ಯುಎಪಿಎ ಅಡಿ ಬಂಧಿತ ಕಾಶ್ಮೀರಿ ಫೋಟೊಜರ್ನಲಿಸ್ಟ್‌ಗೆ ಜಾಮೀನು

Update: 2023-01-04 17:49 GMT

ಹೊಸದಿಲ್ಲಿ,ಜ.4: ಭಯೋತ್ಪಾದನೆ ಸಂಬಂಧಿತ ಆರೋಪಗಳಲ್ಲಿ ಅಕ್ಟೋಬರ್ 2021ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಬಂಧಿಸಲ್ಪಟ್ಟಿದ್ದ ಕಾಶ್ಮೀರದ ಫೋಟೊಜರ್ನಲಿಸ್ಟ್ ಮುಹಮ್ಮದ್ ಮನಾನ್ ದಾರ್ ಅವರು ಜಾಮೀನಿನಲ್ಲಿ ಮಂಗಳವಾರ ದಿಲ್ಲಿಯ ತಿಹಾರ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ಬಳಿ ದಾರ್ ವಿರುದ್ಧ ಸಾಕಷ್ಟು ಸಾಕ್ಷಾಧಾರಗಳು ಇಲ್ಲ ಎಂದು ಸೋಮವಾರ ಬೆಟ್ಟು ಮಾಡಿದ್ದ ದಿಲ್ಲಿ ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿತ್ತು.

ಮಂಗಳವಾರ ಬೆಳಿಗ್ಗೆ ದಾರ್ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಿದ್ದು,ವಕೀಲರ ಉಪಸ್ಥಿತಿಯಲ್ಲಿ ಕುಟುಂಬ ಸದಸ್ಯರು ಅವರನ್ನು ಬರಮಾಡಿಕೊಂಡರು. ತನ್ನ ಪತ್ರಕರ್ತ ವೃತ್ತಿಯನ್ನು ಮುಂದುವರಿಸಲು ದಾರ್ ಬಯಸಿದ್ದಾರೆ ಎಂದು ಸಂಬಂಧಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

ಕೇವಲ ಕಲ್ಪನೆಗಳು ಅಥವಾ ಅಪೂರ್ಣ ಸಾಕ್ಷಗಳು ದಾರ್ ವಿರುದ್ಧದ ಆರೋಪಗಳನ್ನು ಸಾಬೀತುಗೊಳಿಸಲು ಸಾಕಾಗಲಿಕ್ಕಿಲ್ಲ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶೈಲೇಂದ್ರ ಮಲಿಕ್ ತನ್ನ ಜಾಮೀನು ಆದೇಶದಲ್ಲಿ ಹೇಳಿದ್ದಾರೆ.

Similar News