ಕಾಂಗ್ರೆಸ್ ನೊಂದಿಗೆ ವಿಲೀನ ಪೋಸ್ಟ್ ಬೆನ್ನಿಗೆ ಕಮಲ್ ಹಾಸನ್ ಅವರ ರಾಜಕೀಯ ಪಕ್ಷದ ವೆಬ್ ಸೈಟ್ ಹ್ಯಾಕ್

Update: 2023-01-28 04:58 GMT

ಚೆನ್ನೈ: ನಟ ಕಮಲ್ ಹಾಸನ್ (Kamal Haasan)ಅವರ ರಾಜಕೀಯ ಪಕ್ಷ ಮಕ್ಕಳ್ ನೀಧಿ ಮೈಯಂ ವೆಬ್‌ಸೈಟ್ ಹ್ಯಾಕ್ ಆಗಿದೆ ಎಂದು ಪಕ್ಷ ತಿಳಿಸಿದೆ.

ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಲಾಗುವುದು ಎಂದು ಸೈಟ್‌ನಲ್ಲಿ ಪೋಸ್ಟ್ ಮಾಡಿದ ನಂತರ www.maiam.com ನಲ್ಲಿ ಸೈಬರ್ ದಾಳಿ ನಡೆದಿರುವುದು ಬೆಳಕಿಗೆ ಬಂದಿದೆ.

"2024 ರ ಲೋಕಸಭೆ ಚುನಾವಣೆಗೆ ಮಕ್ಕಳ್ ನೀಧಿ ಮೈಯಂ ಪಕ್ಷದಿಂದ  ದೊಡ್ಡ ಘೋಷಣೆ" ಎಂಬ ಶೀರ್ಷಿಕೆಯಡಿ, ಪಕ್ಷದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ  ಪತ್ರಿಕಾ ಪ್ರಕಟಣೆಯಲ್ಲಿ ಔಪಚಾರಿಕ ವಿಲೀನವು 30 ಜನವರಿ 2023 ರಂದು ನಡೆಯಲಿದೆ" ಎಂದು ಹೇಳಿದೆ.

ಸೈಟ್ ಅನ್ನು ಈಗ "ನಿರ್ವಹಣೆ" ಗಾಗಿ ಮುಚ್ಚಲಾಗಿದೆ. ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವ ಯಾವುದೇ ಯೋಜನೆ ಇಲ್ಲ. ಇದರಲ್ಲಿ ಯಾವುದೇ ಸತ್ಯವಿಲ್ಲ.  ನಮ್ಮ ವೆಬ್‌ಸೈಟ್ ಹ್ಯಾಕ್ ಮಾಡಲಾಗಿದೆ" ಎಂದು ಪಕ್ಷದ ವಕ್ತಾರ ಮುರಳಿ ಅಬ್ಬಾಸ್, ಎನ್‌ಡಿಟಿವಿಗೆ ತಿಳಿಸಿದ್ದಾರೆ.

ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿಯೂ ಹ್ಯಾಕಿಂಗ್ ಕುರಿತು ಮಾಹಿತಿ ನೀಡಲಾಗಿದೆ.

"ಪ್ರಜಾಪ್ರಭುತ್ವದ ಧ್ವನಿಯನ್ನು ಹತ್ತಿಕ್ಕುವ ದುಷ್ಕರ್ಮಿಗಳು ಮಕ್ಕಳ್ ನೀಧಿ ಮೈಯಂನ ಅಧಿಕೃತ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿದ್ದಾರೆ!

ಅಡೆತಡೆಯಿಲ್ಲದೆ, ನಾವು ಇದಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸುತ್ತೇವೆ ಹಾಗೂ  ಎತ್ತರವಾಗಿ ನಿಲ್ಲುತ್ತೇವೆ'' ಎಂದು ಮಕ್ಕಳ್ ನೀಧಿ ಮೈಯಂ ಪಕ್ಷ ಟ್ವೀಟಿಸಿದೆ.

ಇತ್ತೀಚೆಗೆ ದಿಲ್ಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯೊಂದಿಗೆ ಹೆಜ್ಜೆ ಹಾಕಿದ ಕಮಲ್ ಹಾಸನ್  ಅವರು  ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸುತ್ತಾರೆ ಎಂಬ ಮಾತು ಕೇಳಿಬಂದಿದೆ.

"ನಮ್ಮ ಭಾರತದ ಕಳೆದುಹೋದ ನೀತಿಯನ್ನು ಮರಳಿ ಪಡೆಯುವುದು ನಮ್ಮ ಜವಾಬ್ದಾರಿಯಾಗಿದೆ. ಇದು (ಭಾರತ್ ಜೋಡೊ ಅಭಿಯಾನ) ರಾಜಕೀಯವನ್ನು ಮೀರಿದ ಯಾತ್ರೆ" ಎಂದು ಆಗ ಕಮಲ್ ಹಾಸನ್ ಅವರು ಹೇಳಿದ್ದರು.

ಕೆಲವು ದಿನಗಳ ಹಿಂದೆ ಅವರು ಈರೋಡ್ ಪೂರ್ವ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಆಡಳಿತಾರೂಢ ಡಿಎಂಕೆ ಮೈತ್ರಿಕೂಟದ ಕಾಂಗ್ರೆಸ್ ಅಭ್ಯರ್ಥಿಗೆ ಬೇಷರತ್ ಬೆಂಬಲವನ್ನು ನೀಡಿದ್ದರು.

"ಜನರ ವಿಷಯಕ್ಕೆ ಬಂದಾಗ ರಾಜಿ ಎಂಬುದೇನೂ ಇಲ್ಲ. ನಾನು ಕೇಂದ್ರವಾದಿ. ಸಿದ್ಧಾಂತವು ಜನರ ಸೇವೆಗೆ ಅಡ್ಡಿಯಾಗಬಾರದು" ಎಂದು ನಟ-ರಾಜಕಾರಣಿ ಕಮಲ್ ಹಾಸನ್  ಬುಧವಾರ NDTV ಗೆ ತಿಳಿಸಿದ್ದಾರೆ.

Similar News