ಮನೋದೇಹದ ಹಸಿವು

Update: 2023-01-22 07:45 GMT

ಮನಸ್ಸಿನ ಅಸ್ತಿತ್ವ ಇರುವುದೇ ನಾನು ಎಂಬ ಭಾವದಲ್ಲಿ. ಅಥವಾ ಇದನ್ನು ಉಲ್ಟಾ ಕೂಡಾ ಹೇಳಬಹುದು. ನಾನು ಎಂಬ ಭಾವ ಇರುವುದೇ ಮನಸ್ಸಿನ ಅಸ್ತಿತ್ವದಲ್ಲಿ. ನಾನು ಎಂಬ ಭಾವ ಹೊರಟು ಹೋದರೆ ಮನಸ್ಸೂ ಇಲ್ಲ, ಮನಸ್ಸಿಲ್ಲದ ಸ್ಥಿತಿ ಎಂದರೆ ನಾನು ಎಂಬ ಭಾವ ಇಲ್ಲದ್ದು. ವಿಶ್ವದ ಯಾವುದೇ ಜೀವವು ಇರಲು, ಉಳಿಯಲು, ಅಳಿಯದಿರಲು ಯತ್ನಿಸುತ್ತದೆಯೋ ಹಾಗೆಯೇ ಈ ನಾನು ಎಂಬ ಭಾವವೂ ಕೂಡ ಯತ್ನಿಸುವುದರಿಂದ ಅದೂ ಕೂಡಾ ಜೀವಂತವಾಗಿದೆ ಎಂದು ಸಾಬೀತಾಗಿದೆ. ಅದು ಅಮೂರ್ತವಾಗಿರುವುದರಿಂದ ಸಿಕ್ಕ ಸಿಕ್ಕ ವಿಷಯಗಳಲ್ಲೆಲ್ಲಾ ಹೊಕ್ಕು ತನಗೊಂದು ಮೂರ್ತಿಯನ್ನು, ಸ್ವರೂಪವನ್ನು ತಂದುಕೊಳ್ಳಲು, ಅದರಲ್ಲಿ ತನ್ನನ್ನು ನೋಡಿಕೊಳ್ಳಲು ಸದಾ ಯತ್ನಿಸುತ್ತಿರುತ್ತದೆ. ಸಹಜವಾಗಿ ತನಗೆ ಇಲ್ಲದೆ ಇರುವುದರಲ್ಲಿ ತಾನು ಹೊಕ್ಕು ಅದೇ ತಾನಾಗಿರುವಂತೆ ಭಾವಿಸುವ ಮೋಹ. ಈ ಜಾನಪದೀಯ ನಂಬಿಕೆಗಳಲ್ಲಿ ದೆವ್ವ ಮತ್ತು ಭೂತಗಳಿರುವುದಿಲ್ಲವೇ ಹಾಗೆಯೇ. ಪ್ರಾಯಶಃ ಮನಸ್ಸಿನ ಗಾಢ ಭಾವನೆಗಳನ್ನು, ಆಸೆಗಳನ್ನು ಮತ್ತು ಮೋಹವನ್ನು ಗುರುತಿಸಿದ ನಮ್ಮ ಪೂರ್ವಜರಲ್ಲಿನ ಪರಿಕಲ್ಪನಾಕಾರರು ದೆವ್ವದ ಪರಿಕಲ್ಪನೆಯನ್ನು ಮುಂದಿಟ್ಟರು ಎಂದು ಭಾವಿಸುತ್ತೇನೆ.

ಅದೇನೇ ಇರಲಿ, ಒಟ್ಟಾರೆ ಮನಸ್ಸಿಗೆ ನಾನತ್ವದ ಭಾವವು ಗಾಢವೂ, ಮೋಹಪರವಶವೂ ಆಗಿರುತ್ತದೆ. ಬಹಳ ಮುಖ್ಯವಾಗಿ ಉಳಿಯುವ ಮತ್ತು ಅಳಿಯದಿರುವ ಪ್ರವೃತ್ತಿ ಅದರ ಪ್ರಕೃತಿ. ಹಸಿವು ಎಂಬ ಗೋಳನ್ನು ಕಿವಿಗೊಟ್ಟು ಆಲಿಸಿದರೆ ಕೇಳುವುದೇನೆಂದರೆ ಉಳಿಯುವ ಆಸೆ, ಅಳಿಯುವ ಭಯ. ಹಸಿವು ಬರಿಯ ದೈಹಿಕವಾಗಿ ಎಂದಿಗೂ ಅಲ್ಲ. ಅದು ಅತ್ಯಂತ ಗಾಢವಾಗಿ ಮಾನಸಿಕ. ಅದು ಶರೀರದ ಮೂಲಕ ತೃಪ್ತಿಪಡೆಯಲು ಯತ್ನಿಸುತ್ತದೆ. ಇಷ್ಟು ಗಮನಿಸಿಕೊಳ್ಳುವ ಮನಸ್ಸು ತನ್ನ ಎಲ್ಲಾ ವಾಂಛೆಗಳನ್ನು ಶರೀರದ ಮೂಲಕ ತೃಪ್ತಿಪಡಿಸಿಕೊಳ್ಳಲು ಯತ್ನಿಸುತ್ತದೆ. ಹಾಗಾಗಿ ಶರೀರ ಉಳಿದರೆ ತಾನುಳಿದಂತೆ ಎಂಬ ಭಾವ. ಅದು ತಕ್ಕ ಮಟ್ಟಿಗೆ ನಿಜವೂ ಹೌದು. ನೋಡುವ ಆಸೆಯನ್ನು ಕಣ್ಣುಗಳು ಪೂರೈಸಬೇಕು. ಸಂಗೀತ ಕೇಳುವ ಬಯಕೆಯನ್ನು ಕಿವಿಗಳು ಈಡೇರಿಸುತ್ತವೆ. ಹಾಗೆಯೇ ಕಾಮುಕತನವೂ ಕೂಡಾ ದೇಹದ ಮೂಲಕವೇ ತಣಿಯಬೇಕು. ಕಾಮುಕತನವು ಎಂದಿಗೂ ಬರಿಯ ದೇಹದಲ್ಲಿ ಇಲ್ಲವೇ ಇಲ್ಲ. ಅದಿರುವುದೇ ಮನಸ್ಸಿನಲ್ಲಿ. ಈಗ ಮನಸ್ಸಿನ ಇನ್ನೂ ಕೆಲವು ಪದರಗಳನ್ನು ಸಡಿಲಿಸುವ.

ಸಾಮಾನ್ಯ ಹಸಿವಿರುವ ಯಾವುದೇ ಪ್ರಾಣಿ ಏನು ಮಾಡುತ್ತದೆ ಗಮನಿಸಿ. ಹಸಿವು ಹೆಚ್ಚಾದಷ್ಟು ಅದು ಕನಲುತ್ತದೆ. ಭಯಂಕರ ಡಿಸ್ಟರ್ಬ್ ಆಗುತ್ತದೆ. ಒಂದು ವೇಳೆ ಅದು ಬಲಾಢ್ಯವಾಗಿದ್ದರೆ ವ್ಯಗ್ರವಾಗುತ್ತದೆ. ಇಲ್ಲವೇ ದುರ್ಬಲವಾಗಿದ್ದರೆ ದೀನವಾಗುತ್ತದೆ. ಆಹಾರಕ್ಕಾಗಿ ಪ್ರಾಣಿಗಳು ಹೋರಾಡುವ ಅಥವಾ ದುರ್ಬಲವಾಗಿರುವ ಪ್ರಾಣಿಗಳು ಆಹಾರಕ್ಕಾಗಿ ದೈನೇಸಿಯಲ್ಲಿ ಬೇಡುವುದನ್ನು ಅನೇಕ ಕಡೆ ಸಾಕ್ಷೀಕರಿಸಿದ್ದೇವೆ. ಅದರಂತೆ ಥೇಟ್ ಮನುಷ್ಯ. ಆ ಹೊತ್ತಿನ ಹಸಿವನ್ನು ನೀಗಿಕೊಳ್ಳಲು ಅಂಗಲಾಚುವುದನ್ನು ಕಂಡಿದ್ದೇವೆ. ಹಸಿವಾಗುತ್ತಿದ್ದಂತೆ ಜೈವಿಕವಾಗಿಯೇ ತಳಮಳ ಪ್ರಾರಂಭವಾಗುತ್ತದೆ. ಆ ತಳಮಳವನ್ನು ಹತ್ತಿಕ್ಕಲು ಸಾಧ್ಯವೇ ಇಲ್ಲ ಎನಿಸುವಂತಾಗಿಬಿಡುತ್ತದೆ. ಆಗ ಹೇಗಾದರೂ, ಎಂತಾದರೂ ಅದನ್ನು ಶಮನ ಮಾಡಿಕೊಳ್ಳುವುದರ ಮೂಲಕ ಅಬ್ಬಾ, ಬದುಕಿದೆ ಎಂಬ ನೆಮ್ಮದಿಯ ನಿಟ್ಟುಸಿರು ಹೊರಬೀಳುತ್ತದೆ. ಮುಂದೆ ಆಹಾರ ಸಿಗುವುದೋ ಇಲ್ಲವೋ, ಆದರೆ ಈಗ ನಾನು ಬದುಕಿದೆ ಎಂಬ ಭಾವವಿದೆಯಲ್ಲಾ, ಅದು ನಿಜವಾಗಿಯೂ ಮನಸ್ಸಿನದು.

ದೈಹಿಕವಾಗಿ ಹಸಿವಿನ ಶಮನ ಆ ಹೊತ್ತಿನದು. ಹಾಗೆಯೇ ಮನಸ್ಸಿಗೂ ಹಸಿವಿದೆ ಎಂದೆನೆಲ್ಲಾ, ಅದೇ ಉಳಿಯುವ ಆಸೆ, ಅಳಿಯುವ ಭೀತಿಯಿಂದ ಕನಲುತ್ತದೆಯಲ್ಲಾ, ಆ ಮನಸ್ಸಿನ ವಿಷಯಗಳೂ ಕೂಡಾ ತಾನು ಉಳಿಯಲು ಸಿಕ್ಕಿದ್ದನ್ನೆಲ್ಲಾ ಕಬಳಿಸಲು ಹೋಗುತ್ತಿರುತ್ತದೆ. ವಿಷಯವೇನೆಂದರೆ, ದೈಹಿಕವಾಗಿ ಉಳಿದರೂ ಮನಸ್ಸಿಗೆ ಸಮಾಧಾನವಿಲ್ಲ. ಅಮೂರ್ತವಾಗಿರುವ ತಾನು ಸ್ವರೂಪವನ್ನು ಕಳೆದುಕೊಂಡುಬಿಟ್ಟೇನು ಎಂಬ ಭಯದಲ್ಲಿ ಸಿಕ್ಕಪಕ್ಕ ವಿಷಯಗಳಲ್ಲೆಲ್ಲಾ ನುಗ್ಗುತ್ತಿರುತ್ತದೆ ಮತ್ತು ತನ್ನ ಆಧಿಪತ್ಯವನ್ನು ಪ್ರತಿಷ್ಠಾಪಿಸಲು ಯತ್ನಿಸುತ್ತಿರುತ್ತದೆ. ಹಠಾತ್ತಾಗಿಯೇ ನುಗ್ಗುವ ಅದರ ಗುಣ ತೀರಾ ಸ್ವಾಭಾವಿಕ. ಹಾಗಾಗಿಯೇ ಸ್ಪರ್ಧೆ ಎಂದರೆ ಅದಕ್ಕೊಂದು ವಿಶೇಷ ಉದ್ವೇಗ. ಗೆಲ್ಲುವುದು ಎಂದರೆ ಅದಕ್ಕೆ ವಿಪರೀತ ಒಲವು. ಸೋಲು ಎಂದರೆ ನಿರಾಶೆಯ ಅನುಭವ. ಹಠಾತ್ತಾಗಿ ವಿಷಯಗಳಲ್ಲಿ ಪ್ರವೇಶಿಸುವುದು, ಪ್ರತಿಕ್ರಿಯಿಸುವುದು, ಸ್ಪರ್ಧೆಯ ಉದ್ವೇಗದಲ್ಲಿಯೇ ಸದಾ ಕುದಿಯುತ್ತಿರುವುದು, ಗೆಲ್ಲುವುದಕ್ಕೆ ಹಪಹಪಿಸುತ್ತಿರುವುದು, ಸೋಲದಿರಲು ಯತ್ನಿಸುವುದು; ಇವೆಲ್ಲವೂ ಬಹಳ ಬಹಳ ಸಹಜವಾದ ಮನಸ್ಸಿನ, ತರಬೇತಿಗೊಂಡಿರದ ಮನಸ್ಸಿನ ಗುಣಗಳು.

ಸಾಮಾಜೀಕರಣ ಅಥವಾ ಸೋಶಿಯಲೈಜ್ ಮಾಡುವುದೆಂದರೆ ಇದೇ, ಹಠಾತ್ತಾಗಿ ಮುನ್ನುಗ್ಗಿ ತನ್ನ ಮೃಗೀಯ ಪ್ರವೃತ್ತಿಯನ್ನು ತೋರದಿರುವಂತೆ ಚೌಕಟ್ಟುಗಳನ್ನು ನಿರ್ಮಿಸಿಕೊಂಡು, ಅದಕ್ಕೆ ರೀತಿ ನೀತಿ ಎಂದು ಹೆಸರಿಟ್ಟು, ನಾಗರಿಕತೆ ಎಂಬ ಪ್ರತಿಷ್ಠೆಯ ರೂಪಕೊಟ್ಟು, ಆ ಮೂಲಕವಾದರೂ ತನ್ನ ಅಹಮನ್ನು ಉನ್ನತದಲ್ಲೇ ಇಟ್ಟುಕೊಳ್ಳಲು ಯತ್ನಿಸುವುದು. ಅದೆಂತದ್ದೋ ಒಂದೊಳ್ಳೆ ಕೆಲಸ ಮಾಡಿ ಮಾನವತೆಯನ್ನು ಮೆರೆದರು ಅಂತ ಹೇಳುತ್ತಾರಲ್ಲಾ, ಅದರಲ್ಲೇನೂ ಆಶ್ಚರ್ಯವಿಲ್ಲ. ಮನಸ್ಸಿಗೆ ಸ್ಪರ್ಧಿಸುವ ಉದ್ವೇಗವಿದೆ, ಗೆಲ್ಲುವ ತವಕವಿದೆ, ಇತರರನ್ನು ಸೋಲಿಸುವ ಆಸೆಯಿದೆ; ಆದರೆ ಅದನ್ನು ಸ್ವಾರ್ಥ ಎಂದು ನಕಾರಾತ್ಮಕದ ಬದಿಗೆ ತಳ್ಳದೆ ಕರುಣೆಯನ್ನು ತೋರುವ, ಔದಾರ್ಯದಿಂದ ವರ್ತಿಸುವ ಮಾನವತೆಯನ್ನು ಮೆರೆಯುವ ಮೂಲಕ ಮನಸ್ಸು ತನ್ನ ಅಹಮನ್ನು ತೃಪ್ತಿಗೊಳಿಸಿಕೊಳ್ಳುತ್ತದೆ.

ಹೊಟ್ಟೆ ತುಂಬಿರುವ ಹುಲಿ ಅಥವಾ ಸಿಂಹಗಳೇ ಆಗಲಿ, ನಾಳೆಗೆ ನಾಡಿದ್ದಿಗೆ ಅಂತ ಹೋಗಿ ಬೇಟೆ ಆಡಿ, ಆ ಮಾಂಸವನ್ನು ಶೈತ್ಯಾಗಾರದಲ್ಲಿಟ್ಟುಕೊಂಡು ತಿನ್ನುವುದಿಲ್ಲ. ಹೊಟ್ಟೆ ತುಂಬಿರುವಾಗ ತನ್ನ ಮುಂದೆ ಹೋಗುವ ಜಿಂಕೆಯನ್ನು ಆಕಳಿಸಿಕೊಂಡು ನೋಡುತ್ತಿರುತ್ತವೆ. ಅನಗತ್ಯವಾಗಿ ಅದರ ಬೆನ್ನತ್ತಿ ತನ್ನ ಶಕ್ತಿಯನ್ನು ವ್ಯಯ ಮಾಡುವುದಿಲ್ಲ. ಉಂಡು ತೃಪ್ತನಾಗಿರುವ ಉಳ್ಳವನು ಉದಾರಿಯಾಗಿ ಸಮಾಜ ಸೇವೆ ಮಾಡುತ್ತಾ ತೆರಿಗೆ ವಿನಾಯಿತಿಯನ್ನು ಆನಂದಿಸುತ್ತಿರುತ್ತಾನೆ. ಸಂಪತ್ತನ್ನು ಉಳಿಸಿಕೊಳ್ಳುತ್ತಾನೆ. ಈ ಮನಸ್ಸಿಗೂ ಅಷ್ಟೇ ಒಂದೋ ತರಬೇತಿ ಸಿಕ್ಕು ರೂಢಿಯಾಗಬೇಕು ಅಥವಾ ತೃಪ್ತವಾಗಿರಬೇಕು. ಆಗ ಆಕ್ರಮಣಕಾರಿಯಾಗಿ ತನ್ನ ಹಸಿವನ್ನು ನೀಗಿಸಿಕೊಳ್ಳಲು ಮುಂದಾಗದು. 

Similar News

ನಾಸ್ತಿಕ ಮದ
ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು
ಗೀಳಿಗರು