120 ಮಹಿಳೆಯರ ಅತ್ಯಾಚಾರವೆಸಗಿ, ವೀಡಿಯೋ ಮಾಡಿದ್ದ 'ಜಲೇಬಿ ಬಾಬಾ'ನನ್ನು ದೋಷಿ ಎಂದು ಘೋಷಿಸಿದ ನ್ಯಾಯಾಲಯ

Update: 2023-01-11 13:40 GMT

ಫತೇಹಾಬಾದ್: ತ್ವರಿತಗತಿ ನ್ಯಾಯಾಲಯವೊಂದು ಫೆತೇಹಾಬಾದ್‌ನ ತೊಹಾನ ಎಂಬಲ್ಲಿನ ಬಾಲಕನಾಥ್‌ ದೇವಸ್ಥಾನದ ಮಹಂತ್‌ 63 ವರ್ಷದ ಬಾಬಾ ಅಮರಪುರಿ ಆಲಿಯಾಸ್‌ ಬಿಲ್ಲು ಎಂಬಾತನ್ನು 100 ಕ್ಕೂ ಅಧಿಕ ಶಿಷ್ಯೆಯರ ಮೇಲೆ ಅತ್ಯಾಚಾರವೆಸಗಿದ ಹಾಗೂ ಕೃತ್ಯದ ವೀಡಿಯೋ ಚಿತ್ರೀಕರಣವೆಸಗಿದ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಘೋಷಿಸಿದೆ.

'ಜಲೇಬಿ ಬಾಬಾ' ಎಂದೂ ಕರೆಯಲ್ಪಡುವ ಮಹಂತನನ್ನು 2018 ರಲ್ಲಿ ಫತೇಹಾಬಾದ್‌ನ ಶಕ್ತಿನಗರ್‌ ಪ್ರದೇಶದಲ್ಲಿರುವ ಆತನ ನಿವಾಸದಿಂದ ಪೊಲೀಸರು ಬಂಧಿಸಿದ್ದರು. ಆತ ಸಂತ್ರಸ್ತೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಕೃತ್ಯಗಳ ಸೀಡಿಯನ್ನೂ ಪೊಲೀಸರು ವಶಪಡಿಸಿಕೊಂಡಿದ್ದರು. ಈ ಸೀಡಿಗಳನ್ನು ಬಳಸಿ ಆತ ಸಂತ್ರಸ್ತೆಯರನ್ನು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದರು. ಈತನ ಮೊಬೈಲ್‌ ಫೋನಿನಲ್ಲಿ 120  ಅಶ್ಲೀಲ ವೀಡಿಯೋಗಳೂ ಇದ್ದವೆಂದು ಪೊಲೀಸರು ತಿಳಿಸಿದ್ದರು.

ಜನರನ್ನು ಸಮ್ಮೋಹನಗೊಳಿಸುವ ಶಕ್ತಿ ತನಗಿದೆಯೆಂದು ಆತ ಹೇಳಿ ತಿರುಗುತ್ತಿದ್ದನಲ್ಲದೆ ಕನಿಷ್ಠ 120 ಶಿಷ್ಯೆಯರನ್ನು ಅಮಲುಭರಿತ ವಸ್ತು ನೀಡಿ ಅತ್ಯಾಚಾರವೆಸಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈತ 13 ವರ್ಷಗಳಿಂದ ಪಟ್ಟಣದ ಮುಖ್ಯ ಮಾರುಕಟ್ಟೆಯಲ್ಲಿ ಜಲೇಬಿಗಳನ್ನು ಮಾರಾಟ ಮಾಡುತ್ತಿದ್ದ. ನಂತರ ತನ್ನ ಜಲೇಬಿ ಉದ್ಯಮ ಬಂದ್‌ ಮಾಡಿ ಭಟಿಯಾನಗರದಲ್ಲಿ ಮನೆಯೊಂದನ್ನು ಖರೀದಿಸಿ ನಂತರ ಮನೆಯ ತಳಾಂತಸ್ತಿನಲ್ಲಿ ದೇವಸ್ಥಾನ ನಿರ್ಮಿಸಿದ್ದ ಎನ್ನಲಾಗಿದೆ.

ಆತನ ಲೈಂಗಿಕ ದೌರ್ಜನ್ಯದ ವೀಡಿಯೋಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡ ನಂತರ ಪೊಲೀಸರು ಆತನನ್ನು ಬಂಧಿಸಿದ್ದರು.

ಅಕ್ಟೋಬರ್‌ 2017 ರಲ್ಲಿ ಆತನ ವಿರುದ್ದ ವಿವಾಹಿತ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಹೊರಿಸಿದ್ದರೂ ಈ ಪ್ರಕರಣದಲ್ಲಿ ಆತನಿಗೆ ಜಾಮೀನು ದೊರಕಿತ್ತು.

Similar News