ಶ್ರೀರಾಮ, ಹನುಮಾನ್‌ ಮೇಲಿನ ಭಕ್ತಿ ಬಿಜೆಪಿ ಪಕ್ಷಕ್ಕೆ ಮಾತ್ರ ಇರುವ ಹಕ್ಕುಸ್ವಾಮ್ಯವೇನಲ್ಲ: ಕಿಡಿಕಾರಿದ ಉಮಾ ಭಾರತಿ

Update: 2022-12-30 12:07 GMT

ಭೋಪಾಲ್:‌ ಸುತ್ತಲೂ ನೋಡಿ ನಂತರ ಯಾವ ಪಕ್ಷಕ್ಕೆ ಮತ ನೀಡಬೇಕೆಂದು ನಿರ್ಧರಿಸಬೇಕೆಂದು ಪಕ್ಷ ಕಾರ್ಯಕರ್ತರಿಗೆ ಹೇಳಿದ ಮರುದಿನವೇ ಹಿರಿಯ ನಾಯಕಿ ಉಮಾ ಭಾರತಿ ತಮ್ಮ ಇನ್ನೊಂದು ಹೇಳಿಕೆಯಿಂದ ಪಕ್ಷ ನಾಯಕತ್ವಕ್ಕೆ ತಲೆನೋವು ತಂದಿದ್ದಾರೆ.

ಶ್ರೀ ರಾಮ  ಮತ್ತು ಹನುಮಾನ್‌ ಮೇಲೆ ಭಕ್ತಿ ಹೊಂದುವುದು ಬಿಜೆಪಿಯ ಹಕ್ಕುಸ್ವಾಮ್ಯವಲ್ಲ ಎಂದು ಉಮಾ ಭಾರತಿ ಹೇಳಿದ್ದಾರೆ. ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ ನಾಥ್‌ ತಮ್ಮ ತವರು ರಾಜ್ಯದಲ್ಲಿ ಹನುಮಾನ್‌ ದೇವಳ ನಿರ್ಮಿಸುತ್ತಿರುವ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಉಮಾ ಭಾರತಿ ಮೇಲಿನಂತೆ ಹೇಳಿದ್ದಾರೆ.

ಬಿಜೆಪಿ ತನ್ನನ್ನು ಬದಿಗೆ ಸರಿಸುತ್ತಿದೆ ಎಂದು ಪಕ್ಷದ ಕುರಿತು ಈಗಾಗಲೇ ಬಹಳಷ್ಟು ಅಸಮಾಧಾನ ಹೊಂದಿರುವ ಉಮಾ ಭಾರತಿ, ಪಕ್ಷದ ಸಂಸದೆ ಪ್ರಜ್ಞಾ ಸಿಂಗ್‌ ಠಾಕುರ್‌, ಹಿಂದುಗಳಿಗೆ ಮನೆಗಳಲ್ಲಿ ಶಸ್ತ್ರ ಇರಿಸಲು ಕರೆ ನೀಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.

"ವನವಾಸದ ವೇಳೆಯೂ ಶಸ್ತ್ರತ್ಯಾಗ ನಡೆಸುವುದಿಲ್ಲ ಎಂಬ ಪ್ರತಿಜ್ಞೆಯನ್ನು ಶ್ರೀರಾಮ ಕೂಡ ಮಾಡಿದ್ದ," ಎಂದು ಹೇಳಿದ ಉಮಾ ಭಾರತಿ, ಶಸ್ತ್ರ ಹೊಂದುವುದು ತಪ್ಪಲ್ಲ ಆದರೆ ಹಿಂಸಾತ್ಮಕ ಚಿಂತನೆಗಳನ್ನು ಹೊಂದುವುದು ತಪ್ಪು," ಎಂದರು.

ಪ್ರಜ್ಞಾ ಠಾಕುರ್‌ ತಮ್ಮ ವಿವಾದಾತ್ಮಕ ಹೇಳಿಕೆ ನೀಡಿದ್ದ ಛಿಂದ್ವಾರಾದಲ್ಲಿ ಉಮಾ ಭಾರತಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲೆಂದು ಬಂದಿದ್ದರು.

ಪಠಾಣ್‌ ವಿವಾದದ ಕುರಿತು ಪ್ರತಿಕ್ರಿಯಿಸಿದ ಉಮಾ ಭಾರತಿ, "ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ದೃಶ್ಯಗಳನ್ನು ತೆಗೆದುಹಾಕಬೇಕು, ಯಾವುದೇ ಬಣ್ಣಕ್ಕೆ ಅವಮಾನವನ್ನು ಭಾರತ ಸಹಿಸುವುದಿಲ್ಲ., ಕೇಸರಿ ಭಾರತೀಯ ಸಂಸ್ಕೃತಿಯ ಅಸ್ಮಿತೆಯಾಗಿದೆ, ಆಕ್ಷೇಪಾರ್ಹ ದೃಶ್ಯಗಳನ್ನು ಸೆನ್ಸಾರ್‌ ಮಂಡಳಿ ತಕ್ಷಣ ತೆಗೆದುಹಾಕಬೇಕು," ಎಂದರು.

Similar News