ಸಿಖ್‌ ಸೈನಿಕರಿಗೆ ಹೆಲ್ಮೆಟ್‌ಗೆ ಟೆಂಡರ್‌: ಸೇನಾ ನಿರ್ಣಯಕ್ಕೆ ಧಾರ್ಮಿಕ ಗುಂಪುಗಳಿಂದ ಆಕ್ಷೇಪ

ಪೇಟ ಕೇವಲ ಬಟ್ಟೆಯಲ್ಲ, ನಮ್ಮ ಗುರುತಿನ ಸಂಕೇತ; ಹರ್‌ಪ್ರೀತ್ ಸಿಂಗ್

Update: 2023-01-13 12:22 GMT

ಹೊಸದಿಲ್ಲಿ: ಸಿಖ್ ಸೈನಿಕರಿಗೆ ಸುಮಾರು 13,000 ಹೆಲ್ಮೆಟ್‌ಗಳನ್ನು ಖರೀದಿಸುವ ಭಾರತೀಯ ಸೇನೆಯ ಪ್ರಸ್ತಾವನೆಗೆ ಸಿಖ್‌ ಧಾರ್ಮಿಕ ಗುಂಪುಗಳಾದ ಅಕಾಲ್ ತಖ್ತ್ ಮತ್ತು ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿಯು (ಎಸ್‌ಜಿಪಿಸಿ) ವಿರೋಧವನ್ನು ವ್ಯಕ್ತಪಡಿಸಿದೆ.

ಪೇಟವು ಸಿಖ್ ಗುರುತಿನ ಸಂಕೇತವಾಗಿದ್ದು, ಅದನ್ನು ಹೆಲ್ಮೆಟ್‌ ಗೆ ಬದಲಾಯಿಸಬಾರದು ಎಂದು ಹೇಳಿರುವ ಸಂಘಟನೆಗಳು, ಹೆಲ್ಮೆಟ್ ನಿರ್ಧಾರವನ್ನು ಹಿಂಪಡೆಯಲು ಕೇಂದ್ರ ಸರ್ಕಾರವನ್ನು ಕೇಳಿಕೊಂಡಿವೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಜನವರಿ 5 ರಂದು ಸಿಖ್ ಸೈನಿಕರಿಗೆ 12,730 ಬ್ಯಾಲಿಸ್ಟಿಕ್ ಹೆಲ್ಮೆಟ್‌ಗಳ ಪ್ರಸ್ತಾವನೆಗಾಗಿ ರಕ್ಷಣಾ ಸಚಿವಾಲಯವು ಟೆಂಡರ್ ಬಿಡುಗಡೆ ಮಾಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಸಿಖ್ ಸೈನಿಕರು ಈಗ ಧರಿಸಿರುವ ಬುಲೆಟ್ ಪ್ರೂಫ್ 'ಪಟ್ಕಾ'ಗಳಿಗಿಂತ ಭಿನ್ನವಾಗಿ, ಈ ಹೆಲ್ಮೆಟ್‌ಗಳು ಇಡೀ ತಲೆಯನ್ನು ಮುಚ್ಚುವ ಗುರಿಯನ್ನು ಹೊಂದಿವೆ. ಹೆಲ್ಮೆಟ್‌ಗಳು   ಹೆಚ್ಚುವರಿ-ದೊಡ್ಡ ಗಾತ್ರದಲ್ಲಿರಬೇಕು ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿತ್ತು.

ಅಕಾಲ್ ತಖ್ತ್ ಜಥೇದಾರ್ ಗಿಯಾನಿ ಹರ್‌ಪ್ರೀತ್ ಸಿಂಗ್ ಈ ಕುರಿತು ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ಎರಡನೇ ಮಹಾಯುದ್ಧದಲ್ಲಿ ಸಿಖ್ ಸೈನಿಕರು ಹೆಲ್ಮೆಟ್ ಧರಿಸುವಂತೆ ಬ್ರಿಟಿಷ್ ಅಧಿಕಾರಿಗಳು ಮಾಡಿದ ಪ್ರಯತ್ನಗಳನ್ನು ಹೇಗೆ ತಿರಸ್ಕರಿಸಲಾಯಿತು ಎಂಬುದನ್ನು ಉಲ್ಲೇಖಿಸಿದ ಅವರು, "ಪೇಟವು ಕೇವಲ ಬಟ್ಟೆಯಲ್ಲ, ಇದು ಗುರು ಸಾಹಿಬ್‌ನಿಂದ ಸಿಖ್ಖರ ತಲೆಯ ಮೇಲೆ ಇರಿಸಲ್ಪಟ್ಟ ಕಿರೀಟವಾಗಿದೆ ಮತ್ತು ಇದು ನಮ್ಮ ಗುರುತಿನ ಸಂಕೇತವಾಗಿದೆ" ಎಂದು ಅವರು ಹೇಳಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

1956, 1962 ಮತ್ತು 1971 ರಲ್ಲಿ ನಡೆದ ಯುದ್ಧಗಳು ಸೇರಿದಂತೆ ಸಿಖ್ ಸೈನಿಕರು ಪೇಟ ಧರಿಸಿ ಹಲವಾರು ಯುದ್ಧಗಳನ್ನು ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಎಸ್‌ಜಿಪಿಸಿ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ ಇದೇ ವಿಷಯದ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ಈ ಕ್ರಮವು ಸಿಖ್ ಹೆಮ್ಮೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.

Similar News