ಬಿಸ್ಕಿಟ್‌ ಪರ ಅಮಿತಾಬ್‌ ಬಚ್ಚನ್‌ ಜಾಹಿರಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಪೋಷಕಾಂಶ ತಜ್ಞರು

"ಮಕ್ಕಳ ಕಾರ್ಯಕ್ರಮವನ್ನು ಬಿಸ್ಕಿಟ್‌ ಶಿಫಾರಸು ಮಾಡಲು ಬಳಸಿಕೊಂಡಿದ್ದು ಆಘಾತಕಾರಿಯಾಗಿದೆ"

Update: 2023-01-12 13:21 GMT

ಹೊಸದಿಲ್ಲಿ: ಬ್ರಿಟಾನಿಯಾ ಕಂಪನಿಯ 'ಬಿಕಿಸ್' ಜಾಹೀರಾತಿನಲ್ಲಿ ಬಾಲಿವುಡ್ ತಾರೆ ಹಾಗೂ 'ಕೌನ್ ಬನೇಗಾ ಕರೋಡ್‌ಪತಿ' ನಿರೂಪಕ ಅಮಿತಾಭ್ ಬಚ್ಚನ್ ಕಾಣಿಸಿಕೊಂಡಿರುವುದಕ್ಕೆ ಭಾರತದಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಪೌಷ್ಟಿಕತೆ ಪರ ಪ್ರಚಾರ (NAPi) ಸಂಘಟನೆ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ದಾರಿ ತಪ್ಪಿಸುವಂತಿದೆ ಎಂದು ಅವರಿಗೆ ಪತ್ರ ಬರೆದಿದೆ ಎಂದು theprint.in ವರದಿ ಮಾಡಿದೆ.

NAPi ಸಾಂಕ್ರಾಮಿಕ ರೋಗ ಶಾಸ್ತ್ರ, ಮಾನವ ಪೌಷ್ಟಿಕತೆ, ಸಮುದಾಯ ಪೌಷ್ಟಿಕತೆ ಮತ್ತು ಶಿಶು ತಜ್ಞ ಕ್ಷೇತ್ರಗಳಿಗೆ ಸಂಬಂಧಿಸಿದ ಸ್ವತಂತ್ರ ತಜ್ಞರನ್ನು ಒಳಗೊಂಡಿರುವ ಗುಂಪಾಗಿದೆ. ಈ ತಜ್ಞರ ಗುಂಪು ತಮ್ಮ ಪತ್ರದಲ್ಲಿ ಇತ್ತೀಚಿನ ಕೆಬಿಸಿ ಜೂನಿಯರ್ ಸಂಚಿಕೆಯ ಯೂಟ್ಯೂಬ್ ತುಣುಕೊಂದನ್ನು ಉಲ್ಲೇಖಿಸಿದ್ದು, ಅದರಲ್ಲಿ ಬಚ್ಚನ್ ಅವರು ಇನ್ನು ಮುಂದೆ ತಮ್ಮ ಮಕ್ಕಳಿಗೆ ಪೌಷ್ಟಿಕ ಆಹಾರಗಳನ್ನು ತಯಾರಿಸಲು ಶ್ರಮ ಪಡಬೇಕಿಲ್ಲ. ಯಾಕೆಂದರೆ, ಬ್ರಿಟಾನಿಯಾ ಮಿಲ್ಕ್ ಬಿಕಿಸ್ ಬಿಸ್ಕತ್ತು ಹಾಲು ಮತ್ತು ಗೋಧಿ ಹಿಟ್ಟಿನ ಶಕ್ತಿ ಹೊಂದಿದೆ ಎಂದು ತಾಯಂದಿರಿಗೆ ಹೇಳುವುದು ಕಂಡು ಬರುತ್ತದೆ. ಸದ್ಯ ಈ ತುಣುಕನ್ನು ಯೂಟ್ಯೂಬ್‌ನಿಂದ ತೆಗೆಯಲಾಗಿದೆ.

ಡಿಸೆಂಬರ್ 28, 2022ರಂದು ಬರೆಯಲಾಗಿರುವ ಈ ಪತ್ರದಲ್ಲಿ, "ನೀವು ಮಕ್ಕಳ ಕಾರ್ಯಕ್ರಮವೊಂದನ್ನು 'ಬ್ರಿಟಾನಿಯಾ ಮಿಲ್ಕ್ ಬಿಕಿಸ್' ಬಿಸ್ಕತ್ತನ್ನು ಶಿಫಾರಸು ಮಾಡಲು ಬಳಸಿಕೊಂಡಿರುವ ಸುದ್ದಿ ತಿಳಿದು ನಮಗೆ ಆಘಾತ ಮತ್ತು ಅಚ್ಚರಿಯಾಗಿದೆ. ಬಿಸ್ಕತ್ ಬ್ರ್ಯಾಂಡ್ ಜಾಹೀರಾತು ಗ್ರಾಹಕರನ್ನು ದಾರಿ ತಪ್ಪಿಸುವಂತಿದ್ದು, ನೈಜ ಆಹಾರಗಳಾದ ಗೋಧಿ ಹಿಟ್ಟಿನ ರೊಟ್ಟಿ ಮತ್ತು ಒಂದು ಲೋಟ ಹಾಲಿಗೆ ಹೋಲಿಸುವ ಮೂಲಕ ಔದ್ಯಮಿಕ ಸೂತ್ರಗಳನ್ನು ಅನುಸರಿಸಿ ತಯಾರಿಸಲಾಗಿರುವ ಅನಾರೋಗ್ಯಕಾರಕ, ತೀವ್ರ ಸಂಸ್ಕರಿತ ಹಾಗೂ ಮೊದಲಿಗೇ ಪ್ಯಾಕ್ ಮಾಡಲಾದ ಆಹಾರ ಉತ್ಪನ್ನವನ್ನು ಪ್ರಚಾರ ಮಾಡಲಾಗಿದೆ" ಎಂದು NAPi ವಿವರಿಸಿದೆ.

ಸಂಘಟನೆಯು ಆಹಾರ ಸುರಕ್ಷತೆ ಮತ್ತು ಪ್ರಮಾಣೀಕರಣ ಕಾಯ್ದೆ, 2006 ಅನ್ನೂ ಉಲ್ಲೇಖಿಸಿದ್ದು, ಆ ಕಾಯ್ದೆಯಡಿ ದಾರಿ ತಪ್ಪಿಸುವ ಜಾಹೀರಾತುಗಳನ್ನು ನಿಷೇಧಿಸಲಾಗಿದೆ ಎಂಬ ಸಂಗತಿಯತ್ತ ಬೊಟ್ಟು ಮಾಡಿದೆ. ಇದಲ್ಲದೆ, ಗ್ರಾಹಕರ ರಕ್ಷಣೆ ಕಾಯ್ದೆ 2019ರ ಸೆಕ್ಷನ್ 2(28) ಪ್ರಕಾರ, ಯಾವುದೇ ಉತ್ಪನ್ನ ಅಥವಾ ಸೇವೆಗೆ ಸಂಬಂಧಿಸಿದ ದಾರಿ ತಪ್ಪಿಸುವ ಜಾಹೀರಾತುಗಳ ಭಾಗವಾಗುವುದು (I) ಅಂತಹ ಉತ್ಪನ್ನಗಳು ಅಥವಾ ಸೇವೆಯನ್ನು ತಪ್ಪಾಗಿ ವಿವರಿಸುವುದು ಅಥವಾ (ii) ಅಂತಹ ಉತ್ಪನ್ನ ಅಥವಾ ಸೇವೆಗಳ ಬಗ್ಗೆ ಸುಳ್ಳು ಆಶ್ವಾಸನೆ ನೀಡುವುದು ಅಥವಾ ಅವುಗಳ ಶೈಲಿ, ವಸ್ತು, ಪ್ರಮಾಣ ಅಥವಾ ಗುಣಮಟ್ಟದ ಕುರಿತು ದಾರಿ ತಪ್ಪಿಸುವುದು ಮತ್ತು ಉದ್ದೇಶಪೂರ್ವಕವಾಗಿ ಮುಖ್ಯ ಮಾಹಿತಿಯನ್ನು ಮುಚ್ಚಿಡುವುದು ತಪ್ಪು ಎಂದು ಹೇಳಿದೆ ಎಂಬುದನ್ನೂ ಉಲ್ಲೇಖಿಸಲಾಗಿದೆ.

'ಬ್ರಿಟಾನಿಯಾ ಮಿಲ್ಕ್ ಬಿಕಿಸ್' ಬಿಸ್ಕತ್ತು ಅತಿಯಾದ ಸಂಸ್ಕರಿತ ಆಹಾರ ವಿಭಾಗಕ್ಕೆ ಸೇರುತ್ತದೆ ಎಂದು NAPi ತನ್ನ ಪತ್ರದಲ್ಲಿ ಪ್ರತಿಪಾದಿಸಿದೆ.

ಈ ಕುರಿತು ThePrint ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಶಿಶು ತಜ್ಞ ಹಾಗೂ NAPi ಸಂಚಾಲಕ ಅರುಣ್ ಗುಪ್ತಾ, ನಮ್ಮ ಪತ್ರಕ್ಕೆ ಬಚ್ಚನ್ ಅವರಿಂದ ಇನ್ನೂ ಪ್ರತಿಕ್ರಿಯೆ ಬರಬೇಕಿದೆ. ಅಂತಹ ಉತ್ಪನ್ನಗಳು ಏಕೆ ಅನಾರೋಗ್ಯಕಾರಕ ಎಂಬುದನ್ನು ಸಮರ್ಥಿಸುವ ದಾಖಲೆಗಳೊಂದಿಗೆ ನಾವು ಮತ್ತೊಂದು ಪತ್ರವನ್ನು ಬಚ್ಚನ್ ಅವರಿಗೆ ರವಾನಿಸಿದ್ದೇವೆ ಎಂದು ತಿಳಿಸಿದ್ದಾರೆ.

Similar News