ಗ್ಯಾಂಗ್‌ಸ್ಟರ್ ಛೋಟಾ ರಾಜನ್ ಹುಟ್ಟುಹಬ್ಬದ ಪೋಸ್ಟರ್‌ಗಳು ಪ್ರತ್ಯಕ್ಷ: ಆರು ಜನರ ಬಂಧನ

Update: 2023-01-14 16:34 GMT

ಮುಂಬೈ,ಜ.14: ಶನಿವಾರ ಮತ್ತು ರವಿವಾರ ಗ್ಯಾಂಗ್‌ಸ್ಟರ್ ಛೋಟಾ ರಾಜನ್ ಹುಟ್ಟುಹಬ್ಬ ಆಚರಣೆ ಕುರಿತು ಪೋಸ್ಟರ್‌ಗಳನ್ನು ಪ್ರದರ್ಶಿಸಿದ್ದಕ್ಕಾಗಿ ಕಬಡ್ಡಿ ಕಾರ್ಯಕ್ರಮವೊಂದರ ಸಂಘಟಕ ಸೇರಿದಂತೆ ಆರು ಜನರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಮುಂಬೈನ ಮಲಾಡ್ ಪ್ರದೇಶದಲ್ಲಿ ಪೋಸ್ಟರ್‌ಗಳನ್ನು ಅಂಟಿಸಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಪೋಸ್ಟರ್‌ಗಳು ರಾಜನ್ ಹುಟ್ಟುಹಬ್ಬದ ಅಂಗವಾಗಿ ಜ.14 ಮತ್ತು 15ರಂದು ಆಯೋಜಿಸಲಾದ ಕಬಡ್ಡಿ ಪಂದ್ಯಾಟಕ್ಕೆ ‘ಗೌರವಾನ್ವಿತ ಗಣ್ಯರಿಗೆ ಸ್ವಾಗತ ’ ಕೋರಿದ್ದವು.

2015ರಲ್ಲಿ ಇಂಡೋನೇಶ್ಯಾದ ಬಾಲಿಯಲ್ಲಿ ಬಂಧಿಸಲ್ಪಟ್ಟಿದ್ದ ರಾಜನ್‌ನನ್ನು ಭಾರತಕ್ಕೆ ಗಡಿಪಾರು ಮಾಡಲಾಗಿತ್ತು. ಆಗಿನಿಂದಲೂ ಆತ ದಿಲ್ಲಿಯ ತಿಹಾರ ಜೈಲಿನಲ್ಲಿದ್ದಾನೆ.

2011ರಲ್ಲಿ ಪತ್ರಕರ್ತ ಜೆ.ಡೇ ಅವರ ಹತ್ಯೆಗಾಗಿ 2018ರಲ್ಲಿ ರಾಜನ್‌ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿತ್ತು.

Similar News