ಕಾಶ್ಮೀರಿಗಳು ಭಿಕ್ಷುಕರಲ್ಲ, ಚುನಾವಣೆಗೆ ಭಿಕ್ಷೆ ಬೇಡುವುದಿಲ್ಲ: ಉಮರ್ ಅಬ್ದುಲ್ಲಾ

Update: 2023-01-11 07:17 GMT

ಶ್ರೀನಗರ, ಜ.10: ಚುನಾವಣೆ ಜನರ ಹಕ್ಕು. ಆದರೆ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಕಾಶ್ಮೀರಿಗಳು ಕೇಂದ್ರದ ಮುಂದೆ ಭಿಕ್ಷೆ ಬೇಡುವುದಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಮಂಗಳವಾರ ಹೇಳಿದ್ದಾರೆ. ‘ಈ ವರ್ಷ ಚುನಾವಣೆ ನಡೆಯದಿದ್ದರೆ ಬೇಡ. ನಾವು ಭಿಕ್ಷುಕರಲ್ಲ. ನಾನು ಹಲವು ಬಾರಿ ಹೇಳಿದ್ದೇನೆ. ಕಾಶ್ಮೀರಿಗಳು ಭಿಕ್ಷುಕರಲ್ಲ. ಚುನಾವಣೆ ನಮ್ಮ ಹಕ್ಕು, ಆದರೆ ಈ ಹಕ್ಕಿಗಾಗಿ ನಾವು ಅವರ ಎದುರು ಭಿಕ್ಷೆ ಬೇಡುವುದಿಲ್ಲ. ಅವರಿಗೆ ಚುನಾವಣೆ ನಡೆಸಲು ಮನಸ್ಸಿಲ್ಲದಿದ್ದರೆ ಬೇಡ’ ಎಂದು ಅನಂತನಾಗ್ ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅಬ್ದುಲ್ಲಾ ಹೇಳಿದ್ದಾರೆ. ಸರಕಾರಿ ಭೂಮಿ ಮತ್ತು ಆಸ್ತಿಯಿಂದ ಜನರನ್ನು ಒಕ್ಕಲೆಬ್ಬಿಸುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ‘ಅದಕ್ಕಾಗಿಯೇ ಅವರು ಚುನಾವಣೆ ನಡೆಸುತ್ತಿಲ್ಲ.

ಜನರಿಗೆ ಕಿರುಕುಳ ನೀಡಲು ಅವರು ಬಯಸುತ್ತಿದ್ದಾರೆ. ಜನರ ಗಾಯಗಳಿಗೆ ಮುಲಾಮು ಹಚ್ಚುವ ಬದಲು, ಗಾಯವನ್ನು ಉಲ್ಬಣಗೊಳಿಸುವುದಕ್ಕೆ ಒಲವು ತೋರುತ್ತಿದ್ದಾರೆ. ಚುನಾಯಿತ ಸರಕಾರ ಜನರ ಗಾಯಗಳನ್ನು ಗುಣಪಡಿಸುತ್ತದೆ ಎಂದು ಬಿಜೆಪಿ ಸರಕಾರಕ್ಕೆ ತಿಳಿದಿದೆ. ಆದರೆ ಅವರು ಗಾಯಕ್ಕೆ ಉಪ್ಪು ಮತ್ತು ಮೆಣಸು ಉಜ್ಜುವ ಕೆಲಸ ಮಾತ್ರ ಮಾಡುತ್ತಾರೆ’ ಎಂದರು. ರಜೌರಿ ದಾಳಿಯ ಬಳಿಕ, ಗ್ರಾಮರಕ್ಷಣಾ ಸಿಬ್ಬಂದಿಯನ್ನು ಸಶಸ್ತ್ರಗೊಳಿಸುವ ಸರಕಾರದ ನಿರ್ಧಾರದ ಬಗ್ಗೆ ಉತ್ತರಿಸಿದ ಅಬ್ದುಲ್ಲಾ ‘ಇದು 2019ರಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಸಂದರ್ಭ ರಾಷ್ಟ್ರದ ಎದುರು ಸರಕಾರದ ಪ್ರತಿಪಾದನೆ ವಿಫಲವಾಗಿದೆ ಎಂಬುದನ್ನು ಒಪ್ಪಿಕೊಂಡಂತಾಗಿದೆ’ ಎಂದರು.

Similar News