ದಿಲ್ಲಿ ಮಹಿಳೆ ಕಾರಿನಡಿ ಸಿಲುಕಿ ಎಳೆದೊಯ್ಯಲ್ಪಟ್ಟಾಗ ಪರಾರಿಯಾಗಿದ್ದ ಸ್ನೇಹಿತೆ: ವರದಿ

Update: 2023-01-03 07:35 GMT

ಹೊಸದಿಲ್ಲಿ: ದಿಲ್ಲಿಯ  ಅಂಜಲಿ ಸಿಂಗ್ ಅವರು ಕಾರಿನಡಿ ಸಿಲುಕಿ ಎಳೆದೊಯ್ಯಲ್ಪಟ್ಟು  ಸಾವನ್ನಪ್ಪಿದ ನಂತರ ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಂಜಲಿ  ಸ್ಕೂಟರ್ ಅಪಘಾತವಾದಾಗ ಅಂಜಲಿ  ಒಬ್ಬಂಟಿಯಾಗಿರಲಿಲ್ಲ. ಅಂಜಲಿ ಜೊತೆಗೆ ಅವರ ಸ್ನೇಹಿತೆ ಇದ್ದಳು  ಎಂದು ಮೂಲಗಳು ತಿಳಿಸಿವೆ.

ಹೊಸ ವರ್ಷದ ಮುಂಜಾನೆ ನಡೆದ ಆಘಾತಕಾರಿ  ಘಟನೆಗೆ  ಹೊಸ ಟ್ವಿಸ್ಟ್‌ ಲಭಿಸಿದ್ದು , ಮಾರುತಿ ಬಲೆನೊ ಕಾರು ಅಂಜಲಿ  ಸ್ಕೂಟರ್‌ಗೆ ಡಿಕ್ಕಿ ಹೊಡೆದು 13 ಕಿ.ಮೀ. ಎಳೆದುಕೊಂಡು ಹೋದ  ಘಟನೆಯ ವೇಳೆ  20 ವರ್ಷದ ಅಂಜಲಿ ತನ್ನ ಸ್ನೇಹಿತೆ ನಿಧಿಯೊಂದಿಗೆ ಇದ್ದರು ಎಂದು  ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಅಪಘಾತದಲ್ಲಿ ಸ್ನೇಹಿತೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಕೆ ಸ್ಥಳದಿಂದ ಪರಾರಿಯಾಗಿದ್ದಾಳು ಎಂದು ಮೂಲಗಳು ತಿಳಿಸಿವೆ.

 ಅಂಜಲಿಯ ಕಾಲು, ಕಾರಿನ ಆಕ್ಸಲ್‌ಗೆ ಸಿಕ್ಕಿಹಾಕಿಕೊಂಡಿದ್ದು, ಕಾರಿನಲ್ಲಿದ್ದ ಆರೋಪಿಗಳು ಆಕೆಯನ್ನು ಆಕೆಯ ವಾಹನದ ಜೊತೆಗೆ ಎಳೆದುಕೊಂಡು ಹೋಗಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಪರಾರಿಯಾಗಿದ್ದ ಮಹಿಳೆಯನ್ನು ಪತ್ತೆ ಹಚ್ಚಿದ್ದು, ತನಿಖೆಯ ಭಾಗವಾಗಿ ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಹೊಸ ವರ್ಷದ  ರಾತ್ರಿ ಏನಾಯಿತು ಎಂಬುದರ ಕುರಿತು ಹೆಚ್ಚಿನ ಸ್ಪಷ್ಟತೆ ಪಡೆಯಲು ಪೊಲೀಸರು ಮಾರ್ಗ ನಕ್ಷೆಯನ್ನು ಸಿದ್ಧಪಡಿಸುತ್ತಿದ್ದಾಗ ಹೊಸ ವಿಚಾರಗಳು ಮುನ್ನೆಲೆಗೆ ಬಂದವು. ಹೊಸ ವರ್ಷದ ಪಾರ್ಟಿಯಲ್ಲಿ ಭಾಗವಹಿಸಿದ ನಂತರ ಇಬ್ಬರು ಸ್ನೇಹಿತೆಯರು ಬೆಳಿಗ್ಗೆ 1.45 ಕ್ಕೆ ಹೋಟೆಲ್‌ನಿಂದ ಹೊರಟಿದ್ದಾರೆ ಎಂದು ಪೊಲೀಸರು  ಕಂಡುಕೊಂಡರು. ಸಿಸಿಟಿವಿ ಫೂಟೇಜ್‌ನಲ್ಲಿ ಇಬ್ಬರು ಮಹಿಳೆಯರು ಹೋಟೆಲ್‌ನಿಂದ ನಿರ್ಗಮಿಸುತ್ತಿರುವುದನ್ನು ತೋರಿಸುತ್ತದೆ. 

ಪಶ್ಚಿಮ ದಿಲ್ಲಿಯ ಸುಲ್ತಾನಪುರಿಯಲ್ಲಿ ಈ ದುರ್ಘಟನೆ ನಡೆದಿದೆ. ಅಪಘಾತದ ವೇಳೆ ಕಾರಿನಲ್ಲಿದ್ದ ಐವರು ಪಾನಮತ್ತರಾಗಿದ್ದಾಗಿ ಒಪ್ಪಿಕೊಂಡಿದ್ದಾರೆ. ಅಂಜಲಿಯನ್ನು ಎಳೆದೊಯ್ದಿರುವುದು ತಿಳಿಯದೆ ಗಾಬರಿಗೊಂಡು  ಕಾರು ಚಲಾಯಿಸಿದ್ದಾಗಿ  ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ.

ಕಾರು ಚಲಾಯಿಸುತ್ತಿದ್ದ  ದೀಪಕ್ ಖನ್ನಾ ಕಾರಿನಡಿ  "ಏನೋ ಸಿಕ್ಕಿಹಾಕಿಕೊಂಡಿದೆ" ಎಂದು ಭಾವಿಸಿ ಸ್ನೇಹಿತರ ಬಳಿ ಹೇಳಿದ್ದಾನೆ.ಅದನ್ನು ಸ್ನೇಹಿತರು ಇದನ್ನು ಅಲ್ಲಗಳೆದಿದ್ದರು.  ಕಾರು ಸುಮಾರು 13 ಕಿ.ಮೀ ದೂರದ ತನಕ 20 ವರ್ಷದ ಯುವತಿಯನ್ನು ರಸ್ತೆಯಲ್ಲಿ ಎಳೆದೊಯ್ದಿದೆ. ಕಾಂಜವಾಲಾದಲ್ಲಿ ಕಾರು ಯು-ಟರ್ನ್ ತೆಗೆದುಕೊಳ್ಳುತ್ತಿದ್ದಾಗ ಆರೋಪಿಗಳಲ್ಲಿ ಒಬ್ಬನಾದ ಮಿಥುನ್ ಗೆ ವಾಹನದ ಕೆಳಗೆ ಒಂದು ಕೈ ಕಾಣಿಸಿತು. ಒಮ್ಮೆ ಕಾರು ನಿಲ್ಲಿಸಿದಾಗ ಶವ ಕಳಚಿ ಬಿದ್ದಿತ್ತು. ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು  ತಿಳಿಸಿದ್ದಾರೆ.

Similar News