ಹಣ ದುರ್ಬಳಕೆ‌ ಆರೋಪ: ಟಿಎಂಸಿ ವಕ್ತಾರ ಸಾಕೇತ್ ಗೋಖಲೆಗೆ ನ್ಯಾಯಾಲಯ ಜಾಮೀನು ನಿರಾಕರಣೆ

Update: 2023-01-13 16:25 GMT

ಅಹ್ಮದಾಬಾದ್, ಜ. 13: ಕ್ರೌಡ್ ಫಂಡಿಂಗ್ ಮೂಲಕ ಸಂಗ್ರಹಿಸಿದ ಹಣವನ್ನು ದುರ್ಬಳಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ವಕ್ತಾರ ಸಾಕೇತ್ ಗೋಖಲೆ(Saket Gokhale)ಗೆ ಜಾಮೀನು ನೀಡಲು ಇಲ್ಲಿನ ಸತ್ರ ನ್ಯಾಯಾಲಯ ನಿರಾಕರಿಸಿದೆ.

ಹೆಚ್ಚುವರಿ ಸತ್ರ ನ್ಯಾಯಾಧೀಶ ಎ.ಬಿ. ಭೋಜಕ್(A.B. Bhojak) ಅವರು ಗುರುವಾರ ನೀಡಿದ ಆದೇಶದಲ್ಲಿ ಗೋಖಲೆ ವಿರುದ್ಧ ಬಲವಾದ ಪ್ರಕರಣ ಇದೆ. ಅವರು ರಾಜಕೀಯ ಕಾರ್ಯಕರ್ತನಾಗಿರುವುದರಿಂದ ಈ ಹಂತದಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಸಾಕ್ಷಗಳನ್ನು ತಿರುಚುವ ಹಾಗೂ ನಾಶಪಡಿಸುವ ಸಾಧ್ಯತೆ ಇದೆ ಎಂದು ಅಭಿಪ್ರಾಯಿಸಿದರು.

ಈ ಹಿಂದೆ ಜನವರಿ 5ರಂದು ಪೊಲೀಸ್ ಕಸ್ಟಡಿ ಪೂರ್ಣಗೊಂಡ ಬಳಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅವರಿಗೆ ಜಾಮೀನು ನೀಡಲು ನಿರಾಕರಿಸಿತ್ತು. ಕ್ರೌಡ್ ಫಂಡಿಂಗ್ ಮೂಲಕ ಸಂಗ್ರಹಿಸಿದ ಹಣವನ್ನು ದುರ್ಬಳಕೆ ಮಾಡಿದ ಆರೋಪದ ಪ್ರಕರಣದಲ್ಲಿ ದಿಲ್ಲಿಯ ಅಹ್ಮದಾಬಾದ್ ಸೈಬರ್ ಕ್ರೈಮ್ ಬ್ರಾಂಚ್ ಡಿಸೆಂಬರ್ 30ರಂದು ಸಾಕೇತ್ ಗೋಖಲೆಯನ್ನು ಬಂಧಿಸಿತ್ತು.

ತಾನು ಆನ್ಲೈನ್ ಮೂಲಕ ಸಾಕೇತ್ ಗೋಖಲೆಗೆ 500 ರೂ. ದೇಣಿಗೆ ನೀಡಿದ್ದೇನೆ ಎಂದು ಪ್ರತಿಪಾದಿಸಿ ಅಹ್ಮದಾಬಾದ್ ನಗರದ ನಿವಾಸಿಯೊಬ್ಬರು ದಾಖಲಿಸಿದ ದೂರಿನ ಆಧಾರದಲ್ಲಿ ಅವರ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ. ಸಾಕೇತ್ ಗೋಖಲೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ಎದುರಿಸುತ್ತಿದ್ದಾರೆ. 

Similar News