ಯುಎಇಯಲ್ಲಿ ಏಷ್ಯಾ ಕಪ್ ಪಂದ್ಯ ಆಡಲಿರುವ ಭಾರತ: ವರದಿ
ಹೊಸದಿಲ್ಲಿ: ಪಾಕಿಸ್ತಾನದಲ್ಲಿ ಏಷ್ಯಾ ಕಪ್ ಕ್ರಿಕೆಟ್ ಪಂದ್ಯ ಆಡುವುದಿಲ್ಲ ಎಂದು ಭಾರತ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಏಷ್ಯಾ ಕಪ್ ಪಂದ್ಯಾವಳಿ ಕಗ್ಗಂಟಾಗಿದ್ದು, ಇದಕ್ಕೆ ಪರಿಹಾರ ಸಾಧ್ಯತೆ ಕಂಡುಬಂದಿದೆ. ಪಾಕಿಸ್ತಾನ ಈ ಪಂದ್ಯಾವಳಿಯ ಆತಿಥ್ಯ ವಹಿಸಲಿದೆ. ಆದರೆ ಭಾರತ ತಂಡ ಮಾತ್ರ ಯುಎಇಯಲ್ಲಿ ತನ್ನ ಪಂದ್ಯಗಳನ್ನು ಆಡುವುದಾಗಿ ಸ್ಪಷ್ಟಪಡಿಸಿದೆ. ಪಂದ್ಯಾವಳಿಯ ಕೆಲ ಪಂದ್ಯಗಳು ಯುಎಇನಲ್ಲಿ ನಡೆಯಲಿವೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ.
ಅಂಥ ಪರಿಸ್ಥಿತಿಯಲ್ಲಿ ಭಾರತ ಫೈನಲ್ ತಲುಪಿದರೆ, ಯುಎಇ ಫೈನಲ್ ಪಂದ್ಯದ ಆತಿಥ್ಯ ವಹಿಸಲಿದೆ. ಬಹರೈನ್‌ನಲ್ಲಿ ಪೆಬ್ರುವರಿ 4ರಂದು ನಡೆದ ಏಷ್ಯನ್ ಕ್ರಿಕೆಟ್ ಮಂಡಳಿಯ ತುರ್ತು ಸಭೆಯಲ್ಲಿ ಪಂದ್ಯಾವಳಿಯ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದರೂ, ಟೂರ್ನಿಯ ಆತಿಥ್ಯವನ್ನು ಯಾವ ದೇಶ ವಹಿಸಲಿದೆ ಎಂದು ಪ್ರಕಟಿಸಿರಲಿಲ್ಲ.
ಏಷ್ಯಾಕಪ್ ಆತಿಥ್ಯಕ್ಕೆ ಸಂಬಂಧಿಸಿದಂತೆ ಪರಿಹಾರವಾಗದ ಸಮಸ್ಯೆ ಬಗ್ಗೆ ಐಸಿಸಿ ಸಭೆ ವೇಳೆ ಚರ್ಚೆ ನಡೆಯಲಿದೆ ಎಂದು
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಜಾಂ ಸೇಥಿ ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ. ಸೆಪ್ಟೆಂಬರ್‌ನಲ್ಲಿ ನಡೆಯುವ ಟೂರ್ನಿಯ ಆತಿಥ್ಯವನ್ನು ಪಾಕಿಸ್ತಾನ ವಹಿಸಲಿದೆಯೇ ಎಂಬ ಪ್ರಶ್ನೆಗೆ, ಯಾವುದೇ ನಿರ್ಧಾರ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಆದರೆ ಸಮಸ್ಯೆ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಪಾಕಿಸ್ತಾನ ಆತಿಥ್ಯ ವಹಿಸಲಿದೆ. ಆದರೆ ಕೆಲ ಪಂದ್ಯಗಳು ಯುಎಇನಲ್ಲಿ ನಡೆಯಲಿದ್ದು, ಭಾರತ ತನ್ನ ಎಲ್ಲ ಪಂದ್ಯಗಳನ್ನೂ ಅಲ್ಲಿ ಆಡುತ್ತದೆ ಎಂದು ಹೇಳಲಾಗಿದೆ.