ವಿರಾಟ್ ಕೊಹ್ಲಿ ಬ್ಯಾಟಿಂಗ್‌ಗೆ ಡಿವಿಲಿಯರ್ಸ್ ಶ್ಲಾಘನೆ

Update: 2023-01-16 13:54 GMT

ಹೊಸದಿಲ್ಲಿ, ಜ.16: ಶ್ರೀಲಂಕಾ ವಿರುದ್ಧ ರವಿವಾರ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು 317 ರನ್‌ಗಳಿಂದ ಜಯ ಸಾಧಿಸಿರುವ ಟೀಮ್ ಇಂಡಿಯಾ ಇತಿಹಾಸ ನಿರ್ಮಿಸಿತ್ತು. 50 ಓವರ್‌ಗಳ ಕ್ರಿಕೆಟ್‌ನಲ್ಲಿ ರೋಹಿತ್ ಬಳಗ ಭಾರೀ ರನ್ ಅಂತರದ ಗೆಲುವು ದಾಖಲಿಸಿತ್ತು. ಲಂಕಾ ವಿರುದ್ಧದ ಸರಣಿಯಲ್ಲಿ ಭಾರತ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ‘ವಿರಾಟ್’ ಬ್ಯಾಟಿಂಗ್‌ನಿಂದ ಅಭಿಮಾನಿಗಳು ಸಂಭ್ರಮಪಟ್ಟಿದ್ದಾರೆ.

ಕೊಹ್ಲಿ 3ನೇ ಏಕದಿನ ಪಂದ್ಯದಲ್ಲಿ ಔಟಾಗದೆ 166 ರನ್ ಗಳಿಸಿದ್ದರು. ಇದು ಅವರ 46ನೇ ಏಕದಿನ ಶತಕವಾಗಿತ್ತು. 34ರ ಹರೆಯದ ಕೊಹ್ಲಿ ಸರಣಿಯಲ್ಲಿ 2 ಶತಕ ಸಹಿತ ಒಟ್ಟು 283 ರನ್ ಗಳಿಸಿ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ವಿರಾಟ್ ಅವರ ಭರ್ಜರಿ ಬ್ಯಾಟಿಂಗ್‌ಗೆ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರಿಂದ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ. ಕೊಹ್ಲಿ ಅವರ ಮಾಜಿ ಐಪಿಎಲ್ ಸಹ ಆಟಗಾರ ಹಾಗೂ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಲೆಜೆಂಡ್ ಎಬಿ ಡಿವಿಲಿಯರ್ಸ್ ಅವರು ವಿರಾಟ್‌ರನ್ನು ಬಾಯ್ತುಂಬ ಹೊಗಳಿದರು.
‘ಬೇರಯದ್ದೇ ಲೆವೆಲ್’ ಎಂದು ಟ್ವೀಟಿಸಿರುವ ಡಿವಿಲಿಯರ್ಸ್ ಅವರು ಕೊಹ್ಲಿಯವರನ್ನು ಕೊಂಡಾಡಿದರು.
  
ಭಾರತದ ಹಿರಿಯ ವಿಕೆಟ್‌ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಅವರು ಡಿವಿಲಿಯರ್ಸ್ ಪೋಸ್ಟ್‌ನ್ನು ರೀ ಟ್ವೀಟ್ ಮಾಡಿದರು. ‘ಇದನ್ನು ವೇರಾ ಲೆವೆಲ್ ಎಂದು ಕರೆಯುತ್ತಾರೆ. ವಿರಾಟ್ ಕೊಹ್ಲಿ ಅವರನ್ನು ಕೇಳಿ ಅವರು ಹೇಳುತ್ತಾರೆ. ಐಪಿಎಲ್‌ನಲ್ಲಿ ಭೇಟಿಯಾಗೋಣ ’ ಎಂದು ಕಾರ್ತಿಕ್ ಟ್ವೀಟಿಸಿದ್ದಾರೆ.

ವಿರಾಟ್ ಹಾಗೂ ಡಿವಿಲಿಯರ್ಸ್ ಹಲವು ವರ್ಷಗಳ ಕಾಲ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಒಟ್ಟಿಗೆ ಆಡಿದ್ದರು. ಆರ್‌ಸಿಬಿ ಪರ ಈ ಇಬ್ಬರು ಆಟಗಾರರು ಅದ್ಭುತ ಇನಿಂಗ್ಸ್ ಆಡಿದ್ದರು. 2021ರಲ್ಲಿ ಡಿವಿಲಿಯರ್ಸ್ ನಿವೃತ್ತಿಯಾಗುವ ತನಕವೂ ಇಬ್ಬರೂ ಮ್ಯಾಚ್ ವಿನ್ನಿಂಗ್ ಜೊತೆಯಾಟ ನಡೆಸಿದ್ದರು.
 

Similar News