ಕಾರು ಅಪಘಾತ: ಪ್ರಾಣಾಪಾಯದಿಂದ ಪಾರಾದ ಹರ್ಯಾಣ ಗೃಹ ಸಚಿವ ಅನಿಲ್ ವಿಜ್

ಮೂರು ವಾರಗಳಲ್ಲಿ 2ನೇ ಬಾರಿ ಅಪಘಾತ

Update: 2023-01-08 05:19 GMT

ಚಂಡಿಗಢ: ಕುಂಡ್ಲಿ-ಮನೇಸರ್-ಪಲ್ವಾಲ್ (ಕೆಎಂಪಿ) ಎಕ್ಸ್‌ಪ್ರೆಸ್‌ವೇಯಲ್ಲಿ ಶನಿವಾರ ಟ್ರಕ್  ವೊಂದು ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗೃಹ ಸಚಿವರ ಕಾರು ಮೂರು ವಾರಗಳಲ್ಲಿ 2ನೇ ಬಾರಿ ಅಪಘಾತಕ್ಕೀಡಾಗಿದೆ.

ಬಹದ್ದೂರ್‌ಗಢ್ ಪಟ್ಟಣದ ಬಳಿ ಡಿಸೆಂಬರ್ 19 ರಂದು ಗೃಹ ಸಚಿವರ ಕಾರು ಕೆಟ್ಟುಹೋದ ಸ್ಥಳದ ಸಮೀಪವೇ  ಈ ಘಟನೆ ನಡೆದಿದೆ. ಆಗ ವಿಜ್ ಅವರು ಪವಾಡಸದೃಶವಾಗಿ ಪಾರಾಗಿದ್ದರು. ಅವರು ಎರಡೂ ಸಂದರ್ಭಗಳಲ್ಲಿ ತಮ್ಮ ತವರು ಕ್ಷೇತ್ರವಾದ ಅಂಬಾಲಾ ಕ್ಯಾಂಟ್‌ನಿಂದ ಗುರುಗ್ರಾಮ್‌ಗೆ ಹೋಗುತ್ತಿದ್ದರು.

ಡಿಸೆಂಬರ್ ಘಟನೆಯ ನಂತರ  ಅವರು ಹೊಸ ಅಧಿಕೃತ ವಾಹನ ವೋಲ್ವೋ ಕಾರನ್ನು ಬಳಸುತ್ತಿದ್ದರು.

" ನಾವು ಕೆಎಂಪಿ ಹೆದ್ದಾರಿಯಲ್ಲಿ ಸ್ವಲ್ಪ ಸಮಯದವರೆಗೆ ನಿಲ್ಲಿಸಿದ್ದೇವೆ ಮತ್ತು ನಾನು ನನ್ನ ಕಾರಿನಲ್ಲಿ ಕುಳಿತಿದ್ದಾಗ ಇದ್ದಕ್ಕಿದ್ದಂತೆ ನನ್ನ ಕಾರಿನ ಹಿಂದೆ ಸುಮಾರು 10 ಅಡಿಗಳಷ್ಟು ದೂರದಲ್ಲಿದ್ದ ನನ್ನ ಎಸ್ಕಾರ್ಟ್ ವಾಹನಕ್ಕೆ ಟ್ರಕ್ ಡಿಕ್ಕಿ ಹೊಡೆದಿದೆ. ಬೆಂಗಾವಲು ವಾಹನವು ನಂತರ ನನ್ನ ಕಾರಿಗೆ ಡಿಕ್ಕಿ ಹೊಡೆದಿದೆ, ಅದು ಹಾನಿಗೊಳಗಾಯಿತು. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ" ಎಂದು ವಿಜ್ ಫೋನ್ ಮೂಲಕ ಪಿಟಿಐಗೆ ತಿಳಿಸಿದರು.

Similar News