ಕಾಶ್ಮೀರ: ಇಬ್ಬರು ಶಂಕಿತ ಉಗ್ರರ ಹತ್ಯೆ‌

Update: 2023-01-17 16:00 GMT

ಶ್ರೀನಗರ, ಜ. 17: ಕೇಂದ್ರ ಕಾಶ್ಮೀರದ ಬುಡ್ಗಾಂವ್ ನಲ್ಲಿ ಭದ್ರತಾ ಪಡೆ ಹಾಗೂ ಶಂಕಿತ ಉಗ್ರರ ನಡುವಿನ ಗುಂಡಿನ ಕಾಳಗದಲ್ಲಿ ವಾಹನವೊಂದರಲ್ಲಿ ತೆರಳುತ್ತಿದ್ದ ಲಷ್ಕರೆ ತಯ್ಯಿಬದ ಇಬ್ಬರು ಶಂಕಿತ ಉಗ್ರರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಸೇನೆ ಹಾಗೂ ಪೊಲೀಸ್ ಕೇಂದ್ರ ಕಾಶ್ಮೀರದ ಬುಡ್ಗಾಂವ್ ನ ನ್ಯಾಯಾಲಯ ಸಂಕೀರ್ಣದ ಸಮೀಪ ಮಂಗಳವಾರ ಬೆಳಗ್ಗೆ ಶಂಕಿತ ವಾಹನವೊಂದನ್ನು ತಡೆಯಲು ಪ್ರಯತ್ನಿಸಿತು. ವಾಹನಕ್ಕೆ ತಡೆ ಒಡ್ಡಿದಾಗ, ಅದರಲ್ಲಿ ಪ್ರಯಾಣಿಸುತ್ತಿದ್ದ ಶಂಕಿತ ಉಗ್ರರು ಭದ್ರತಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದರು. ಭದ್ರತಾ ಸಿಬ್ಬಂದಿ ಪ್ರತಿ ದಾಳಿ ನಡೆಸಿದರು. ಈ ಗುಂಡಿನ ಚಕಮಕಿಯಲ್ಲಿ ಇಬ್ಬರು ಶಂಕಿತ ಉಗ್ರರು ಹತರಾದರು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಹತರಾದ ಇಬ್ಬರು ಶಂಕಿತ ಉಗ್ರರು ಲಷ್ಕರೆ ತಯ್ಯಿಬ ಉಗ್ರಗಾಮಿ ಸಂಘಟನೆಗೆ ಸೇರಿದವರು. ಅವರನ್ನು ಅರ್ಬಾಝ್ ಮಿರ್ ಹಾಗೂ ಶಾಹಿದ್ ಶೇಖ್ ಎಂದು ಗುರುತಿಸಲಾಗಿದೆ.

ಇಬ್ಬರೂ ದಕ್ಷಿಣ ಕಾಶ್ಮೀರದ ಪುಲ್ವಾಮದ ನಿವಾಸಿಗಳು ಎಂದು ಕಾಶ್ಮೀರದ ಎಡಿಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಗುಂಡಿನ ಕಾಳಗವೊಂದರಲ್ಲಿ ಈ ಇಬ್ಬರು ಉಗ್ರರು ಪರಾರಿಯಾಗಿದ್ದರು ಎಂದು ಅವರು ತಿಳಿಸಿದ್ದಾರೆ. ಭಯೋತ್ಪಾದನೆ ಪೀಡಿತ ಕಾಶ್ಮೀರದಲ್ಲಿ 2023ರಲ್ಲಿ ಶಂಕಿತ ಉಗ್ರರು ಹಾಗೂ ಭದ್ರತಾ ಪಡೆ ನಡುವೆ ನಡೆದೆ ಮೊದಲ ಗುಂಡಿನ ಕಾಳಗ ಇದಾಗಿದೆ.

Similar News