ದಿಲ್ಲಿ ಹೈಕೋರ್ಟ್ ನಲ್ಲಿ ನ್ಯಾ. ಚಂದ್ರಚೂಡ್ ನೇಮಕಾತಿ ಪ್ರಶ್ನಿಸುವ ಅರ್ಜಿ: ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಾಧೀಶರು

Update: 2023-01-13 15:07 GMT

ಹೊಸದಿಲ್ಲಿ, ಜ. 13: ಭಾರತದ ಮುಖ್ಯ ನ್ಯಾಯಾಧೀಶರಾಗಿ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ರ(Dhananjaya Y. Chandrachud)  ನೇಮಕವನ್ನು ಪ್ರಶ್ನಿಸುವ ಅರ್ಜಿಯನ್ನು ತಳ್ಳಿಹಾಕಿರುವ ತನ್ನ ಆದೇಶವನ್ನು ಮರುಪರಿಶೀಲಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯಿಂದ ದಿಲ್ಲಿ ಹೈಕೋರ್ಟ್ ನ (Delhi High Court) ಮುಖ್ಯ ನ್ಯಾಯಾಧೀಶ ಸತೀಶ್ ಚಂದ್ರ ಶರ್ಮ ಮತ್ತು ನ್ಯಾಯಮೂರ್ತಿ ಸುಬ್ರಮಣಿಯಮ್ ಪ್ರಸಾದ್ ಶುಕ್ರವಾರ ಹಿಂದೆ ಸರಿದಿದ್ದಾರೆ.

ಮರುಪರಿಶೀಲನಾ ಅರ್ಜಿಯಲ್ಲಿ ತಮ್ಮ ವಿರುದ್ಧ ಕೆಲವು ಆರೋಪಗಳನ್ನೂ ಮಾಡಲಾಗಿರುವುದರಿಂದ ತಾವು ಈ ಪ್ರಕರಣದ ವಿಚಾರಣೆಯನ್ನು ನಡೆಸುವಂತಿಲ್ಲ ಎಂದು ಈ ನ್ಯಾಯಾಧೀಶರನ್ನು ಒಳಗೊಂಡಿರುವ ಹೈಕೋರ್ಟ್ ನ (High Court) ವಿಭಾಗ ಪೀಠವು ಹೇಳಿತು.

ಈ ಅರ್ಜಿಯ ವಿಚಾರಣೆಯನ್ನು ಇನ್ನೊಂದು ಪೀಠವು ಜನವರಿ 16ರಂದು ನಡೆಸುವುದು ಎಂದು ಮುಖ್ಯ ನ್ಯಾಯಾಧೀಶ ಶರ್ಮ ನೇತೃತ್ವದ ಪೀಠವು ಹೇಳಿತು.

ಅರ್ಜಿದಾರರ ವಿರುದ್ಧ ನ್ಯಾಯಾಂದ ನಿಂದನೆ ಮೊಕದ್ದಮೆ ದಾಖಲಿಸುವಂತೆ ತಾನು ನ್ಯಾಯಪೀಠವನ್ನು ಒತ್ತಾಯಿಸುವುದಾಗಿ ಕೇಂದ್ರ ಸರಕಾರದ ಪರವಾಗಿ ಹಾಜರಾಗಿರುವ ವಕೀಲರು ಹೇಳಿದರು.

ನ್ಯಾಯಾಧೀಶ ಚಂದ್ರಚೂಡ್ ರನ್ನು ಭಾರತದ ಮುಖ್ಯ ನ್ಯಾಯಾಧೀಶರಾಗಿ ನೇಮಿಸಿರುವುದನ್ನು ಪ್ರಶ್ನಿಸಿ ಸಂಜೀವ್ ಕುಮಾರ್ ತಿವಾರಿ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಿದ್ದರು. ದಿಲ್ಲಿ ಹೈಕೋರ್ಟ್ ಕಳೆದ ವರ್ಷದ ನವೆಂಬರ್ 11ರಂದು ಅದನ್ನು ವಜಾಗೊಳಿಸಿ ಅರ್ಜಿದಾರರಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿತ್ತು.

ಅರ್ಜಿದಾರರು ತನ್ನ ಮರುಪರಿಶೀಲನಾ ಅರ್ಜಿಯಲ್ಲಿ, ಹೈಕೋರ್ಟ್ ತನ್ನ ಹಿಂದಿನ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಮತ್ತು ತನಗೆ ವಿಧಿಸಿರುವ ದಂಡವನ್ನೂ ರದ್ದುಪಡಿಸಬೇಕು ಎಂದು ಕೋರಿದ್ದಾರೆ.

ಇದನ್ನು ಓದಿ:  ದಿಲ್ಲಿ ಪೊಲೀಸರು ದ್ವೇಷ ಭಾಷಣದ ವಿಚಾರಣೆಯಲ್ಲಿ ಹೇಳಿಕೊಳ್ಳುವಂತಹ ಪ್ರಗತಿಯನ್ನು ಮಾಡಿಲ್ಲ: ಸುಪ್ರೀಂ ಕೋರ್ಟ್

Similar News