ಜೈಲಿನಲ್ಲಿರುವಾಗ ಏಕಾಂಗಿತನ, ಭಯ ಕಾಡಿತ್ತು, ಬೆಂಬಲ ಸೂಚಿಸಿ ಬರುತ್ತಿದ್ದ ಪತ್ರಗಳೇ ಆಸರೆಯಾಗಿದ್ದವು: ತೀಸ್ತಾ
ತಿರುವನಂತಪುರಂ: ಸಾಬರಮತಿ ಕೇಂದ್ರ ಕಾರಾಗೃಹದಲ್ಲಿ ಎರಡು ತಿಂಗಳು ಬಂಧಿಯಾಗಿದ್ದ ವೇಳೆ ಏಕಾಂಗಿತನ ಮತ್ತು ಭಯ ತಮ್ಮನ್ನು ಆವರಿಸಿತ್ತು. ತಮಗೆ ಬೆಂಬಲ ಸೂಚಿಸಿ ದೇಶಾದ್ಯಂತದಿಂದ ಬರುತ್ತಿದ್ದ ಪತ್ರಗಳೇ ಸಮಾಧಾನಕರ ಅಂಶವಾಗಿತ್ತು ಎಂದು ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೇಟಲ್ವಾಡ್ ಹೇಳಿದ್ದಾರೆ.
ತಿರುವನಂತಪುರಂನಲ್ಲಿ ಶುಕ್ರವಾರ 13ನೇ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘಟನೆಯ (ಎಐಡಿಡಬ್ಲ್ಯುಎ) ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
"ಪ್ರತಿದಿನ 200 ರಿಂದ 500 ಪತ್ರಗಳು ಬರುತ್ತಿದ್ದವು. ಜೈಲಿನಲ್ಲಿದ್ದಾಗ ಒಟ್ಟು 2007 ಪತ್ರಗಳು ನನಗೆ ಬಂದಿದ್ದವು. ಜೈಲು ಅಧಿಕಾರಿಗಳು ಅವುಗಳನ್ನು ಪರಿಶೀಲಿಸಿ ನಂತರ ನನಗೆ ನೀಡುತ್ತಿದ್ದರು. ಈ ಪತ್ರಗಳನ್ನು ಓದಲು ಪ್ರತಿನಿತ್ಯ ಮೂರರಿಂದ ನಾಲ್ಕು ಗಂಟೆ ಸಮಯ ವ್ಯಯಿಸುತ್ತಿದ್ದೆ. ಇಷ್ಟೆಲ್ಲಾ ಪತ್ರಗಳನ್ನು ಪಡೆಯುವ ಹಿಂದಿನ ರಹಸ್ಯವೇನು ಎಂದು ಸಹಕೈದಿಗಳು ಕೇಳುತ್ತಿದ್ದರು. ಎಐಡಿಡಬ್ಲ್ಯುಎಫ್, ಕಮ್ಯುನಿಸ್ಟ್ ಪಾರ್ಟಿ ಮತ್ತು ಆಲ್ ಇಂಡಿಯಾ ಫಾರೆಸ್ಟ್ ವರ್ಕಿಂಗ್ ಪೀಪಲ್ ಸದಸ್ಯರು ಈ ಪತ್ರಗಳನ್ನು ಕಳುಹಿಸುತ್ತಿದ್ದರು," ಎಂತು ತೀಸ್ತಾ ವಿವರಿಸಿದರು.
2019 ಲೋಕಸಭಾ ಚುನಾವಣೆಗಳ ಫಲಿತಾಂಶ ಹೊರಬರುತ್ತಿರುವಾಗ ಸ್ನೇಹಿತೆ ಗೌರಿ ಲಂಕೇಶ್ ಕರೆ ಮಾಡಿ ಭವಿಷ್ಯದಲ್ಲಿ ಏನಾಗಬಹುದು ಎಂದು ಆತಂಕಪಟ್ಟರು. ಏನು ನಡೆಯುವುದೋ ಅದು ನಡೆಯಲಿದೆ ಎಂದು ಆಕೆಗೆ ಹೇಳಿದ್ದೆ," ಎಂದು ತೀಸ್ತಾ ನೆನಪಿಸಿಕೊಂಡರು.
2019 ನಂತರ ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚಾಗಿವೆ ಎಂದು ಅವರು ಹೇಳಿದರು. ಅದಕ್ಕಿಂತ ಮುಂಚೆಯೂ ಇಂತಹ ಅಪರಾಧಗಳು ನಡೆಯುತ್ತಿದ್ದವು ಈಗಲೂ ನಡೆಯುತ್ತಿವೆ. ಆದರೆ ಕೆಲವೊಂದು ಆಯ್ದ ಘಟನೆಗಳನ್ನು ಮಾತ್ರ ಹೆಚ್ಚಾಗಿ ಬಿಂಬಿಸಿ ಒಂದು ನಿರ್ದಿಷ್ಟ ಮನಃಸ್ಥಿತಿ ಮತ್ತು ಸಿದ್ಧಾಂತಕ್ಕೆ ಸೂಕ್ತವಾಗುವಂತೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
"ಪ್ರಜಾಪ್ರಭುತ್ವವನ್ನು ಬಲಪಡಿಸಲು ಜನರ ಹೋರಾಟ ಆಗಾಗ ನಡೆಯಬೇಕು, ಪ್ರಜಾಪ್ರಭುತ್ವ ಎಂಬುದು ಪ್ರಗತಿಯಲ್ಲಿರುವ ಕೆಲಸ. ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಪ್ರಜಾಪ್ರಭುತ್ವ ಬಹಳ ಬಾಧಿತವಾಗಿದೆ," ಎಂದು ಅವರು ಹೇಳಿದರು
ಕಳೆದ ಒಂಬತ್ತು ವರ್ಷಗಳಲ್ಲಿ ಮಾಧ್ಯಮ ಕೂಡ ಕಾರ್ಪೊರೇಟೀಕರಣಗೊಂಡಿದೆ ಹಾಗೂ ಕೇಂದ್ರ ಸರಕಾರದ ಪ್ರಚಾರದ ಸಾಧನವಾಗಿ ಬಿಟ್ಟಿದೆ ಎಂದು ಅವರು ಹೇಳಿದರು.