74 ನೇ ಗಣರಾಜ್ಯೋತ್ಸವ: ದಿಲ್ಲಿಯ ಕರ್ತವ್ಯ ಪಥದಲ್ಲಿ ಪಥಸಂಚಲನ ಆರಂಭ

ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್ ಸಿಸಿ ಭಾಗಿ

Update: 2023-01-26 05:34 GMT

ಹೊಸದಿಲ್ಲಿ: ರಾಷ್ಟ್ರರಾಜಧಾನಿ ದಿಲ್ಲಿಯಲ್ಲಿ  74 ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕರ್ತವ್ಯ ಪಥದಲ್ಲಿ ವಿವಿಧ ಸೇನಾ ಪಡೆಗಳಿಂದ ಪಥ ಸಂಚಲನವು ಗುರುವಾರ ಬೆಳಗ್ಗೆ ನಡೆಯಿತು.

ಈಜಿಪ್ಟ್ ಅಧ್ಯಕ್ಷರಾದ ಅಬ್ದುಲ್ ಫತ್ತಾಹ್ ಅಲ್ ಸಿಸಿ ಗಣರಾಜ್ಯೋತ್ಸವದ  ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಮುಖ್ಯ ಅತಿಥಿ ಅಬ್ದುಲ್ ಫತ್ತಾಹ್ ಅಲ್ ಸಿಸಿ ಅವರೊಂದಿಗೆ ಸ್ಥಳಕ್ಕೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ತವ್ಯ ಪಥದಿಂದ ಗಣರಾಜ್ಯೋತ್ಸವದ ಪರೇಡ್‌ಗೆ ಚಾಲನೆ ನೀಡಿದರು.

ಇದೇ ಮೊದಲ ಬಾರಿ ಈಜಿಪ್ಟ್ ಸೇನಾಪಡೆಯ 144 ಯೋಧರು ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗಿಯಾದರು.

ರಾಷ್ಟ್ರ ರಾಜಧಾನಿಯಲ್ಲಿ ಗಣರಾಜ್ಯೋತ್ಸವ ಪರೇಡ್ ವಿಜಯ್ ಚೌಕ್‌ನಿಂದ ಆರಂಭವಾಗಿದ್ದು, ಕೆಂಪುಕೋಟೆಗೆ ತೆರಳಲಿದೆ.

ಮೊದಲ ಬಾರಿಗೆ  ಬ್ರಿಟಿಷ್ ನಿರ್ಮಿತ 25-ಪೌಂಡರ್ ಗನ್‌ಗಳನ್ನು ಬದಲಿಸಿ 105 ಎಂಎಂ ಭಾರತೀಯ ಫೀಲ್ಡ್ ಗನ್‌ಗಳೊಂದಿಗೆ ಪರೇಡ್  ಸಂದರ್ಭದಲ್ಲಿ ರಾಷ್ಟ್ರಪತಿ  ದ್ರೌಪದಿ ಮುರ್ಮು ಅವರಿಗೆ 21-ಗನ್ ಸೆಲ್ಯೂಟ್‌ ನೀಡಲಾಯಿತು.

 ಬೆಳಗ್ಗೆ 10.30ಕ್ಕೆ ಆರಂಭವಾಗಿರುವ ಭವ್ಯ ಪರೇಡ್  ದೇಶದ ಸೇನಾ ಶಕ್ತಿ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಮಿಶ್ರಣವಾಗಿರುತ್ತದೆ.

 ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಮೂರು ಸೇನಾ ಮುಖ್ಯಸ್ಥರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ನಮನ ಸಲ್ಲಿಸಿದರು.

ಭದ್ರತಾ ವ್ಯವಸ್ಥೆಗಳ ಭಾಗವಾಗಿ 6,000 ಸೈನಿಕರ ನಿಯೋಜನೆಯೊಂದಿಗೆ ಕಾರ್ಯಕ್ರಮಕ್ಕೆ ಭಾರಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಕರ್ತವ್ಯ ಪಥವನ್ನು ಸುಮಾರು 150 ಸಿಸಿಟಿವಿ ಕ್ಯಾಮೆರಾಗಳೊಂದಿಗೆ ಮೇಲ್ವಿಚಾರಣೆ ಮಾಡಲಾಗುತ್ತದೆ

Similar News