2022ರಲ್ಲಿ ದೇಶದಲ್ಲಿ ಮಾರಾಟವಾದ ಕಾರುಗಳು ಎಷ್ಟು ಗೊತ್ತೇ?

Update: 2023-01-02 16:12 GMT

ಹೊಸದಿಲ್ಲಿ: ದೇಶದಲ್ಲಿ 2022ರಲ್ಲಿ ಸುಮಾರು 38 ಲಕ್ಷ ಕಾರುಗಳು ಮಾರಾಟವಾಗಿದ್ದು, ಇದುವರೆಗಿನ ಸರ್ವಕಾಲಿಕ ದಾಖಲೆ ಇದಾಗಿದೆ. ಕಾರು ಉತ್ಪಾದಕ ಕಂಪನಿಗಳು ಇದೀಗ ಹಣದುಬ್ಬರ ಹಾಗೂ ಬಡ್ಡಿದರ ಏರಿಕೆಯ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿಭಾಯಿಸುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟು ಕಾರುಗಳ ಮಾರಾಟ ಶೇಕಡ 33ರಷ್ಟು ಹೆಚ್ಚಿದೆ. ಎಸ್‌ಯುವಿಗಳಿಗೆ ಭಾರಿ ಬೇಡಿಕೆ ಕಂಡುಬಂದಿದೆ. ಆದರೆ ಈ ವರ್ಷ ಕಾರು ಮಾರಾಟ ಏರಿಕೆ ಪ್ರಮಾಣ ಒಂದಂಕಿಗೆ ಇಳಿಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ದೇಶದಲ್ಲಿ 2021ರಲ್ಲಿ 31 ಲಕ್ಷ ಕಾರುಗಳು ಮಾರಾಟವಾಗಿದ್ದರೆ, 2022ರಲ್ಲಿ ಈ ಸಂಖ್ಯೆ ಏಳು ಲಕ್ಷದಷ್ಟು ಹೆಚ್ಚಿದೆ. ಇದು 2018ರಲ್ಲಿ ದಾಖಲಾಗಿದ್ದ 34 ಲಕ್ಷ ಕಾರುಗಳ ಮಾರಾಟ ದಾಖಲೆಗಳನ್ನೂ ಅಳಿಸಿ ಹಾಕಿದೆ. ಟಾಟಾ ಮೋಟರ್ಸ್‌, ಹ್ಯೂಂಡೈ, ಟೊಯೋಟಾ ಮತ್ತು ಸ್ಕೋಡಾ ಇದುವರೆಗಿನ ಅತ್ಯುತ್ತಮ ಸಾಧನೆಯನ್ನು 2022ರಲ್ಲಿ ಪ್ರದರ್ಶಿಸಿವೆ. ಆದರೆ ಸೆಮಿಕಂಡಕ್ಟರ್‌ಗಳ ಕೊರತೆಯಿಂದಾಗಿ ಉತ್ಪಾದನೆ ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ಮಾರುತಿ ಮಾತ್ರ 2018ರ ಮಟ್ಟವನ್ನು ತಲುಪಲು ಸಾಧ್ಯವಾಗಿಲ್ಲ.

2022ರಲ್ಲಿ ದೇಶದಲ್ಲಿ ಪ್ರಿಮಿಯಂ ವಾಹನಗಳ ಅಂದರೆ 10 ಲಕ್ಷ ರೂಪಾಯಿಗಿಂತ ಅಧಿಕ ಮೌಲ್ಯದ ವಾಹನಗಳ ಮಾರಾಟ ಹೆಚ್ಚಿದೆ. ಕಳೆದ ವರ್ಷ ಮಾರಾಟವಾದ ಒಟ್ಟು ಕಾರುಗಳ ಪೈಕಿ ಪ್ರಿಮಿಯಂ ಕಾರುಗಳ ಪಾಲು ಶೇಕಡ 16ರಷ್ಟು ಇದ್ದರೆ, ಈ ವರ್ಷ ಈ ಪ್ರಮಾಣ ಶೇಕಡ 41ಕ್ಕೆ ಹೆಚ್ಚಿದೆ. 2019ರಲ್ಲಿ ವಾಹನ ಉದ್ಯಮ ಕುಂಠಿತಗೊಂಡಿದ್ದು, ಉತ್ಪಾದನಾ ವೆಚ್ಚ ಹೆಚ್ಚಳ ಹಾಗೂ ಸೆಮಿಕಂಡಕ್ಟರ್‌ಗಳ ಕೊರತೆ ಇದಕ್ಕೆ ಪ್ರಮುಖ ಕಾರಣವಾಗಿತ್ತು.

Similar News