ಭೂ ಸ್ವಾಧೀನ ಪತ್ರಕ್ಕಾಗಿ ಮಣ್ಣಿನಲ್ಲಿ ಹೂತುಕೊಂಡು ಪ್ರತಿಭಟಿಸಿದ ರೈತ

Update: 2023-01-03 17:22 GMT

ಮುಂಬೈ,ಜ.3: ಮೂರು ವರ್ಷಗಳ ಹಿಂದೆ ಕಲ್ಯಾಣ ಯೋಜನೆಯಡಿ ತನಗೆ ಹಂಚಿಕೆಯಾಗಿದ್ದ ಜಮೀನಿನ ಸ್ವಾಧೀನ ಪತ್ರವನ್ನು ನೀಡದಿರುವುದನ್ನು ವಿರೋಧಿಸಿ ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯ ಕೃಷಿಕರೋರ್ವರು ತನ್ನನ್ನು ಭಾಗಶಃ ಮಣ್ಣಿನಲ್ಲಿ ಹುಗಿದುಕೊಂಡು ವಿಶಿಷ್ಟವಾಗಿ ಪ್ರತಿಭಟಿಸಿದ್ದಾರೆ.
‘2019ರಲ್ಲಿ ಕರ್ಮವೀರ ದಾದಾಸಾಹೇಬ್ ಗಾಯಕವಾಡ ಸಬಲೀಕರಣ ಸ್ವಾಭಿಮಾನ ಯೋಜನೆಯಡಿ ನಮಗೆ ಎರಡು ಎಕರೆ ಭೂಮಿಯನ್ನು ಹಂಚಿಕೆ ಮಾಡಲಾಗಿತ್ತು. ಆದರೆ ಈವರೆಗೂ ಭೂಸ್ವಾಧೀನ ಪತ್ರವನ್ನು ನೀಡಿಲ್ಲ. ಇದೇ ಕಾರಣದಿಂದ ನನ್ನನ್ನು ಸ್ವಯಂ ಹುಗಿದುಕೊಂಡು ಪ್ರತಿಭಟಿಸುತ್ತಿದ್ದೇನೆ ’ ಸುದ್ದಿಗಾರರೊಂದಿಗೆ ಮಾತನಾಡಿದ ಸುನಿಲ ಜಾಧವ್ ತಿಳಿಸಿದರು.ಭೂ ಸ್ವಾಧೀನ ಪತ್ರವು ಕೈಸೇರುವವರೆಗೆ ತನ್ನ ಪ್ರತಿಭಟನೆಯನ್ನು ಅಂತ್ಯಗೊಳಿಸಲು ಅವರು ನಿರಾಕರಿಸಿದರು.

ತಮ್ಮ ಬೇಡಿಕೆಗಳ ಬಗ್ಗೆ ಅಧಿಕಾರಿಗಳು ಮತ್ತು ಜನರ ಗಮನ ಸೆಳೆಯಲು ಪ್ರತಿಭಟನಾಕಾರರು ಆಗಾಗ್ಗೆ ವಿನೂತನ ಮಾರ್ಗಗಳನ್ನು ಅನುಸರಿಸುತ್ತಾರೆ. ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ಸಂದರ್ಭ ರೈತರು ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದ್ದರು.

ಅತ್ತ ಕೇರಳದಲ್ಲಿ ರಸ್ತೆಹೊಂಡಗಳ ವಿರುದ್ಧ ಪ್ರತಿಭಟನೆಯನ್ನು ದಾಖಲಿಸಲು ವ್ಯಕ್ತಿಯೋರ್ವ ನೀರಿನಿಂದ ತುಂಬಿದ್ದ ಹೊಂಡದಲ್ಲಿ ಸ್ನಾನ ಮಾಡಿದ್ದಲ್ಲದೆ,ಅದೇ ನೀರಿನಲ್ಲಿ ತನ್ನ ಬಟ್ಟೆಗಳನ್ನೂ ತೊಳೆದುಕೊಂಡಿದ್ದ ವೀಡಿಯೊ ವೈರಲ್ ಆಗಿತ್ತು. ಕಳೆದ ವರ್ಷ ಹೈದರಾಬಾದ್ನ ಆಸ್ಪತ್ರೆಯೊಂದರಲ್ಲಿ ಸೀಲಿಂಗ್ ಫ್ಯಾನ್ ತಮ್ಮ ಸಹೋದ್ಯೋಗಿಯ ಮೇಲೆ ಕಳಚಿ ಬಿದ್ದ ಬಳಿಕ ಕಿರಿಯ ವೈದ್ಯರು ಕರ್ತವ್ಯದ ಸಮಯದಲ್ಲಿ ಹೆಲ್ಮೆಟ್ ಧರಿಸಿಕೊಂಡು ಸಾಂಕೇತಿಕ ಪ್ರತಿಭಟನೆ ನಡೆಸಿದ್ದರು

Similar News