ಯುವ ಭಾರತ

Update: 2023-02-25 18:30 GMT

ಭಾರತ ನರಳುತ್ತಿದೆ. ತೀವ್ರ ನಿಗಾ ಘಟಕದಲ್ಲಿ ಭಾರತ ನರಳುತ್ತಿದೆ. ಇನ್ನು ಯುವಭಾರತವಂತೂ ತೀರಾ ರೋಗಗ್ರಸ್ಥವಾಗಿದೆ. ಅದಕ್ಕೆ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಭಾರತೀಯ ಸಮಾಜದ ಆರೋಗ್ಯವು ಗಂಭೀರವಾಗಿ ಕ್ಷೀಣಿಸುತ್ತದೆ. ಯುವ ಸಮೂಹದ ಮಾನಸಿಕ ಮತ್ತು ಸಾಮಾನ್ಯ ಆರೋಗ್ಯದ ಬಗ್ಗೆ ನಿಜಕ್ಕೂ ಎಚ್ಚರಿಕೆಯ ಗಂಟೆ ನಮ್ಮ ಭಾರತೀಯ ಸಮಾಜದಲ್ಲಿ ಮೊಳಗುತ್ತಿದೆ. ಆ ಸದ್ದು ಕಿವಿಗೆ ಬೀಳದಂತೆ ಅನೇಕಾನೇಕ ವಿಷಯಗಳು ಗಲಾಟೆ ಮಾಡುತ್ತಿವೆ. ಯುವ ಭಾರತಕ್ಕೆ ವಕ್ಕರಿಸಿರುವ ಅಪಾಯದ ಬಗ್ಗೆ ಕೂಡಲೇ ಅಗತ್ಯವಾದ ಎಚ್ಚರಿಕೆಯ ಕ್ರಮವನ್ನು ಈಗ ತೆಗೆದುಕೊಳ್ಳದೆ ಹೋದರೆ ಇನ್ನು ಹತ್ತು ವರ್ಷಗಳಲ್ಲಿ ಈಗ ನಾವು ಯಾವ ಯಾವ ಸಮಸ್ಯೆಗಳನ್ನು ಗಂಭೀರವಾಗಿ ಎದುರಿಸುತ್ತಿದ್ದೇವೋ ಅದರ ಹತ್ತುಪಟ್ಟು ರೋಗಗ್ರಸ್ಥ ಸಮಾಜದಲ್ಲಿ ಉಸಿರುಗಟ್ಟಿ ಸಾಯಬೇಕಾಗುತ್ತದೆ.

ಮಾನವ ಸಂಪನ್ಮೂಲದಲ್ಲಿ ಸದ್ಯಕ್ಕೆ ಭಾರತದಲ್ಲಿ ಹತ್ತರಿಂದ ಇಪ್ಪತ್ತನಾಲ್ಕು ವರ್ಷದವರೆಗಿನ ವಯೋಮಾನದವರು ಬಹಳ ಪ್ರಮುಖವಾದ ಯುವ ಸಂಪನ್ಮೂಲ. ಆದರೆ ಅವರ ಆರೋಗ್ಯ ಮತ್ತು ಭದ್ರತೆಗಳೆರಡೂ ಕೂಡಾ ಅನೇಕ ಒಳಗಿನ ಮತ್ತು ಹೊರಗಿನ ವಿಷಯಗಳ ಪ್ರಭಾವದಿಂದ ಬಹು ಬೇಗ ಗಾಯಗೊಳಗಾಗುವುದು. ಶೇಕಡಾವಾರು ಹೇಳುವುದಾದರೆ, ಸುಮಾರು ಹತ್ತರಿಂದ ಮೂವತ್ತು ಭಾಗದಷ್ಟು ಯುವಜನರು ಅವರ ಆರೋಗ್ಯ ಮತ್ತು ನಡವಳಿಕೆಯ ವಿಷಯದಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರಕಾರ ಮತ್ತು ಸಾಮಾಜಿಕ ಸಂಸ್ಥೆಗಳು ಈ ಕುರಿತು ತುರ್ತಿನ ಕ್ರಮವನ್ನು ತೆಗೆದುಕೊಳ್ಳುವಲ್ಲಿ ಗಮನ ಹರಿಸಬೇಕು. ಅಗತ್ಯವಾದ ಯೋಜನೆಗಳ ರೂಪುರೇಷೆಗಳನ್ನು ನಿರ್ಧರಿಸಬೇಕು. ಸದ್ಯಕ್ಕೆ ಸ್ಥೂಲವಾಗಿ ಗಮನಕ್ಕೆ ಬರುತ್ತಿರುವುದನ್ನು ಒಂದು ಪಟ್ಟಿ ಮಾಡುವುದಾದರೆ, ಯುವಭಾರತವು ಪೌಷ್ಟಿಕಾಂಶಗಳಿಂದ ಬಳಲುತ್ತಿದೆ.

ಕೆಲವರಿಗೆ ಪೌಷ್ಟಿಕಾಂಶಗಳು ಕೊರತೆಯಾದರೆ, ಮತ್ತೆ ಕೆಲವರಿಗೆ ಅಗತ್ಯಕ್ಕಿಂತ ಹೆಚ್ಚಾಗಿದೆ. ತಂಬಾಕು ಸೇವನೆ, ಮದ್ಯಪಾನ ಮತ್ತು ಇತರ ಮಾದಕ ವಸ್ತುಗಳ ಬಳಕೆ ಅತಿ ಸಣ್ಣ ವಯಸ್ಸಿಗೇ ಪ್ರಾರಂಭವಾಗಿದೆ. ಅನಾರೋಗ್ಯಕರ ಮತ್ತು ಅಪಾಯಕಾರಿ ಲೈಂಗಿಕ ಚಟುವಟಿಕೆಗಳು, ಕಾಮೋತ್ತೇಜಕ ವಿಷಯಗಳ ಗುಪ್ತ ರೂಢಿಗಳು, ಖಿನ್ನತೆ, ಅಸಮರ್ಪಕ ಸಂಪಾದನೆ, ಅನುಚಿತ ಖರ್ಚು, ಸಾಮಾನ್ಯ ಮಾನಸಿಕ ಸಮಸ್ಯೆಗಳು ಅತಿ ಸಾಮಾನ್ಯವಾಗಿವೆ. ಇವುಗಳೆಲ್ಲದರ ಜೊತೆಗೆ ರಸ್ತೆ ಅಪಘಾತಗಳು, ಆತ್ಮಹತ್ಯೆಗಳು ಮತ್ತು ವಿವಿಧ ರೀತಿಯ ಗುಂಪು ಘರ್ಷಣೆ ಹಾಗೂ ವ್ಯಕ್ತಿಗತವಾದ ಜಗಳಗಳಲ್ಲಿ ಆಗುತ್ತಿರುವಂತಹ ಸಾವು ಮತ್ತು ನೋವುಗಳಿಂದ ನಮ್ಮ ಯುವಜನರನ್ನು ರಕ್ಷಿಸಬೇಕಿದೆ. ಇಷ್ಟೇ ಅಲ್ಲ. ಯುವಜನರಿಗೆ ಸರಿಯಾದ ಮಾದರಿಗಳು ಮತ್ತು ಜೀವಂತ ಉದಾಹರಣೆಗಳು, ಆದರ್ಶಗಳು, ಗುರಿಗಳು ಇಲ್ಲದೆ ತಮ್ಮನ್ನು ಯಾವುದೇ ರೀತಿಯಲ್ಲಿ ಆಕರ್ಷಕವಾಗಿ ಪ್ರಭಾವಿಸಿದರೆ ಅವರ ಕಡೆಗೆ ವಾಲುವಂತಹ ನಡವಳಿಕೆಗಳಿಂದ ತಮ್ಮ ಪ್ರಜ್ಞಾವಂತಿಕೆಯನ್ನು ಮತ್ತು ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿದ್ದಾರೆ.

ಇದರಿಂದ ಯಾವುದೋ ರಾಜಕೀಯ ಪಕ್ಷದ, ಧಾರ್ಮಿಕತೆಯ ಪರವಾಗಿ ಏನೂ ಅರಿಯದಿದ್ದರೂ ಸಾಂಪ್ರದಾಯಿಕ ದ್ವೇಷದ ಅಮಲಿನಲ್ಲಿ ಬಡಬಡಿಸುತ್ತಿರುತ್ತಾರೆ. ಇನ್ನು ವ್ಯಕ್ತಿಪೂಜೆಯಂತೂ ಯುವಜನರನ್ನು ಅತ್ಯಂತ ಹೆಚ್ಚು ದಾರಿಗೆಡಿಸುತ್ತಿರುವ ವಿಷಯಗಳಲ್ಲಿ ಒಂದು. ರಾಜಕೀಯ ವ್ಯಕ್ತಿಗಳನ್ನು, ಸಿನೆಮಾ ನಟರನ್ನು, ಕ್ರಿಕೆಟಿಗರನ್ನು ತಮ್ಮ ಆರಾಧನಾ ಯೋಗ್ಯ ವ್ಯಕ್ತಿಗಳಂತೆ ಸ್ವೀಕರಿಸಿ, ಅವರ ವಿರುದ್ಧವಾಗಿ ಯಾರೇನೇ ಹೇಳಿದರೂ ಹೇಳಿದವರ ವಿರುದ್ಧ ತಾವು ರಣಾಂಗಣಕ್ಕೆ ಇಳಿಯುವಂತಹ ಉನ್ಮತ್ತತೆಗಳು ಕೂಡಾ ಇಂದಿನ ಯುವಭಾರತದ ಪಿಡುಗೇ ಆಗಿದೆ. ಮನೆಗಳಲ್ಲಿ, ಸ್ನೇಹಿತರಲ್ಲಿ, ಪ್ರೀತಿಸುವವರಲ್ಲಿ, ಸಾಮಾಜಿಕ ವಲಯಗಳಲ್ಲಿ ಸಂಬಂಧಗಳನ್ನು ಕಾಪಾಡಿಕೊಳ್ಳಲು ಅಗತ್ಯವಿರುವಂತಹ ಸೂಕ್ತ ಮಾರ್ಪಾಡುಗಳನ್ನು ತಮ್ಮಲ್ಲಿ ಮಾಡಿಕೊಳ್ಳದಿರುವಷ್ಟು ಅಸಹನೀಯ ಮತ್ತು ಅಹಂಕಾರದ ಗುಣಗಳು ಅವರಲ್ಲಿ ಸಂಕೀರ್ಣತೆಯನ್ನು ಉಂಟು ಮಾಡಿವೆ.

ಇನ್ನು ಸಾಮಾಜಿಕ ವ್ಯವಸ್ಥೆಯಲ್ಲಿಯೇ ಕುಸಿಯುತ್ತಿರುವ ಶಿಕ್ಷಣದ ಮಟ್ಟ, ಅಭದ್ರತೆಯ ಆರೋಗ್ಯದ ಪರಿಸ್ಥಿತಿಗಳು, ಸ್ಥಿರವಿಲ್ಲದ ಸರಕಾರಗಳ ಆಡಳಿತ ವೈಖರಿಗಳು, ಅಸಮರ್ಪಕವಾಗಿರುವ ಆರ್ಥಿಕತೆ, ಹದಗೆಟ್ಟಿರುವ ಸರಕಾರಗಳ ವಾಣಿಜ್ಯ ಮತ್ತು ಔದ್ಯೋಗಿಕ ಯೋಜನೆಗಳು ಇನ್ನಷ್ಟು ಕಂಗೆಡುವಂತಹ ವಿಷಯಗಳು. ಕತೆ ಇನ್ನೂ ಮುಗಿದಿಲ್ಲ. ಸರಕಾರದ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ಮತ್ತು ಅವ್ಯವಹಾರಗಳು, ಮಾಧ್ಯಮ ಕ್ಷೇತ್ರಗಳು ದಿಕ್ಕುಗೆಡಿಸುತ್ತಿರುವಂತಹ ವಿದ್ಯಮಾನಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆಗುವಂತಹ ಅಸಂಬದ್ಧ, ಅವೈಚಾರಿಕ ಮತ್ತು ಅಸಹನೆಯ ಹಟಮಾರಿತನದ ಚರ್ಚೆಗಳು, ನಿಂದನೆಗಳು, ಅವಹೇಳನಗಳು, ಭಾಷೆಯ ಅಸಭ್ಯ ಬಳಕೆಗಳು ಮತ್ತು ಅಸೂಕ್ಷ್ಮವಾದ ಪ್ರತಿಕ್ರಿಯೆಗಳು ಕೂಡಾ ಯುವಜನತೆಯ ಮೇಲೆ ನೇರ ಪರಿಣಾಮ ಬೀರುತ್ತಿವೆ. ಹಾಗಾಗಿ ಸದ್ಯಕ್ಕೆ ಇಡೀ ಭಾರತದಲ್ಲಿ ವರ್ತಮಾನ ಮತ್ತು ಭವಿಷ್ಯದ ಬಗ್ಗೆ ಯಾವುದೇ ಆಡಳಿತ ಯಂತ್ರಕ್ಕೆ, ವ್ಯವಸ್ಥೆಯ ಅಂಗ ಸಂಸ್ಥೆಗಳಿಗೆ ಆಸಕ್ತಿ ಇದೆ ಎಂದರೆ ಬಹಳ ತುರ್ತಾಗಿ ಈ ಬಗ್ಗೆ ಯೋಜನೆಗಳನ್ನು ರೂಪಿಸಬೇಕು ಮತ್ತು ಕೂಡಲೇ ಜಾರಿಗೆ ಕೂಡಾ ತರಬೇಕು. ಕೊರೋನ ಸಂಕಷ್ಟದ ಕಾಲದಲ್ಲಿ ಕೂಡಾ ಈ ಸಮಸ್ಯೆಗಳೆಲ್ಲವೂ ಯಾವ ರೀತಿಯಲ್ಲಿಯೂ ಕಡಿಮೆಯಾಗಿಲ್ಲ.

ಯುದ್ಧ ಕಾಲದಲ್ಲಿ, ಸಾಂಕ್ರಮಿಕ ರೋಗಗಳ ತುರ್ತಿನ ಸಮಯದಲ್ಲಿ ಅಥವಾ ಜನತೆಗೆ ಒಟ್ಟಾರೆ ಸಂಕಷ್ಟ ಬಂದಂತಹ ಹೊತ್ತುಗಳಲ್ಲಿ ತುರ್ತಾಗಿ ತಾವು ಗಮನಿಸಬೇಕಾದ ಅಗತ್ಯ ವಿಷಯಗಳ ಸಲುವಾಗಿ ತಮ್ಮ ವ್ಯಕ್ತಿಗತ ವಿಷಯಗಳ ಬಗ್ಗೆ ತಾವೇ ಗಮನಿಸಿಕೊಂಡು ಸ್ಪಂದಿಸುವಂತಹ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಇದಕ್ಕೆ ಒಂದೇ ಪರಿಹಾರವೆಂದರೆ ಯುವಜನರನ್ನು ರಚನಾತ್ಮಕ ಚಟುವಟಿಕೆಗಳಿಗೆ ತೊಡಗಿಕೊಳ್ಳುವಂತೆ ಪ್ರೋತ್ಸಾಹಿಸುವುದು. ಯುವಜನರು ಸೃಜನಶೀಲ, ಉತ್ಪಾದಕಾ ಮತ್ತು ರಚನಾತ್ಮಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾದರೆ ಉತ್ತಮಗೊಳ್ಳುತ್ತಿರುವ ತಮ್ಮ ಬದುಕಿನ ಮಟ್ಟವನ್ನು ಗುರುತಿಸಿಕೊಳ್ಳಬಲ್ಲರು. ವಿಜ್ಞಾನ, ಕ್ರೀಡೆ, ಶಿಕ್ಷಣ, ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅವರು ಮುಂದಾಗಿರುವಂತೆ ನೋಡಿಕೊಳ್ಳಬೇಕು. ಅದನ್ನು ಪ್ರಶಂಸಿಸಲು ಸಾಧ್ಯವಾದರೆ ತಮ್ಮ ತಮ್ಮ ಮನಸ್ಸನ್ನು ಆರೋಗ್ಯವಾಗಿರಿಸಿಕೊಳ್ಳಬಲ್ಲರು.

Similar News

ನಾಸ್ತಿಕ ಮದ
ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು
ಗೀಳಿಗರು