ಹತ್ತು ವರ್ಷದ ಹಿಂದಿನ ಫೋಟೊವನ್ನು ಹಲ್‌ದ್ವಾನಿ ಅತಿಕ್ರಮಣದ ಪೋಟೊ ಎಂದು ಹಂಚಿಕೊಂಡ ಬಿಜೆಪಿ ನಾಯಕರು

Update: 2023-01-08 09:19 GMT

ಹೊಸ ದಿಲ್ಲಿ: ಹಲ್‌ದ್ವಾನಿಯ ರೈಲ್ವೆ ಸ್ವತ್ತಿನ ಒತ್ತುವರಿ ತೆರವಿಗೆ ಉತ್ತರಾಖಂಡ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿರುವುದನ್ನು ಖಂಡಿಸಿ, ಮೇಜರ್ ಸುರೇಂದ್ರ ಪೂನಿಯಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ಫೋಟೊವನ್ನು ಬಿಜೆಪಿ ನಾಯಕರೂ ಮರು ಟ್ವೀಟ್ ಮಾಡಿದ್ದಾರೆ. ಆದರೆ ಬಿಜೆಪಿ ನಾಯಕರು ಹಂಚಿಕೊಂಡಿರುವ ಈ ಫೋಟೊ ಕೊಲ್ಕತ್ತಾದ್ದಾಗಿದ್ದು, ಹತ್ತು ವರ್ಷಗಳಷ್ಟು ಹಳೆಯದು ಎಂಬ ಸಂಗತಿಯನ್ನು altnews.in ಫ್ಯಾಕ್ಟ್ ಚೆಕ್ ವೇದಿಕೆ ಪತ್ತೆ ಹಚ್ಚಿದೆ.

ರೈಲ್ವೆ ಇಲಾಖೆಗೆ ಸೇರಿದ ಸ್ವತ್ತು ಎಂದು ಹೇಳಲಾಗಿರುವ ಹಲ್‌ದ್ವಾನಿಯಲ್ಲಿನ ಪ್ರದೇಶದಿಂದ ಒತ್ತುವರಿ ಮಾಡಿರುವ 4000 ಕುಟುಂಬಗಳನ್ನು ತೆರವುಗೊಳಿಸುವಂತೆ ಡಿಸೆಂಬರ್ 20, 2022ರಂದು ಉತ್ತರಾಖಂಡ ಹೈಕೋರ್ಟ್ ಆದೇಶಿಸಿತ್ತು. ಈ ಆದೇಶವನ್ನು ಜನವರಿ 5, 2023ರಂದು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಪ್ರಕರಣವು ಮಾನವೀಯ ನೆಲೆಯನ್ನು ಹೊಂದಿದ್ದು, ಪರಿಗಣನೆಗೆ ಅರ್ಹವಾಗಿದೆ ಎಂದು ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತ್ತು.

ಈ ಹಿನ್ನೆಲೆಯಲ್ಲಿ ಮೇಜರ್ ಸುರೇಂದ್ರ ಪೂನಿಯಾ ಅವರು ಟ್ವಿಟರ್‌ನಲ್ಲಿ ಫೋಟೊ ಒಂದನ್ನು ಹಂಚಿಕೊಂಡು, "ಆಪ್ತ ಸ್ನೇಹಿತರೆ, ನೀವು ಬೇರೆಲ್ಲೂ ಜಮೀನು ಖರೀದಿಸಬೇಡಿ. ಕೇವಲ ನಿಮ್ಮ ಸಮುದಾಯದೊಂದಿಗೆ ದೊಡ್ಡ ಸಂಖ್ಯೆಯಲ್ಲಿ ಒಗ್ಗೂಡಿ ಮತ್ತು ಸರ್ಕಾರಿ, ಸೇನೆ, ರೈಲ್ವೆ ಜಮೀನನ್ನು ವಶಪಡಿಸಿಕೊಳ್ಳಿ. ಮಾನ್ಯ ನ್ಯಾಯಾಧೀಶರು ಅದನ್ನು ಸಕ್ರಮಗೊಳಿಸುತ್ತಾರೆ. ಒಂದು ವೇಳೆ ನೀವೇನಾದರೂ ಅದರ ವಿರುದ್ಧ ಧ್ವನಿ ಎತ್ತಿದರೆ, ನೀವು ದೇಶದ ಜಾತ್ಯತೀತತೆಗೆ ಅಪಾಯ ಉಂಟು ಮಾಡುವವರಾಗುತ್ತೀರಿ" ಎಂದು #HaldwaniEncroachment ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿದ್ದರು.

ಅದೇ ಫೋಟೊವನ್ನು ಟ್ವೀಟ್ ಮಾಡಿದ್ದ ಬಿಜೆಪಿ ನಾಯಕಿ ಪ್ರೀತಿ ಗಾಂಧಿ, "ಸುಪ್ರೀಂಕೋರ್ಟ್ ಇಂದು ಸಕ್ರಮಗೊಳಿಸಿರುವುದು ಇದನ್ನೇ" ಎಂದು ಬರೆದಿದ್ದರು. ಪ್ರೀತಿ ಗಾಂಧಿ ನೀಡಿದ್ದ ಶೀರ್ಷಿಕೆಯನ್ನೇ ನೀಡಿ, ಉತ್ತರ ಪ್ರದೇಶ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಎಂದು ಹೇಳಿಕೊಂಡಿರುವ ಪ್ರಭಾ ಉಪಾಧ್ಯಾಯ, ತೆಲಂಗಾಣ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರುತಿ ಬಂಗಾರು ಕೂಡಾ ಅದೇ ಫೋಟೊವನ್ನು ಹಂಚಿಕೊಂಡಿದ್ದರು. 

ಪ್ರೀತಿ ಗಾಂಧಿ ನೀಡಿದ್ದ ಶೀರ್ಷಿಕೆಯನ್ನೇ ನೀಡಿ, @Sandesh9950245, @aceduos, @Ashutos04111153, @KapilKrSinghAdv, @ParitoshPal1701, @Tanwarliva, @RituRathur ಎಂಬ ಖಾತೆದಾರರೂ ಅದೇ ಫೋಟೊವನ್ನು ಹಂಚಿಕೊಂಡಿದ್ದರು.

ಈ ಕುರಿತು ಗೂಗಲ್ ಲೆನ್ಸ್ ವೈಶಿಷ್ಟ್ಯವನ್ನು ಬಳಸಿಕೊಂಡು altnews.in ಫ್ಯಾಕ್ಟ್‌ಚೆಕ್ ವೇದಿಕೆಯು ಸರಳವಾದ reverse image search ನಡೆಸಿದಾಗ, ಆ ಚಿತ್ರವು 2016ರಲ್ಲಿ ABC News ಪ್ರಕಟಿಸಿದ್ದ ಲೇಖನವೊಂದಕ್ಕೆ ಕೊಂಡೊಯ್ದಿದೆ. ಆ ವರದಿಯು ಟ್ವೀಟ್ ಮಾಡಲಾಗಿದ್ದ ಫೋಟೊವನ್ನೇ ಒಳಗೊಂಡಿತ್ತು. 

ಆ ಚಿತ್ರದ ಕೆಳಗಿನ ಸಂಕ್ಷಿಪ್ತ ವಿವರಣೆ: "ಡಿಸೆಂಬರ್ 12, 2013ರಂದು ಭಾರತದ ಕೋಲ್ಕತ್ತಾದಲ್ಲಿನ ರೈಲ್ವೆ ಹಳಿಯೊಂದನ್ನು ಪ್ರಯಾಣಿಕರ ರೈಲು ಹಾದು ಹೋದ ನಂತರ, ರೈಲ್ವೆ ಹಳಿಯ ಪಕ್ಕದಲ್ಲಿರುವ ಕೊಳಗೇರಿಯ ಜನರು ತಮ್ಮ ದೈನಂದಿನ ಬದುಕಿನಲ್ಲಿ ತೊಡಗಿಸಿಕೊಂಡಿರುವುದು" ಎಂದಿತ್ತು. ಈ ಫೋಟೋದ ಕೃಪೆಯನ್ನು ಗೆಟ್ಟಿ ಇಮೇಜಸ್‌ನ ಸಮೀರ್ ಹುಸೇನ್‌ಗೆ ನೀಡಲಾಗಿತ್ತು.

ಅದೇ ಸಂಕ್ಷಿಪ್ತ ವಿವರಣೆಯನ್ನು ಗೂಗಲ್ ಸರ್ಚ್ ಎಂಜಿನ್‌ನಲ್ಲಿ ನಮೂದಿಸಿದಾಗ ಡಿಸೆಂಬರ್ 12, 2013ರಂದು ಗೆಟ್ಟಿ ಇಮೇಜಸ್‌ನಲ್ಲಿ ಪ್ರಕಟವಾಗಿದ್ದ ಅಸಲಿ ಫೋಟೊ ಪತ್ತೆಯಾಗಿದೆ. ಈ ಫೋಟೊ ಕೋಲ್ಕತ್ತಾದ ರೈಲ್ವೆ ಹಳಿಯ ಬಳಿ ಇರುವ ಕೊಳೆಗೇರಿಯೊಂದನ್ನು ಪ್ರತಿನಿಧಿಸುತ್ತದೆ.

ಒಟ್ಟಾರೆಯಾಗಿ, ಹಲ್‌ದ್ವಾನಿಯಲ್ಲಿ ನಿರ್ಮಿಸಲಾಗಿರುವ 4000 ಮನೆಗಳನ್ನು ಕೆಡವಲು ಉತ್ತರಾಖಂಡ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆ ನೀಡಿದ ಸುಪ್ರೀಂಕೋರ್ಟ್ ನಿರ್ಣಯವನ್ನು ಖಂಡಿಸಲು ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಕೋಲ್ಕತ್ತಾದ ಹತ್ತು ವರ್ಷದಷ್ಟು ಹಳೆಯದಾದ ಫೋಟೊವನ್ನು ಹಂಚಿಕೊಂಡಿದ್ದಾರೆ ಮತ್ತು ಆ ಮೂಲಕ ಬಡವರು ಮತ್ತು ಅಂಚಿನ ಸಮುದಾಯಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ.

Similar News