ಏಷ್ಯಾದ ಅತ್ಯಂತ ಕಳಪೆ ಕರೆನ್ಸಿಯಾಗಿ ವರ್ಷಾಂತ್ಯದ ವಹಿವಾಟು ಮುಗಿಸಿದ ಭಾರತೀಯ ರೂಪಾಯಿ

Update: 2022-12-30 17:54 GMT

ಹೊಸದಿಲ್ಲಿ: ಭಾರತೀಯ ರೂಪಾಯಿ 2022ರಲ್ಲಿ ಏಷ್ಯಾದ ಅತಿ ಕಳಪೆ ಕರೆನ್ಸಿಯಾಗಿ ವರ್ಷಾಂತ್ಯದ ವಹಿವಾಟು ಮುಗಿಸಿದೆ ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ. 

ಕಳೆದ ವರ್ಷದ ಅಂತ್ಯಕ್ಕೆ ಹೋಲಿಸಿದರೆ ಭಾರತೀಯ ರೂಪಾಯಿಯು  11.3% ರಷ್ಟು ಕುಸಿದಿದೆ. ಇದು 2013ರ ನಂತರದ ಅತಿ ಹೆಚ್ಚಿನ ಮೌಲ್ಯ ಕುಸಿತವಾಗಿದೆ.  ಹಣದುಬ್ಬರವನ್ನು ತಡೆಯಲು ಅಮೆರಿಕದ ಫೆಡರಲ್ ಬ್ಯಾಂಕ್ ವಿತ್ತೀಯ ನೀತಿಯನ್ನು ಬಿಗಿಗೊಳಿಸುವುದರಿಂದ ಡಾಲರ್‌ ಮೌಲ್ಯದಲ್ಲಿ ಭಾರೀ ಹೆಚ್ಚಳವಾಗಿರುವುದು ಕೂಡಾ  ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.

ವರ್ಷಾಂತ್ಯದ ವಹಿವಾಟಿನ ಕೊನೆಯಲ್ಲಿ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 82.72 ಆಗಿದ್ದು, ಈ ಮೌಲ್ಯವು 2021ರಲ್ಲಿ 74.33 ಇತ್ತು.  

ಗುರುವಾರ ಭಾರತೀಯ ರಿಸರ್ವ್ ಬ್ಯಾಂಕ್‌ನ ಅಂಕಿಅಂಶಗಳು ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಹೆಚ್ಚಿನ ಸರಕುಗಳ ಬೆಲೆ ಮತ್ತು ದುರ್ಬಲ ರೂಪಾಯಿಯ ಹಿನ್ನೆಲೆಯಲ್ಲಿ ಭಾರತದ ಚಾಲ್ತಿ ಖಾತೆ ಕೊರತೆಯು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ವಿಸ್ತರಿಸಿದೆ ಎಂದು ತೋರಿಸಿದೆ. ಒಂದು ದೇಶವು ಆಮದು ಮಾಡಿಕೊಳ್ಳುವ ಸರಕು ಮತ್ತು ಸೇವೆಗಳ ಮೌಲ್ಯವು ಅದು ರಫ್ತು ಮಾಡುವ ಉತ್ಪನ್ನಗಳ ಮೌಲ್ಯವನ್ನು ಮೀರಿದಾಗ ಈ ಕೊರತೆ ಉಂಟಾಗುತ್ತದೆ.

ಉಕ್ರೇನ್ ಮೇಲೆ ರಷ್ಯಾ ಆಕ್ರಮಣ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲೆ ಬೆಲೆ ಹೆಚ್ಚಳ ಕೂಡ ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರಿದೆ. 2023ರಲ್ಲಿ ರೂಪಾಯಿ ಮೌಲ್ಯ ವೃದ್ಧಿಯಾಗುವ ನಿರೀಕ್ಷೆ ಇದ್ದು, ಸರಕುಗಳ ಬೆಲೆ ಇಳಿಕೆಯ ನಿರೀಕ್ಷೆಯೊಂದಿಗೆ ವಿದೇಶಿ ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಸಾಧ್ಯತೆ ಇದೆ ಎಂದು ‘Reuters’ ಸುದ್ದಿ ಸಂಸ್ಥೆ ವರದಿ ಮಾಡಿದೆ.

2023 ರ ಮೊದಲ ತ್ರೈಮಾಸಿಕದಲ್ಲಿ ರೂಪಾಯಿ ಮೌಲ್ಯವು ಡಾಲರ್ ವಿರುದ್ಧ 81.50 ರಿಂದ 83.50 ವ್ಯಾಪ್ತಿಯಲ್ಲಿ ವಹಿವಾಟು ನಡೆಸಲಿದೆ ಎಂದು ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ ಎಂದು Reuters ವರದಿ ಮಾಡಿದೆ. ಆದರೆ ಜಾಗತಿಕ ಆರ್ಥಿಕತೆಗಳಲ್ಲಿನ ಸಂಭವನೀಯ ಹಿಂಜರಿತವು ಭೌಗೋಳಿಕ ರಾಜಕೀಯ ಸನ್ನಿವೇಶಕ್ಕೆ ಸಂಬಂಧಿಸಿದ್ದು, ಮಾರುಕಟ್ಟೆಗಳ ದಿಕ್ಕನ್ನು ಅಳೆಯುವುದು ಕಷ್ಟಕರವಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

Similar News