"ತಮಿಳುನಾಡಿಗಿಂತ ತಮಿಳಗಂ ಹೆಚ್ಚು ಸೂಕ್ತ": ವಿವಾದ ಸೃಷ್ಟಿಸಿದ ರಾಜ್ಯಪಾಲರ ಹೇಳಿಕೆ

Update: 2023-01-06 03:06 GMT

ಚೆನ್ನೈ: ತಮಿಳುನಾಡು ರಾಜ್ಯದ ಹೆಸರನ್ನು ’ತಮಿಳಗಂ’ ಎನ್ನುವುದು ಹೆಚ್ಚು ಸೂಕ್ತ ಎಂಬ ಹೇಳಿಕೆ ನೀಡುವ ಮೂಲಕ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ವಿವಾದ ಸೃಷ್ಟಿಸಿದ್ದಾರೆ.

ರಾಜ್ಯಪಾಲರ ಹೇಳಿಕೆಯ ಬೆನ್ನಲ್ಲೇ ಡಿಎಂಕೆ ಐಟಿ ವಿಭಾಗ ಹಾಗೂ ದ್ರಾವಿಡ ಪಕ್ಷಗಳ ಬೆಂಬಲಿಗರು #ತಮಿಳುನಾಡು ಎಂಬ ಪೋಸ್ಟ್‌ಗಳನ್ನು ಮಾಡುವ ಮೂಲಕ ಟ್ವಿಟ್ಟರ್‌ನಲ್ಲಿ ಸಂಚಲನ ಮೂಡಿದೆ. ರಾಜ್ಯಪಾಲರ ಹೇಳಿಕೆಯನ್ನು ಕಟುವಾಗಿ ಟೀಕಿಸಿರುವ ಡಿಎಂಕೆ ಖಜಾಂಚಿ ಮತ್ತು ಸಂಸದ ಟಿ.ಆರ್.ಬಾಲು, "ರಾಜ್ಯಪಾಲ ರವಿಯವರು ಬಿಜೆಪಿಯ ಎರಡನೇ ರಾಜ್ಯಾಧ್ಯಕರಾಗಿ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಬೇಕು" ಎಂದು ಚುಚ್ಚಿದ್ದಾರೆ.

"ರಾಜ್ಯಪಾಲ ಆರ್.ಎನ್.ರವಿಯವರು ಪ್ರತಿದಿನ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಗೊಂದಲ, ಪ್ರತ್ಯೇಕತೆ ಮತ್ತು ಸಂಘರ್ಷ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. 50 ವರ್ಷಗಳ ದ್ರಾವಿಡ ರಾಜಕಾರಣದಲ್ಲಿ ಜನರನ್ನು ವಂಚಿಸಲಾಗಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ. ಇದು ಖಂಡನೀಯ. ಇದನ್ನು ಅವರು ರಾಜಭವನದಿಂದ ಹೇಳುವ ಬದಲು ರಾಜ್ಯ ಬಿಜೆಪಿ ಕೇಂದ್ರ ಕಚೇರಿ ಕಮಲಾಲಯಂನಿಂದ ಈ ಹೇಳಿಕೆ ನೀಡಬೇಕಿತ್ತು" ಎಂದು ವ್ಯಂಗ್ಯವಾಡಿದ್ದಾರೆ.

ರಾಜಭವನದಲ್ಲಿ ಬುಧವಾರ ನಡೆದ ಕಾಶಿ ತಮಿಳು ಸಂಗಮಮ್ ಸಂಘಟನೆಯ ಕಾರ್ಯಕರ್ತರ ಸನ್ಮಾನ ಸಮಾರಂಭದಲ್ಲಿ ರಾಜ್ಯಪಾಲರು ವಿವಾದಾತ್ಮಕ ಹೇಳಿಕೆ ನೀಡಿದ್ದರು.

Similar News