ಕೇಂದ್ರ-ನ್ಯಾಯಾಂಗ ಸಂಘರ್ಷ: ನ್ಯಾಯಾಧೀಶರು ಚುನಾವಣೆಗಳನ್ನು ಎದುರಿಸುವುದಿಲ್ಲ; ರಿಜಿಜು

Update: 2023-01-23 18:25 GMT

ಹೊಸದಿಲ್ಲಿ, ಜ.23: ಕೇಂದ್ರ ಸರಕಾರ ವಿರುದ್ಧ ನ್ಯಾಯಾಂಗ ಸಂಘರ್ಷದ ಹಿನ್ನೆಲೆಯಲ್ಲಿ ಹೊಸ ಟೀಕಾಸ್ತ್ರವೊಂದನ್ನು ಸೋಮವಾರ ಪ್ರಯೋಗಿಸಿರುವ ಕೇಂದ್ರ ಕಾನೂನು ಸಚಿವ ಕಿರಣ ರಿಜಿಜು ಅವರು,ನ್ಯಾಯಾಧೀಶರು ಚುನಾವಣೆಯನ್ನು ಅಥವಾ ಸಾರ್ವಜನಿಕ ಪರಿಶೀಲನೆಯನ್ನು ಎದುರಿಸಬೇಕಿಲ್ಲ. ಆದರೂ ತಮ್ಮ ಕ್ರಮಗಳು ಮತ್ತು ತಮ್ಮ ತೀರ್ಪುಗಳಿಂದಾಗಿ ಅವರು ಸಾರ್ವಜನಿಕರ ಗಮನದಲ್ಲಿದ್ದಾರೆ ಎಂದು ಹೇಳಿದರು.

ಜನರು ನಿಮ್ಮನ್ನು ಗಮನಿಸುತ್ತಿದ್ದಾರೆ ಮತ್ತು ನಿಮ್ಮ ಬಗ್ಗೆ ನಿರ್ಣಯಿಸುತ್ತಿದ್ದಾರೆ. ನಿಮ್ಮ ತೀರ್ಪುಗಳು, ನಿಮ್ಮ ಕಾರ್ಯಶೈಲಿ, ನೀವು ಹೇಗೆ ನ್ಯಾಯವನ್ನು ನೀಡುತ್ತೀರಿ...ಇವೆಲ್ಲವನ್ನೂ ಜನರು ನೋಡಬಹುದು ಮತ್ತು ವೌಲ್ಯಮಾಪನ ಮಾಡಬಹುದು. ಅವರು ಅಭಿಪ್ರಾಯಗಳನ್ನು ರೂಪಿಸುತ್ತಾರೆ ಎಂದು ರಿಜಿಜು ದಿಲ್ಲಿ ವಕೀಲರ ಸಂಘವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರತಾಡನಗಳ ನಡುವೆಯೇ ಹೇಳಿದರು.

ಸಾಮಾಜಿಕ ಜಾಲತಾಣಗಳ ಆಗಮನದಿಂದಾಗಿ ಜನರು ಈಗ ಮಾತನಾಡುವ ಅಧಿಕಾರವನ್ನು ಹೊಂದಿದ್ದಾರೆ ಎಂದು ಸಭಿಕರಿಗೆ ನೆನಪಿಸಿದ ರಿಜಿಜು,ಇದು ಯಾವುದೇ ವೇದಿಕೆಗಳಿರದಿದ್ದ ಮತ್ತು ಕೇವಲ ನಾಯಕರು ಮಾತ್ರ ಮಾತನಾಡುತ್ತಿದ್ದ ಹಳೆಯ ದಿನಗಳಂತಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಾಲತಾಣಗಳಲ್ಲಿ ನ್ಯಾಯಾಧೀಶರ ನಿಂದನೆಯ ಕುರಿತು ನೆರವಾಗುವಂತೆ ಮುಖ್ಯ ನ್ಯಾಯಾಧೀಶರು ತನ್ನನ್ನು ಕೇಳಿಕೊಂಡಿದ್ದಾರೆ. ಇದನ್ನು ನಿಯಂತ್ರಿಸುವುದು ಹೇಗೆ? ಈಗ,ನ್ಯಾಯಾಧೀಶರು ಸಾಮಾಜಿಕ ಮಾಧ್ಯಮಗಳಲ್ಲಿ ನಿಂದನೆಗಳಿಗೆ ಪ್ರತಿಕ್ರಿಯಿಸುವಂತಿಲ್ಲ. ದೃಢವಾದ ಕ್ರಮವನ್ನು ತೆಗೆದುಕೊಳ್ಳುವಂತೆ ಸರಕಾರವನ್ನು ವಿನಂತಿಸಿಕೊಳ್ಳಲಾಗಿದೆ. ಇದನ್ನು ತಾನು ಗಮನಿಸಿದ್ದೇನೆ ಮತ್ತು ತನ್ನ ಬಳಿ ಪರಿಹಾರವಿದೆ ಎಂದರು.

1947ರ ನಂತರ ಹಲವಾರು ಬದಲಾವಣೆಗಳಾಗಿವೆ. ಹೀಗಾಗಿ ಪ್ರಸ್ತುತ ವ್ಯವಸ್ಥೆಯೇ ಮುಂದುವರಿಯುತ್ತದೆ ಮತ್ತು ಅದನ್ನೆಂದಿಗೂ ಪ್ರಶ್ನಿಸಲಾಗುವುದಿಲ್ಲ ಎಂದು ಭಾವಿಸುವುದು ತಪ್ಪಾಗುತ್ತದೆ ಎಂದು ಹೇಳಿದ ರಿಜಿಜು,ಬದಲಾಗುತ್ತಿರುವ ಪರಿಸ್ಥಿತಿಯು ಅಗತ್ಯಗಳನ್ನು ಹುಟ್ಟು ಹಾಕುತ್ತದೆ ಮತ್ತು ಇದೇ ಕಾರಣದಿಂದ ಸಂವಿಧಾನವನ್ನು 100ಕ್ಕೂ ಹೆಚ್ಚು ಸಲ ತಿದ್ದುಪಡಿ ಮಾಡಬೇಕಾಗಿ ಬಂದಿತ್ತು ಎಂದರು.

ಸರಕಾರವು ನ್ಯಾಯಾಧೀಶರ ನೇಮಕಾತಿಯಲ್ಲಿ ಹೆಚ್ಚಿನ ಪಾತ್ರವನ್ನು ಬಯಸಿದೆ. ಶಾಸಕಾಂಗವು ಜನರ ಇಚ್ಛೆಯನ್ನು ಪ್ರತಿನಿಧಿಸುತ್ತಿರುವುದರಿಂದ ಅದು ಸರ್ವೋಚ್ಚವಾಗಿದೆ ಎಂದು ಅದು ಪ್ರತಿಪಾದಿಸುತ್ತಿದೆ. ಸಂಸತ್ತು ಕಾನೂನನ್ನು ಮಾಡಬಹುದು,ಆದರೆ ಅದರ ಪರಿಶೀಲನೆ ನ್ಯಾಯಾಲಯದ ಅಧಿಕಾರದಲ್ಲಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಸರಕಾರಕ್ಕೆ ಕಟ್ಟುನಿಟ್ಟಾಗಿ ಜ್ಞಾಪಿಸಿದೆ.

Similar News