ಮೊರ್ಬಿ ಸೇತುವೆ ದುರಂತ: ಒರೇವಾ ಪ್ರವರ್ತಕ ಸೇರಿ 10 ಮಂದಿ ವಿರುದ್ಧ ಆರೋಪಪಟ್ಟಿ

Update: 2023-01-28 02:37 GMT

ಮೊರ್ಬಿ (ಗುಜರಾತ್): 135 ಮಂದಿಯ ಜೀವ ಬಲಿ ಪಡೆದ ಮೊರ್ಬಿ ತೂಗುಸೇತುವೆ ಕುಸಿತ ದುರಂತಕ್ಕೆ ಸಂಬಂಧಿಸಿದಂತೆ ಸೇತುವೆಯ ನಿರ್ವಹಣೆ ಮತ್ತು ಕಾರ್ಯಾಚರಣೆ ಗುತ್ತಿಗೆದಾರ ಹಾಗೂ ಒರೇವಾ ಸಮೂಹದ ಪ್ರವರ್ತಕ ಜೈಸುಖ್ ಪಟೇಲ್‌ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಇಲ್ಲಿನ ಸೆಷನ್ಸ್ ನ್ಯಾಯಾಲಯ ಫೆಬ್ರುವರಿ 1ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

ಜೈಸುಖ್ ಪಟೇಲ್ ಹೊರತಾಗಿ ಒರೇವಾ ಎಕ್ಸಿಕ್ಯೂಟಿವ್‌ಗಳಾದ ದೀಪಕ್ ಪರೇಖ್ ಹಾಗೂ ದಿನೇಶ್ ದವೆ, ಟಿಕೆಟ್ ನೀಡುವ ಕ್ಲರ್ಕ್‌ಗಳಾದ ಮನ್‌ಸುಖ್ ತೊಪಿಯಾ ಮತ್ತು ಮಹಾದೇವ್ ಸೊಲನಿ, ಭದ್ರತಾ ಸಿಬ್ಬಂದಿಯಾದ ಅಲ್ಪೇಶ್ ಗೋಹಿಲ್, ದಿಲೀಪ್ ಗೋಹಿಲ್ ಮತ್ತು ಮನ್‌ಸುಖ್ ಚೌಹಾಣ್, ಉಪ ಗುತ್ತಿಗೆದಾರ ಪ್ರಕಾಶ್ ಪರ್ಮಾರ್ ಹಾಗೂ ಅತನ ಮಗ ದೇವಾಂಗ್ ಹೆಸರು ಪೊಲೀಸರು ಸಲ್ಲಿಸಿದ ಆರೋಪಪಟ್ಟಿಯಲ್ಲಿದೆ. ಒಂಬತ್ತು ಮಂದಿ ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿದ್ದು, ಪಟೇಲ್‌ನನ್ನು ತಲೆ ಮರೆಸಿಕೊಂಡ ಆರೋಪಿ ಎಂದು ಹೆಸರಿಸಲಾಗಿದೆ.

ಬ್ರಿಟಿಷರ ಕಾಲದ ಈ ತೂಗುಸೇತುವೆಯ ನಿರ್ವಹಣೆ ಮತ್ತು ಕಾರ್ಯಾಚರಣೆಯನ್ನು ಒರೇವಾ ಸಮೂಹದ ಗಡಿಯಾರ ತಯಾರಿಕಾ ಕಂಪನಿಯಾದ ಅಜಂತಾ ಮ್ಯಾನ್ಯುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್‌ಗೆ ವಹಿಸಲಾಗಿತ್ತು. ಗುಜರಾತಿ ಹೊಸ ವರ್ಷಕ್ಕೆ ಮುನ್ನ ಕಳೆದ ಅಕ್ಟೋಬರ್‌ನಲ್ಲಿ ಇದನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವ ಮುನ್ನ ಕಳಪೆ ಕಾಮಗಾರಿ ನಡೆಸಿದ್ದು, ದುರಂತಕ್ಕೆ ಕಾರಣ ಎಂದು ಘಟನೆ ಬಗ್ಗೆ ತನಿಖೆ ನಡೆಸಿದ ವಿಶೇಷ ತನಿಖಾ ತಂಡ ಹೇಳಿತ್ತು.

ಭಾರತೀಯ ದಂಡಸಂಹಿತೆಯ ಸೆಕ್ಷನ್ 304, 308, 114, 336, 337 ಮತ್ತು 338ರ ಅನ್ವಯ ಆರೋಪಪಟ್ಟಿ ಸಲ್ಲಿಸಲಾಗಿದೆ. ಆರೋಪಪಟ್ಟಿಯಲ್ಲಿ 367 ಮಂದಿ ಸಾಕ್ಷಿಗಳ ಹೇಳಿಕೆಗಳಿದ್ದು, ಬಹುತೇಕ ಇವರೆಲ್ಲ ಮೃತಪಟ್ಟವರ ಕುಟುಂಬಗಳಿಗೆ ಸೇರಿದವರು ಹಾಗೂ ಅಕ್ಟೋಬರ್ 30ರ ದುರಂತದಲ್ಲಿ ಗಾಯಗೊಂಡವರು. ಮೊರ್ಬಿ ಸಿವಿಲ್ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರ ಹೇಳಿಕೆಗಳು, ಜತೆಗೆ ಮೊರ್ಬಿ ಪಾಲಿಕೆಯ ಮುಖ್ಯಾಧಿಕಾರಿ ಹೇಳಿಕೆಗಳಲ್ಲೂ ದಾಖಲಿಸಲಾಗಿದೆ.

Similar News