ಅತ್ಯಾಚಾರಿ ಬಿಜೆಪಿ ನಾಯಕನ ಜಾಮೀನು ಅವಧಿ ಕಡಿತ: ನನ್ನನ್ನು ಕೊಲ್ಲಿಸಬಹುದು ಎಂದ ಅತ್ಯಾಚಾರ ಸಂತ್ರಸ್ತೆ

Update: 2023-01-27 15:16 GMT

ಹೊಸದಿಲ್ಲಿ, ಜ. 27: ಉತ್ತರಪ್ರದೇಶದ ಉನ್ನಾವೊದಲ್ಲಿ 2017ರಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದ ದೋಷಿ ಬಿಜೆಪಿಯ ಮಾಜಿ ನಾಯಕ ಹಾಗೂ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗರ್(Kuldeep Singh Sengar) ಗೆ ನೀಡಿರುವ ಮಧ್ಯಂತರ ಜಾಮೀನು ಅವಧಿಯನ್ನು ದಿಲ್ಲಿ ಹೈಕೋರ್ಟ್ ಶುಕ್ರವಾರ ಕಡಿತಗೊಳಿಸಿದೆ. ಪ್ರಕರಣದಲ್ಲಿ ಅವರು ಜೀವಿತಾವಧಿ ಜೈಲುವಾಸದ ಶಿಕ್ಷೆ ಅನುಭವಿಸುತ್ತಿದ್ದಾರೆ.

ಸೆಂಗರ್ ಗೆ ತನ್ನ ಮಗಳ ಮದುವೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ದಿಲ್ಲಿ ಹೈಕೋರ್ಟ್(High Court of Delhi) ಎರಡು ವಾರಗಳ ಜಾಮೀನು ನೀಡಿತ್ತು.

ಮಗಳ ‘ತಿಲಕ’ ಸಮಾರಂಭ ಮುಗಿದ ಬಳಿಕ ಜೈಲಿಗೆ ಮರಳುವಂತೆ ಹಾಗೂ ಮದುವೆಗೆ ಮುನ್ನ ಮತ್ತೆ ಹೊರ ಹೋಗುವಂತೆ ನ್ಯಾಯಾಲಯವು ಸೆಂಗರ್ಗೆ ಸೂಚಿಸಿದೆ. ಸೆಂಗರ್ನನ್ನು ಶುಕ್ರವಾರ ಬೆಳಗ್ಗೆ ಬಿಡುಗಡೆ ಮಾಡಲಾಗಿದೆ.

ಪ್ರಕರಣದ ಸಂತ್ರಸ್ತೆ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯವು ತನ್ನ ಮೊದಲಿನ ತೀರ್ಪಿನಲ್ಲಿ ಮಾರ್ಪಾಡು ಮಾಡಿದೆ. ನಾನು ಮತ್ತು ನನ್ನ ಕುಟುಂಬ ಸದಸ್ಯರು ಬೆದರಿಕೆಯನ್ನು ಎದುರಿಸುತ್ತಿರುವುದರಿಂದ ದೋಷಿಯ ಮಧ್ಯಾಂತರ ಜಾಮೀನನ್ನು ರದ್ದುಪಡಿಸಬೇಕು ಎಂಬುದಾಗಿ ಸಂತ್ರಸ್ತೆ ತನ್ನ ಅರ್ಜಿಯಲ್ಲಿ ಕೋರಿದ್ದಾರೆ.

ಜನವರಿ 16ರಂದು, ನ್ಯಾಯಮೂರ್ತಿಗಳಾದ ಮುಕ್ತಾ ಗುಪ್ತಾ(Mukta Gupta) ಮತ್ತು ಪೂನಮ್ ಎ. ಬಾಂಬಾ(Poonam A. Bamba) ಅವರನ್ನೊಳಗೊಂಡ ನ್ಯಾಯಪೀಠವು ಸೆಂಗರ್ಗೆ ತನ್ನ ಮಗಳ ಮದುವೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವಂತೆ ಜನವರಿ 27ರಿಂದ ಫೆಬ್ರವರಿ 10ರವರೆಗೆ ಮಧ್ಯಾಂತರ ಜಾಮೀನು ನೀಡಿತ್ತು. ಶುಕ್ರವಾರ ತನ್ನ ಆದೇಶಕ್ಕೆ ಮಾರ್ಪಾಡು ಮಾಡಿದ ನ್ಯಾಯಪೀಠವು, ಜನವರಿ 30ರಂದು ‘ತಿಲಕ’ ಸಮಾರಂಭ ಮುಗಿಸಿ ಫೆಬ್ರವರಿ 1ರಂದು ಜೈಲು ಅಧಿಕಾರಿಗಳಿಗೆ ಶರಣಾಗುವಂತೆ ಸೆಂಗರ್ ಗೆ ಸೂಚಿಸಿದೆ.

ಫೆಬ್ರವರಿ 8ರಂದು ಮದುವೆ ನಡೆಯಲಿರುವುದರಿಂದ, ಆತನನ್ನು ಫೆಬ್ರವರಿ 6ರಂದು ಪುನಃ ಜೈಲಿನಿಂದ ಬಿಡುಗಡೆಗೊಳಿಸಬೇಕು ಹಾಗೂ ಫೆಬ್ರವರಿ 10ರಂದು ಆತ ಜೈಲಿಗೆ ವಾಪಸಾಗಬೇಕು ಎಂದು ನ್ಯಾಯಾಲಯ ಹೇಳಿದೆ.

ನನಗೆ ಮತ್ತು ಸಾಕ್ಷಿಗಳಿಗೆ ಅಪಾಯ: ನ್ಯಾಯಾಲಯದಲ್ಲಿ ಹೇಳಿದ ಸಂತ್ರಸ್ತೆ

‘‘ಕುಲದೀಪ್ ಸೆಂಗರ್ ಗೆ ಜಾಮೀನು ನೀಡಿದರೆ, ನನಗೆ ಮತ್ತು ಸಾಕ್ಷಿಗಳಿಗೆ ಅಪಾಯವಿದೆ. ಅಲ್ಲಿರುವ ಎಲ್ಲಾ ಸರಕಾರಿ ಅಧಿಕಾರಿಗಳು ಅವನಿಂದ ನೇಮಕಗೊಂಡವರು. ಅವನನ್ನು ಬಿಡುಗಡೆಗೊಳಿಸಬಾರದು ಎಂದು ಮನವಿ ಮಾಡುತ್ತೇನೆ. ಹಾಗೆ ಮಾಡಿದರೆ ಅವನು ನನ್ನನ್ನು ಕೊಲ್ಲಿಸಬಹುದು’’ ಎಂದು ನ್ಯಾಯಾಲಯದಲ್ಲಿ ಹಾಜರಿದ್ದ ಸಂತ್ರಸ್ತೆ ಹೇಳಿದರು.

ಸೆಂಗರ್ ಜೈಲಿನಲ್ಲಿದ್ದಾಗಲೂ ಸಂತ್ರಸ್ತೆ ಮತ್ತು ಸಾಕ್ಷಿಗಳು ಹೆದರಿಕೆಯಿಂದಲೇ ಬದುಕುತ್ತಿದ್ದರು ಎಂದು ಸಂತ್ರಸ್ತೆಯ ಪರವಾಗಿ ವಾದಿಸಿದ ವಕೀಲ ಮೆಹ್ಮೂದ್ ಪ್ರಾಚ ಹೇಳಿದರು. ಸಾಮಾನ್ಯ ಜನರನ್ನು ಜೈಲಿನಿಂದ ಬಿಡುಗಡೆಗೊಳಿಸುವುದು ಸಂಜೆಯಾದರೆ, ಸೆಂಗರ್ನನ್ನು ಮುಂಜಾನೆಯೇ ಬಿಡುಗಡೆಗೊಳಿಸಲಾಗಿದೆ. ಇದು ಆತನ ಪ್ರಭಾವವನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

ಸಂತ್ರಸ್ತೆಯ ತಂದೆಯ ಮೇಲೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ನಡೆಸಿ ಅವರ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಸೆಂಗರ್ 10 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಆ ಪ್ರಕರಣದಲ್ಲೂ ದಿಲ್ಲಿ ಹೈಕೋರ್ಟ್ ಮಧ್ಯಾಂತರ ಜಾಮೀನು ನೀಡಿದೆ.

Similar News