ದ್ವಿತೀಯ ಏಕದಿನ: ನ್ಯೂಝಿಲ್ಯಾಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ, ಸರಣಿ ಕೈವಶ

Update: 2023-01-21 14:59 GMT

ರಾಯ್‌ಪುರ, ಜ.21: ಹಿರಿಯ ವೇಗದ ಬೌಲರ್ ಮುಹಮ್ಮದ್ ಶಮಿ ನೇತೃತ್ವದ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ದಾಳಿ, ನಾಯಕ ರೋಹಿತ್ ಶರ್ಮಾ ಗಳಿಸಿದ ಅರ್ಧಶತಕದ(51 ರನ್, 50 ಎಸೆತ, 7 ಬೌಂಡರಿ, 2 ಸಿಕ್ಸರ್)ಬೆಂಬಲದಿಂದ ಭಾರತವು ನ್ಯೂಝಿಲ್ಯಾಂಡ್ ವಿರುದ್ಧದ 2ನೇ ಏಕದಿನ ಪಂದ್ಯವನ್ನು 8 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿತು.ಈ ಮೂಲಕ 3 ಪಂದ್ಯಗಳ ಸರಣಿಯನ್ನು ಇನ್ನೂ 1 ಪಂದ್ಯ ಬಾಕಿ ಇರುವಾಗಲೇ ವಶಪಡಿಸಿಕೊಂಡಿತು.

 ಶನಿವಾರ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ನ್ಯೂಝಿಲ್ಯಾಂಡ್ 34.3 ಓವರ್‌ಗಳಲ್ಲಿ 108 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಗೆಲ್ಲಲು ಸುಲಭ ಸವಾಲು ಪಡೆದಿದ್ದ ಭಾರತ 20.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಔಟಾಗದೆ 40 ರನ್ (53 ಎಸೆತ, 6 ಬೌಂಡರಿ) ಗಳಿಸಿದರು. ಕಿವೀಸ್ ಪರ ಹೆನ್ರಿ ಶಿಪ್ಲೆ(1-29) ಹಾಗೂ ಮಿಚೆಲ್ ಸ್ಯಾಂಟ್ನರ್(1-24)ತಲಾ ಒಂದು ವಿಕೆಟ್ ಪಡೆದರು.

ಆತಿಥೇಯರ ಪರ ಶಮಿ(3-18)ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರೆ, ವಾಶಿಂಗ್ಟನ್ ಸುಂದರ್(2-7) ಹಾಗೂ ಹಾರ್ದಿಕ್ ಪಾಂಡ್ಯ(2-16)ತಲಾ ಎರಡು ವಿಕೆಟ್‌ಗಳನ್ನು ಪಡೆದರು. ಮುಹಮ್ಮದ್ ಸಿರಾಜ್(1-10), ಶಾರ್ದೂಲ್ ಠಾಕೂರ್(1-26) ಹಾಗೂ ಕುಲದೀಪ್ ಯಾದವ್(1-29)ತಲಾ ಒಂದು ವಿಕೆಟ್ ಉರುಳಿಸಿದರು.

ನ್ಯೂಝಿಲ್ಯಾಂಡ್ ಪರವಾಗಿ ಗ್ಲೆನ್ ಫಿಲಿಪ್ಸ್(36 ರನ್)ಸರ್ವಾಧಿಕ ಸ್ಕೋರ್ ಗಳಿಸಿದರು. ಮೊದಲ ಪಂದ್ಯದಲ್ಲಿ ಮಿಂಚಿದ್ದ ಮಿಚೆಲ್ ಸ್ಯಾಂಟ್ನರ್(27 ರನ್) ಹಾಗೂ ಬ್ರೆಸ್‌ವೆಲ್(22)ಎರಡಂಕೆಯ ಸ್ಕೋರ್ ಗಳಿಸಿದರು.
 

Similar News