವ ಈ ಮಾದರಿ ಆರ್ವಿಎಂ ಯಂತ್ರದ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಳ್ಳುವಂತೆ ಅದು ರಾಜಕೀಯ ಪಕ್ಷಗಳಿಗೆ ಆಹ್ವಾನ ನೀಡಿದೆ.

ವಲಸೆ ಶ್ರಮಿಕ ವರ್ಗವು ತಮ್ಮ ಮತಗಳನ್ನು ಚಲಾಯಿಸಲು ನೆರವಾಗುವ ಹಾಗೂ ಮತದಾನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಆರ್ವಿಎಂ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಮತಯಂತ್ರದ ಪರಿಣಾಮಕಾರಿತ್ವವನ್ನು ಪರಿಶೀಲಿಸಲು ಚುನಾವಣಾ ಆಯೋಗವು ಸಕಲ ಏರ್ಪಾಡುಗಳನ್ನು ಮಾಡುತ್ತಿದೆ.

ಒಂದೇ ರಿಮೋಟ್ ಇವಿಎಂ ಮೂಲಕ ವಿವಿಧ ಕ್ಷೇತ್ರಗಳಿಗೆ ಮತಚಲಾಯಿಸಬಹುದಾಗಿದೆ. ಸಾರ್ವಜನಿಕ ರಂಗದ ಕಂಪೆನಿಯೊಂದು ಅಭಿವೃದ್ಧಿಪಡಿಸಿರುವ ಈ ಬಹುಕ್ಷೇತ್ರೀಯ ಆರ್ವಿಎಂ ಅನ್ನು ಅಭಿವೃದ್ಧಿಪಡಿಸಿದೆ. ಇಂತಹ ಒಂದು ಆರ್ವಿಎಂ ಮೂಲಕ 72ರಷ್ಟು ಕ್ಷೇತ್ರಗಳಿಗೆ ಮತ ಚಲಾಯಿಸಬಹುದಾಗಿದೆ.

ಮತದಾರರು ದೇಶದ ಯಾವುದೇ ಭಾಗಕ್ಕೆ ವಲಸೆ ಹೋಗಿದ್ದರೂ, ಅಲ್ಲಿಂದಲೇ ಅವರು ಮತದಾರ ಪಟ್ಟಿಯಲ್ಲಿ ತಾವು ನೋಂದಣಿಗೊಂಡಿರುವ ಕ್ಷೇತ್ರದಲ್ಲಿ ಆರ್ವಿಎಂ ಮೂಲಕ ಮತಚಲಾಯಿಸಬಹುದಾಗಿದೆ.

‘‘ಯುವಜನತೆ ಹಾಗೂ ನಗರಪ್ರದೇಶಗಳ ಜನತೆ ಮತದಾನದ ಬಗ್ಗೆ ನಿರಾಸಕ್ತಿ ವಹಿಸುತ್ತಿರುವದನ್ನು ಚುನಾವಣಾ ಆಯೋಗವು ಗಮನಕ್ಕೆ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಆರ್ವಿಎಂನಂತಹ ದೂರಗಾಮಿ ಮತ ದಾನ ವ್ಯವಸ್ಥೆಯು ಚುನಾವಣಾ ಪ್ರಜಾಸತ್ತೆಯಲ್ಲಿ ಪ್ರಜೆಗಳ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲಿದೆ’’ ಎಂದು ಮುಖ್ಯ ಚುನಾವಣಾಧಿಕಾರಿ ರಾಜೀವ್ ಕುಮಾರ್ ತಿಳಿಸಿದ್ದಾರೆ.

Similar News