ನ್ಯಾಯಾಂಗ ನೇಮಕಾತಿ ಸಮಿತಿಯಲ್ಲಿ ಸರಕಾರದ ಪ್ರತಿನಿಧಿಯನ್ನು ಸೇರಿಸಿ: CJIಗೆ ಕಾನೂನು ಸಚಿವರ ಪತ್ರ

ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದ ಕೇಜ್ರಿವಾಲ್

Update: 2023-01-16 17:09 GMT

ಹೊಸದಿಲ್ಲಿ, ಜ. 16: ಉನ್ನತ ನ್ಯಾಯಾಂಗಕ್ಕೆ ನೇಮಕಾತಿಗಳನ್ನು ಮಾಡುವ ಪ್ರಕ್ರಿಯೆಯಲ್ಲಿ ಸರಕಾರದ ಪ್ರತಿನಿಧಿಯನ್ನು ಸೇರಿಸಿಕೊಳ್ಳುವಂತೆ ಸಲಹೆ ನೀಡುವ ಪತ್ರವೊಂದನ್ನು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು(Kiren Rijiju) ಭಾರತದ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್(D Y. Chandrachud) ಗೆ ಬರೆದಿದ್ದಾರೆ.

ಉನ್ನತ ನ್ಯಾಯಾಂಗಕ್ಕೆ ನೇಮಕಾತಿಗಳನ್ನು ಮಾಡುವ ವಿಚಾರದಲ್ಲಿ ಕೇಂದ್ರ ಸರಕಾರ ಮತ್ತು ನ್ಯಾಯಾಂಗದ ನಡುವೆ ನಡೆಯುತ್ತಿರುವ ಜಟಾಪಟಿಯ ನಡುವೆಯೇ ಕಾನೂನು ಸಚಿವರು ಈ ಪತ್ರವನ್ನು ಬರೆದಿದ್ದಾರೆ.

ಸುಪ್ರೀಂ ಕೋರ್ಟ್ ಗೆ ನ್ಯಾಯಾಧೀಶರನ್ನು ನೇಮಿಸುವ ಪ್ರಕ್ರಿಯೆಯಲ್ಲಿ ಕೇಂದ್ರ ಸರಕಾರದ ಪ್ರತಿನಿಧಿಯೊಬ್ಬರನ್ನು ಮತ್ತು ಹೈಕೋರ್ಟ್ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯಲ್ಲಿ ಸಂಬಂಧಿತ ರಾಜ್ಯ ಸರಕಾರದ ಪ್ರತಿನಿಧಿಯೊಬ್ಬರನ್ನು ನೇಮಿಸಿಕೊಳ್ಳುವಂತೆ ಕಾನೂನು ಸಚಿವರು ಸಲಹೆ ನೀಡಿದ್ದಾರೆ.

ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದ ಪರಿಷ್ಕೃತ ವಿಧಿವಿಧಾನ ಪ್ರಕ್ರಿಯೆಯನ್ನು ಇನ್ನಷ್ಟೇ ಅಂತಿಮಗೊಳಿಸಬೇಕಾಗಿದೆ ಎಂಬುದಾಗಿ ರಿಜಿಜು ತನ್ನ ಪತ್ರದಲ್ಲಿ ಹೇಳಿದ್ದಾರೆ ಹಾಗೂ ಈ ಪ್ರಕ್ರಿಯೆಯನ್ನು ಹೇಗೆ ಪರಿಣಾಮಕಾರಿಗೊಳಿಸಬಹುದು ಎಂಬ ಬಗ್ಗೆ ಸಲಹೆಗಳನ್ನು ನೀಡಿದ್ದಾರೆ.

2014ರಲ್ಲಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿಗಳ ಆಯೋಗ ಕಾಯ್ದೆಯನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠವೊಂದು, ವಿಧಿವಿಧಾನ ಪ್ರಕ್ರಿಯೆಯನ್ನು ಪುನರ್ರಚಿಸಲು ಕರೆ ನೀಡಿತ್ತು ಎನ್ನುವುದನ್ನು ಕಾನೂನು ಸಚಿವರು ಸ್ಮರಿಸಿದ್ದಾರೆ.

2014ರಲ್ಲಿ ಮೋದಿ ಸರಕಾರವು ಅಧಿಕಾರಕ್ಕೆ ಬಂದ ಕೂಡಲೇ, ಉನ್ನತ ನ್ಯಾಯಾಂಗಕ್ಕೆ ನ್ಯಾಯಾಧೀಶರನ್ನು ನೇಮಿಸುವ ಕೊಲೀಜಿಯಮ್ ವ್ಯವಸ್ಥೆಯ ಬದಲಿಗೆ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿಗಳ ಆಯೋಗವನ್ನು ಪರಿಚಯಿಸಿತ್ತು. ಇದರ ಪ್ರಕಾರ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು, ಸುಪ್ರೀಂ ಕೋರ್ಟ್ ನ ಇಬ್ಬರು ಹಿರಿಯ ನ್ಯಾಯಾಧೀಶರು, ಕಾನೂನು ಸಚಿವರು ಹಾಗೂ ಮುಖ್ಯ ನ್ಯಾಯಾಧೀಶರು, ಪ್ರಧಾನಿ ಮತ್ತು ಪ್ರತಿಪಕ್ಷ ನಾಯಕ ನೇಮಿಸುವ ಇಬ್ಬರು ಉನ್ನತ ಸ್ಥಾನಮಾನದ ವ್ಯಕ್ತಿಗಳನ್ನು ಹೊಂದಿರುವ ಆಯೋಗವೊಂದು ಉನ್ನತ ನ್ಯಾಯಾಂಗಕ್ಕೆ ನೇಮಕಾತಿಗಳನ್ನು ಮಾಡಬೇಕಾಗಿತ್ತು.

ಪ್ರಸಕ್ತ ಚಾಲ್ತಿಯಲ್ಲಿರುವ ಕೊಲೀಜಿಯಮ್ ವ್ಯವಸ್ಥೆಯ ಪ್ರಕಾರ, ಮುಖ್ಯ ನ್ಯಾಯಾಧೀಶರು ಸೇರಿದಂತೆ ಸುಪ್ರೀಂ ಕೋರ್ಟ್ನ ಅತಿ ಹಿರಿಯ ನ್ಯಾಯಾಧೀಶರ ಸಮಿತಿಯೊಂದು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರ ನೇಮಕಾತಿಗಳು ಮತ್ತು ವರ್ಗಾವಣೆಗಳ ಬಗ್ಗೆ ನಿರ್ಧರಿಸುತ್ತದೆ.

ವಿಧಿವಿಧಾನಗಳ ಪ್ರಕ್ರಿಯೆ (ಮೆಮರಾಂಡಮ್ ಆಫ್ ಪ್ರೊಸೀಜರ್)ಯನ್ನು ಸರಕಾರವು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರೊಂದಿಗೆ ಸಮಾಲೋಚಿಸಿ ರೂಪಿಸುತ್ತದೆ. ಇದು ಸುಪ್ರೀಂ ಕೋರ್ಟ್ ಮತ್ತು ವಿವಿಧ ಹೈಕೋರ್ಟ್ಗಳ ನ್ಯಾಯಾಧೀಶರ ನೇಮಕಾತಿಗೆ ವಿಧಿವಿಧಾನಗಳನ್ನು ಒಳಗೊಂಡಿರುತ್ತದೆ. ಅದನ್ನು 1947ರ ನವೆಂಬರ್ನಲ್ಲಿ ಮೊದಲು ಹೊರಡಿಸಲಾಗಿತ್ತು ಹಾಗೂ ಆ ಬಳಿಕ ಪರಿಷ್ಕರಿಸಲಾಗಿದೆ.

ಇತ್ತೀಚಿನ ತಿಂಗಳುಗಳಲ್ಲಿ, ಕೊಲೀಜಿಯಮ್ ವ್ಯವಸ್ಥೆಯನ್ನು ವಿರೋಧಿಸಿ ರಿಜಿಜು ಅಭಿಯಾನವನ್ನೇ ನಡೆಸಿದ್ದಾರೆ. ‘‘ಕೊಲೀಜಿಯಮ್ ವ್ಯವಸ್ಥೆಯು ಸಂವಿಧಾನಕ್ಕೆ ಅನುಗುಣವಾಗಿಲ್ಲ’’ ಎಂಬುದಾಗಿ ನವೆಂಬರ್ 26ರಂದು ಸುದ್ದಿ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ತಾನು ಮಾಡುವ ಎಲ್ಲಾ ಶಿಫಾರಸುಗಳನ್ನು ಸರಕಾರ ಕಣ್ಣುಮುಚ್ಚಿ ಸ್ವೀಕರಿಸಬೇಕು ಎಂಬುದಾಗಿ ಕೊಲೀಜಿಯಮ್ ನಿರೀಕ್ಷಿಸಬಾರದು ಎಂಬುದಾಗಿಯೂ ಸಚಿವರು ಹೇಳಿದ್ದರು.

ಅತ್ಯಂತ ಅಪಾಯಕಾರಿ ಬೆಳವಣಿಗೆ: ಕೇಜ್ರಿವಾಲ್

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಕಾನೂನು ಸಚಿವ ರಿಜಿಜು ಬರೆದಿರುವ ಪತ್ರಕ್ಕೆ ಪ್ರತಿಕ್ರಿಯಿಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಇದು ಅತ್ಯಂತ ಅಪಾಯಕಾರಿ ಬೆಳವಣಗೆ ಎಂದು ಬಣ್ಣಿಸಿದ್ದಾರೆ.

‘‘ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ನ್ಯಾಯಾಂಗ ನೇಮಕಾತಿಗಳಲ್ಲಿ ಸರಕಾರದ ಲವಲೇಶ ಹಸ್ತಕ್ಷೇಪವೂ ಇರಬಾರದು’’ ಎಂಬುದಾಗಿ ಅವರು ಸೋಮವಾರ ಟ್ವೀಟ್ ಮಾಡಿದ್ದಾರೆ.

Similar News