ಅಪರಾಹ್ನ 3ರಿಂದ ರಾತ್ರಿ 9ರವರೆಗೆ ಭಾರತೀಯ ರಸ್ತೆಗಳು ಅತ್ಯಂತ ಅಪಾಯಕಾರಿ: ಸರಕಾರಿ ವರದಿ

Update: 2023-01-03 08:07 GMT

ಹೊಸದಿಲ್ಲಿ, ಜ.2: ಅಪರಾಹ್ನ 3ರಿಂದ ರಾತ್ರಿ 9 ಗಂಟೆಯವರೆಗಿನ ಸಮಯದಲ್ಲಿ ಭಾರತೀಯ ರಸ್ತೆಗಳು ಅತ್ಯಂತ ಅಪಾಯಕಾರಿ ಮತ್ತು ಮಾರಣಾಂತಿಕವಾಗಿವೆ. 2021ರಲ್ಲಿ ದಾಖಲಾದ ಒಟ್ಟು ರಸ್ತೆ ಅಪಘಾತಗಳ ಪೈಕಿ ಶೇ.40ರಷ್ಟು ಘಟನೆಗಳು ಆ ಸಮಯದಲ್ಲಿಯೇ ನಡೆದಿರುವುದನ್ನು ಸರಕಾರದ ದತ್ತಾಂಶಗಳ ವಿಶ್ಲೇಷಣೆಯು ಬಹಿರಂಗಗೊಳಿಸಿದೆ.

ಆದಾಗ್ಯೂ ಶೇ.10ಕ್ಕೂ ಕಡಿಮೆ ಅಪಘಾತಗಳೊಂದಿಗೆ ಮಧ್ಯರಾತ್ರಿ 12ರಿಂದ ಬೆಳಗಿನ 6 ಗಂಟೆಯವರೆಗಿನ ಸಮಯವು ಅತ್ಯಂತ ಸುರಕ್ಷಿತವಾಗಿದೆ ಎನ್ನುವುದನ್ನು ಈ ಅಂಕಿಅಂಶಗಳು ತೋರಿಸಿವೆ. ತಿಂಗಳುವಾರು ಅಂಕಿಅಂಶಗಳಂತೆ 2021 ಜನವರಿಯಲ್ಲಿ ಅತ್ಯಂತ ಹೆಚ್ಚಿನ ರಸ್ತೆ ಅಪಘಾತಗಳು ಸಂಭವಿಸಿದ್ದವು. 2021ರಲ್ಲಿ ಸಂಭವಿಸಿದ್ದ ಒಟ್ಟು ಅಪಘಾತಗಳ ಪೈಕಿ ಶೇ.40ರಷ್ಟು ಮಧ್ಯಾಹ್ನ 3ರಿಂದ ರಾತ್ರಿ 9 ಗಂಟೆಯ ನಡುವೆಯೇ ನಡೆದಿದ್ದವು

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಬಿಡುಗಡೆಗೊಳಿಸಿರುವ ‘ಭಾರತದಲ್ಲಿ ರಸ್ತೆ ಅಪಘಾತಗಳು-2021’ ವರದಿಯಂತೆ 2021ರಲ್ಲಿ ವರದಿಯಾಗಿದ್ದ ಒಟ್ಟು 4.12 ಲ.ರಸ್ತೆ ಅಪಘಾತಗಳ ಪೈಕಿ 1.58 ಲ.ಕ್ಕೂ ಅಧಿಕ ಘಟನೆಗಳು ಮಧ್ಯಾಹ್ನ 3ರಿಂದ ರಾತ್ರಿ 9 ಗಂಟೆಯ ನಡುವೆ ಸಂಭವಿಸಿದ್ದವು.

2021ರಲ್ಲಿ ಸಂಜೆ 6ರಿಂದ ರಾತ್ರಿ 9ರವರೆಗಿನ ಮಧ್ಯಂತರ ಅವಧಿಯಲ್ಲಿ ಗರಿಷ್ಠ ಸಂಖ್ಯೆಯ ಅಪಘಾತಗಳು ದಾಖಲಾಗಿದ್ದು,ದೇಶದಲ್ಲಿಯ ಒಟ್ಟು ಅಪಘಾತಗಳ ಪೈಕಿ ಶೇ.21ರಷ್ಟು ಅಪಘಾತಗಳು ಈ ಅವಧಿಯಲ್ಲಿಯೇ ನಡೆದಿದ್ದವು. ಇದು ಕಳೆದ ಐದು ವರ್ಷಗಳಲ್ಲಿ ಕಂಡು ಬಂದಿರುವ ಪ್ರವೃತ್ತಿಗೆ ಅನುಗುಣವಾಗಿದೆ. ಮಧ್ಯಾಹ್ನ 3ರಿಂದ ಸಂಜೆ 6 ಗಂಟೆಯವರೆಗಿನ ಅವಧಿಯು ಶೇ.18ರಷ್ಟು,ಎರಡನೇ ಗರಿಷ್ಠ ಸಂಖ್ಯೆಯಲ್ಲಿ ಅಪಘಾತಗಳಿಗೆ ಸಾಕ್ಷಿಯಾಗಿತ್ತು.

2021ರಲ್ಲಿ 4,996 ಅಪಘಾತಗಳು ಸಂಭವಿಸಿದ್ದ ಸಮಯವು ಗೊತ್ತಾಗಿಲ್ಲ ಎಂದು ವರದಿಯು ಹೇಳಿದೆ.

 ಇದನ್ನೂ ಓದಿ: ಛತ್ತೀಸ್‌ಗಡದಲ್ಲಿ ಗುಂಪಿನಿಂದ ಚರ್ಚ್‌ಗೆ ದಾಳಿ: ಹಿರಿಯ ಪೊಲೀಸ್ ಅಧಿಕಾರಿಯ ತಲೆಗೆ ಗಾಯ

Similar News