ಜಾಮೀನು ಮಂಜೂರಾಗಿದ್ದರೂ ಇನ್ನೂ ಜೈಲುಗಳಲ್ಲಿ ಕೊಳೆಯುತ್ತಿರುವ 5,000 ವಿಚಾರಣಾಧೀನ ಕೈದಿಗಳು: ವರದಿ

Update: 2023-02-02 18:01 GMT

ಹೊಸದಿಲ್ಲಿ,ಫೆ.2:ಜಾಮೀನು ಮಂಜೂರಾಗಿದ್ದರೂ 2022ರ ಅಂತ್ಯದಲ್ಲಿ ದೇಶಾದ್ಯಂತದ ಜೈಲುಗಳಲ್ಲಿ ಸುಮಾರು 5,000 ವಿಚಾರಣಾಧೀನ ಕೈದಿಗಳು ಕೊಳೆಯುತ್ತಿದ್ದರು ಮತ್ತು ಈ ಪೈಕಿ 1,417 ಕೈದಿಗಳು ಡಿಸೆಂಬರ್‌ನಿಂದೀಚಿಗೆ ಬಿಡುಗಡೆಗೊಂಡಿದ್ದಾರೆ ಎಂದು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (NALSA)ವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ಜಾಮೀನು ಷರತ್ತುಗಳನ್ನು ಪೂರೈಸಲು ಸಾಧ್ಯವಾಗದೇ ಜೈಲುಗಳಲ್ಲಿಯೇ ಬಾಕಿಯಾಗಿರುವ ವಿಚಾರಣಾಧೀನ ಕೈದಿಗಳ ಕುರಿತು ಮಾಹಿತಿಯನ್ನು ಒದಗಿಸುವಂತೆ ಸರ್ವೋಚ್ಚ ನ್ಯಾಯಾಲಯವು ನ.29ರಂದು ರಾಜ್ಯಗಳಿಗೆ ನಿರ್ದೇಶನ ನೀಡಿದ್ದ ಹಿನ್ನೆಲೆಯಲ್ಲಿ ಪ್ರಾಧಿಕಾರವು ಈ ಅಂಕಿ ಅಂಶಗಳನ್ನು ಸಲ್ಲಿಸಿದೆ.

ತಾನು ಕೇಳಿರುವ ಮಾಹಿತಿಗಳನ್ನು ಪ್ರಾಧಿಕಾರಕ್ಕೆ ಒದಗಿಸುವಂತೆ ರಾಜ್ಯಗಳಿಗೆ ಆದೇಶಿಸಿದ್ದ ಸರ್ವೋಚ್ಚ ನ್ಯಾಯಾಲಯ(Supreme Court)ವು, ಪ್ರಾಧಿಕಾರವು ಈ ಸಮಸ್ಯೆಯನ್ನು ನಿಭಾಯಿಸಲು ಮಾರ್ಗಗಳನ್ನು ಸೂಚಿಸುತ್ತದೆ ಮತ್ತು ಅಗತ್ಯವಿದ್ದಲ್ಲಿ ಕಾನೂನು ನೆರವನ್ನು ಒದಗಿಸುತ್ತದೆ ಎಂದು ತಿಳಿಸಿತ್ತು.

ನ್ಯಾಯಾಲಯದ ಆದೇಶಕ್ಕೆ ಸ್ಪಂದಿಸಿದ್ದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳು ಮಾಹಿತಿಗಳನ್ನು ರಾಷ್ಟ್ರೀಯ ಪ್ರಾಧಿಕಾರಕ್ಕೆ ಸಲ್ಲಿಸಿದ್ದವು. ಬಳಿಕ,ವಿಚಾರಣಾಧೀನ ಕೈದಿಗಳಿಗೆ ಕಾನೂನು ನೆರವು ಮತ್ತು ಬಿಡುಗಡೆಯ ಬಗ್ಗೆ ಪ್ರಗತಿ ವರದಿಗಳನ್ನು ಸಲ್ಲಿಸುವಂತೆ ಅವುಗಳಿಗೆ ಸೂಚಿಸಲಾಗಿತ್ತು.2,357 ಕೈದಿಗಳಿಗೆ ಕಾನೂನು ನೆರವು ಒದಗಿಸಲಾಗಿದೆ ಮತ್ತು ಈ ಪೈಕಿ 1,147 ಕೈದಿಗಳನ್ನು ಬಿಡುಗಡೆಗೊಳಿಸಲಾಗಿದೆ ಎನ್ನುವುದನ್ನು ಈ ಪ್ರಗತಿ ವರದಿಗಳು ತೋರಿಸಿವೆ.

ಡಿಸೆಂಬರ್ ಅಂತ್ಯದ ವೇಳೆಗೆ ಮಹಾರಾಷ್ಟ್ರದ ಜೈಲುಗಳಲ್ಲಿ ಜಾಮೀನು ಷರತ್ತುಗಳನ್ನು ಪೂರೈಸಲು ಸಾಧ್ಯವಾಗದ 703 ವಿಚಾರಣಾಧೀನ ಕೈದಿಗಳಿದ್ದು,ಈ ಪೈಕಿ 215 ಜನರಿಗೆ ಕಾನೂನು ನೆರವು ಒದಗಿಸಲಾಗಿದೆ ಮತ್ತು 314 ಕೈದಿಗಳನ್ನು ಬಿಡುಗಡೆಗೊಳಿಸಲಾಗಿದೆ. ದಿಲ್ಲಿಯ ಜೈಲುಗಳಲ್ಲಿ ಇಂತಹ 287 ಕೈದಿಗಳಿದ್ದು,ಈ ಪೈಕಿ ಈ ಪೈಕಿ 217 ಜನರಿಗೆ ಕಾನೂನು ನೆರವು ಒದಗಿಸಲಾಗಿದೆ ಮತ್ತು 71 ಕೈದಿಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ಪ್ರಾಧಿಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.

ಜಾಮೀನು ಭದ್ರತೆಯನ್ನು ಒದಗಿಸಲು ಮಹಾರಾಷ್ಟ್ರದಲ್ಲಿಯ ಇಂತಹ ಕೈದಿಗಳು ಅಸಮರ್ಥರಾಗಿರುವುದು ಬಹು ದೊಡ್ಡ ತೊಡಕಾಗಿದೆ. ಆದರೆ ದಿಲ್ಲಿಯಲ್ಲಿ ಕೈದಿಗಳು ಹಲವಾರು ಪ್ರಕರಣಗಳಲ್ಲಿ ಆರೋಪಿಗಳಾಗಿರುವುದು ಅವರು ಜಾಮೀನು ಲಭಿಸಿದರೂ ಜೈಲಿನಿಂದ ಬಿಡುಗಡೆಗೊಳ್ಳದಿರಲು ಕಾರಣವಾಗಿದೆ ಎಂದು ವರದಿಯಲ್ಲಿ ತಿಳಿಸಿರುವ ಪ್ರಾಧಿಕಾರವು,ಎಲ್ಲ ಪ್ರಕರಣಗಳಲ್ಲಿ ತಮಗೆ ಜಾಮೀನು ನೀಡುವವರೆಗೆ ಜಾಮೀನು ಬಾಂಡ್ಗಳನ್ನು ಸಲ್ಲಿಸಲು ದಿಲ್ಲಿಯಲ್ಲಿನ ಕೈದಿಗಳು ಸಿದ್ಧರಿಲ್ಲ ಎಂದು ಹೇಳಿದೆ.

ನ್ಯಾಷನಲ್ ಇನ್ಫಾರ್ಮಾಟಿಕ್ಸ್ ಸೆಂಟರ್ (NIC) ಕೂಡ ಈ ವಿಷಯದಲ್ಲಿ ವ್ಯವಹರಿಸುತ್ತದೆ ಮತ್ತು ಪ್ರಮಾಣಿತ ಕಾರ್ಯಾಚರಣೆ ಕಾರ್ಯವಿಧಾನವೊಂದನ್ನು ಅದು ಸಿದ್ಧಪಡಿಸಿದೆ. ಎನ್ಐಸಿಯ ಇ-ಪ್ರಿಸನ್ ಸಾಫ್ಟವೇರ್ ದೇಶಾದ್ಯಂತ ಸುಮಾರು 1,300 ಜೈಲುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು,ಜೈಲು ಅಧಿಕಾರಿಗಳು ಕೈದಿಗಳ ಜಾಮೀನು ದಿನಾಂಕಗಳನ್ನು ಅದರಲ್ಲಿ ನಮೂದಿಸುತ್ತಾರೆ. ಜಾಮೀನು ಮಂಜೂರಾದ ದಿನಾಂಕದಿಂದ ಏಳು ದಿನಗಳಲ್ಲಿ ಆರೋಪಿಯು ಬಿಡುಗಡೆಗೊಳ್ಳದಿದ್ದರೆ ಇ-ಪ್ರಿಸನ್ ಸಾಫ್ಟ್ವೇರ್ ಸ್ವಯಂಚಾಲಿತವಾಗಿ ಅದನ್ನು ಸೂಚಿಸುತ್ತದೆ.

ಇದೇ ವೇಳೆ,ಸಂಬಂಧಿತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಇ-ಮೇಲ್ ಅನ್ನು ಕಳುಹಿಸಲಾಗುತ್ತದೆ ಮತ್ತು ಅದು ಆರೋಪಿಯನ್ನು ಬಿಡುಗಡೆಗೊಳಿಸದಿರಲು ಕಾರಣವನ್ನು ಪತ್ತೆ ಹಚ್ಚುತ್ತದೆ ಎಂದು ಪ್ರಾಧಿಕಾರವು ವರದಿಯಲ್ಲಿ ತಿಳಿಸಿದೆ.

Similar News