ಜೋಶಿಮಠ ಭೂಕುಸಿತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ

Update: 2023-01-08 15:31 GMT

ಡೆಹ್ರಾಡೂನ್,ಜ.8: ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದಲ್ಲಿ ನಿವಾಸಿಗಳನ್ನು ಮತ್ತು ಆಡಳಿತವನ್ನು ಕಂಗಾಲಾಗಿಸಿರುವ ಬಿರುಕುಗಳು ಮತ್ತು ಭೂಕುಸಿತಗಳು ಮುಂದುವರಿದಿದ್ದು,ಅಲ್ಲಿಯ ಪ್ರಚಲಿತ ಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಕೋರಿ ಜ್ಯೋತಿಷ್ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಮಹಾರಾಜ್ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ.

ಈ ಕಠಿಣ ಸಮಯದಲ್ಲಿ ಜೋಶಿಮಠದ ನಿವಾಸಿಗಳನ್ನು ಸಕ್ರಿಯವಾಗಿ ಬೆಂಬಲಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರಕ್ಕೆ ನಿರ್ದೇಶ ನೀಡುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.

ನ್ಯಾಯಾಲಯವು ರಚಿಸಿರುವ ಭೂವಿಜ್ಞಾನಿಗಳು,ಜಲವಿಜ್ಞಾನಿಗಳು ಮತ್ತು ಇಂಜಿನಿಯರ್ಗಳ ಉನ್ನತ ಮಟ್ಟದ ಸಮಿತಿಯು ಮಾರ್ಗಸೂಚಿಗಳನ್ನು ರೂಪಿಸುವವರೆಗೆ ತಪೋವನ ವಿಷ್ಣುಗಡ ಜಲವಿದ್ಯುತ್ ಯೋಜನೆಯ ಸುರಂಗ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಬಾರದು ಎಂದು ಅರ್ಜಿಯು ಪ್ರತಿಪಾದಿಸಿದೆ.

ಜೋಶಿಮಠದಲ್ಲಿಯ ಪ್ರಸ್ತುತ ವಿನಾಶಕಾರಿ ಸ್ಥಿತಿಯನ್ನು ಎದುರಿಸುವಲ್ಲಿ ಪ್ರತಿವಾದಿಗಳು ಸಂಪೂರ್ಣವಾಗಿ ನಿಷ್ಕ್ರಿಯರಾಗಿದ್ದಾರೆ,ಯಾವುದೇ ಕ್ರಮವನ್ನು ಕೈಗೊಳ್ಳದೆ ನಿರ್ಲಕ್ಷವನ್ನು ತೋರಿಸುತ್ತಿದ್ದಾರೆ. ಇದು ಜೋಶಿಮಠದಲ್ಲಿ ಊಹಿಸಲಾರದ ಸಂಕಷ್ಟದ ಜೊತೆಗೆ ಸ್ಥಳೀಯ ನಿವಾಸಿಗಳ ಪ್ರಾಣಹಾನಿ ಮತ್ತು ಆಸ್ತಿಹಾನಿಗಳಿಗೆ ಕಾರಣವಾಗುತ್ತಿದೆ ಎಂದು ಹೇಳಿರುವ ಅರ್ಜಿಯು,ಭೂಕುಸಿತ ಮತ್ತು ಬಿರುಕುಗಳಿಂದಾಗಿ ತಮ್ಮ ಮನೆಗಳು ಮತ್ತು ಜಮೀನುಗಳನ್ನು ಕಳೆದುಕೊಂಡಿರುವವರಿಗೆ ತಕ್ಷಣದ ಆರ್ಥಿಕ ನೆರವು ಮತ್ತು ಪರಿಹಾರಕ್ಕಾಗಿಯೂ ಆಗ್ರಹಿಸಿದೆ.

Similar News