ಏಕದಿನ ಪಂದ್ಯ: ಶತಕ ಸಿಡಿಸಿ ಸಚಿನ್ ದಾಖಲೆ ಮುರಿದ ವಿರಾಟ್ ಕೊಹ್ಲಿ
ಗುವಾಹಟಿ, ಜ.10: ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 45ನೇ ಶತಕವನ್ನು ಸಿಡಿಸಿ ಗಮನ ಸೆಳೆದರು. ಶ್ರೀಲಂಕಾ ವಿರುದ್ಧದ ಮಂಗಳವಾರ ನಡೆದ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.
ಕೊಹ್ಲಿ 80 ಎಸೆತಗಳಲ್ಲಿ 10 ಬೌಂಡರಿ ಹಾಗೂ 1 ಸಿಕ್ಸರ್‌ಗಳ ನೆರವಿನಿಂದ 45ನೇ ಏಕದಿನ ಶತಕ ಪೂರೈಸಿದರು.
ಶ್ರೀಲಂಕಾ ವಿರುದ್ಧ 9ನೇ ಶತಕವನ್ನು ಸಿಡಿಸಿರುವ ಕೊಹ್ಲಿ ಅವರು ಸಚಿನ್ ತೆಂಡುಲ್ಕರ್ ದಾಖಲೆ(8 ಶತಕ)ಯನ್ನು ಮುರಿದರು.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಏಕದಿನ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಕೊಹ್ಲಿ ರನ್ ಬರ ನೀಗಿಸಿಕೊಂಡಿದ್ದರು. ಇದೀಗ ಸತತ 2ನೇ ಶತಕವನ್ನು ಸಿಡಿಸಿದ್ದಾರೆ.
‘ಕಿಂಗ್’ ಕೊಹ್ಲಿ ಎಲ್ಲ ಮಾದರಿ ಕ್ರಿಕೆಟ್‌ನಲ್ಲಿ 73ನೇ ಅಂತರ್‌ರಾಷ್ಟ್ರೀಯ ಶತಕ ಸಿಡಿಸಿದ ಸಾಧನೆಯನ್ನೂ ಮಾಡಿದರು. ಕೊಹ್ಲಿ ಈಗಾಗಲೇ ಟೆಸ್ಟ್ ಕ್ರಿಕೆಟ್‌ನಲ್ಲಿ 27 ಶತಕ ಹಾಗೂ ಟಿ-20ಯಲ್ಲಿ ಒಂದು ಶತಕವನ್ನು ಸಿಡಿಸಿದ್ದಾರೆ.
ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರ ಸಮ್ಮುಖದಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದ ಕೊಹ್ಲಿ 87 ಎಸೆತಗಳಲ್ಲಿ 113 ರನ್ ಗಳಿಸಿ ಔಟಾದರು.
ಕೊಹ್ಲಿ ಸ್ವದೇಶದಲ್ಲಿ 20ನೇ ಏಕದಿನ ಶತಕ ಪೂರೈಸಿದರು. ಸ್ವದೇಶದಲ್ಲಿ 20 ಶತಕ ಸಿಡಿಸಿರುವ ಸಚಿನ್ ತೆಂಡುಲ್ಕರ್ ದಾಖಲೆಯನ್ನು ಸರಿಗಟ್ಟಿದರು. 73ನೇ ಅಂತರ್‌ರಾಷ್ಟ್ರೀಯ ಶತಕದ ಹಾದಿಯಲ್ಲಿ ಕೊಹ್ಲಿ ಅವರು 257ನೇ ಇನಿಂಗ್ಸ್‌ನಲ್ಲಿ ವೇಗವಾಗಿ 12,500 ರನ್ ಪೂರ್ಣಗೊಳಿಸಿದರು.
ತೆಂಡುಲ್ಕರ್ ಒಟ್ಟು 49 ಏಕದಿನ ಶತಕ ಸಿಡಿಸಿ ಗರಿಷ್ಠ ಏಕದಿನ ಶತಕ ಸಿಡಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ(45) ಎರಡನೇ ಸ್ಥಾನದಲ್ಲಿದ್ದಾರೆ.