ಧರ್ಮ ಅಪಾಯದಲ್ಲಿದೆ!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಹಿಂದೂ ಧರ್ಮ ಈ ಮಟ್ಟಿನ ಅಪಾಯಕ್ಕೆ ಯಾವತ್ತೂ ಸಿಲುಕಿರಲಿಲ್ಲ. ಬಿಜೆಪಿ ನೇತೃತ್ವದ ಸರಕಾರ ತನ್ನೆಲ್ಲ ಅಕ್ರಮಗಳನ್ನು, ಕಳಂಕಗಳನ್ನು ಒರೆಸಿಕೊಳ್ಳಲು ಕೈ ವಸ್ತ್ರವಾಗಿ ಹಿಂದೂ ಧರ್ಮವನ್ನು ಬಳಸುವುದಕ್ಕೆ ಮುಂದಾಗಿದೆ. ಒಂದು ಕಾಲದಲ್ಲಿ ಹಿಂದೂಧರ್ಮ ಎಂದಾಗ ಜಗತ್ತಿನ ಮುಂದೆ ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ನಾರಾಯಣಗುರು, ಮಹಾತ್ಮಾಗಾಂಧೀಜಿಯಂತಹ ಮಹಾತ್ಮರು ಬಂದು ನಿಲ್ಲುತ್ತಿದ್ದರು. ಅವರು ಹಿಂದೂಧರ್ಮದೊಳಗಿರುವ ಅನಾಚಾರಗಳನ್ನು ನಿವಾರಿಸಿ, ಬದುಕಿನ ಮೌಲ್ಯಗಳನ್ನು ಮರುಸ್ಥಾಪಿಸುವ ಪ್ರಯತ್ನವನ್ನು ಮಾಡಿದರು. ಅದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಆದರೆ ಇಂದು ಬಿಜೆಪಿ ನೇತೃತ್ವದಲ್ಲಿ ಹಿಂದೂ ಧರ್ಮವೆಂದರೆ ನಮ್ಮ ಕಣ್ಣ ಮುಂದೆ ಬರುವುದು ಅಶ್ಲೀಲ ಸೀಡಿ ಪ್ರಕರಣದಲ್ಲಿ ಸಿಲುಕಿಕೊಂಡಿರುವ ರಾಜಕಾರಣಿಗಳು, ಕೋಟ್ಯಂತರ ರೂಪಾಯಿ ಹಣದ ಜೊತೆಗೆ ಲೋಕಾಯುಕ್ತರ ಬಲೆಗೆ ಬಿದ್ದು, ಇದೀಗ ಹಿಂದುತ್ವದ ಮರೆಯಲ್ಲಿ ವಿಜಯೋತ್ಸವ ಆಚರಿಸುತ್ತಿರುವ ಮಾಡಾಳ್ ವಿರೂಪಾಕ್ಷಪ್ಪರಂತಹ ಶಾಸಕರು, ಗುಜರಾತ್‌ನಲ್ಲಿ ಅಮಾಯಕ ಮಹಿಳೆಯರನ್ನು ಅತ್ಯಾಚಾರಗೈದು ಕೊಂದು ಹಾಕಿದ ಅಕ್ರಮಿಗಳು! ಬಿಜೆಪಿ ಮತ್ತು ಆರೆಸ್ಸೆಸ್‌ನ ನೇತೃತ್ವದ ಆಡಳಿತವು ಭಾರತದಲ್ಲಿ ಹಿಂದೂಧರ್ಮವನ್ನು ಅತ್ಯಂತ ವಿಕೃತವಾಗಿ ವ್ಯಾಖ್ಯಾನಿಸುವ ಪ್ರಯತ್ನವೊಂದನ್ನು ನಡೆಸುತ್ತಿದೆ. ಇದು ಹಿಂದೂ ಧರ್ಮದ ವಿರುದ್ಧ ಭಾರತದಲ್ಲಿ ನಡೆಯುತ್ತಿರುವ ಅತಿ ದೊಡ್ಡ ದಾಳಿಯಾಗಿದೆ. ಈ ದಾಳಿಯಿಂದ ಹಿಂದೂ ಧರ್ಮವನ್ನು ರಕ್ಷಿಸುವ ಬಗೆ ಹೇಗೆ ಎನ್ನುವುದನ್ನು ಈ ದೇಶದ ಹಿಂದೂ ಧರ್ಮದ ಆಧ್ಯಾತ್ಮಿಕ ಚಿಂತಕರು, ಸಾಮಾಜಿಕ ಸುಧಾರಕರು ಚಿಂತಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ಚುನಾವಣೆಯನ್ನು ಎದುರಿಸುತ್ತದೆ ಎನ್ನುವ ಸೂಚನೆಯನ್ನು ಈಗಾಗಲೇ ಪಕ್ಷದ ನಾಯಕರು ನೀಡಿದ್ದಾರೆ. ಬಿಜೆಪಿ ಪ್ರತಿಪಾದಿಸುತ್ತಿರುವ ಹಿಂದುತ್ವದ ಪ್ರತಿನಿಧಿಗಳು ಯಾರು ಮತ್ತು ಅವರ ಚಿಂತನೆಗಳೇನು ಎನ್ನುವುದು ಕೂಡ ಈ ಘೋಷಣೆಗಳ ಜೊತೆ ಜೊತೆಗೇ ಹೊರ ಬೀಳುತ್ತಿವೆ. ಬಿಜೆಪಿಯ ಹಿಂದುತ್ವವೆಂದರೆ, ನಾಡಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಶಾಸಕನೊಬ್ಬನನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಸನ್ಮಾನಿಸುವುದು. ಲೋಕಾಯುಕ್ತ ಬಲೆಗೆ ಬಿದ್ದು, ಮಾಧ್ಯಮಗಳಲ್ಲಿ ಮುಖಪುಟದ ಸುದ್ದಿಯಾಗಿದ್ದರೂ ಆ ಬಗ್ಗೆ ಯಾವ ನಾಚಿಕೆಯೂ ಇಲ್ಲದೆ ಬಹಿರಂಗವಾಗಿ ತನ್ನನ್ನು ಸಮರ್ಥಿಸಿಕೊಳ್ಳುವ ಶಾಸಕ, ಬಿಜೆಪಿ ಪ್ರತಿಪಾದಿಸುವ ಹಿಂದುತ್ವದ ಪ್ರತಿನಿಧಿಯಾಗಿದ್ದಾನೆ. ಹಿಂದೂಧರ್ಮ ಈತನಿಗೆ ತನ್ನ ಅಕ್ರಮಗಳನ್ನು ಮುಚ್ಚಿಡುವ ಕವಚ ಮಾತ್ರ.
ಈ ಶಾಸಕನಿಗೆ ಹೈಕೋರ್ಟ್ ನೀಡಿರುವ ಆತುರಾತುರದ ನಿರೀಕ್ಷಣಾ ಜಾಮೀನಿನ ಬಗ್ಗೆ ರಾಜ್ಯ ವಕೀಲರ ಸಂಘ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿದ್ದು, ಸುಪ್ರೀಂಕೋರ್ಟಿನ ಮುಖ್ಯ ನ್ಯಾಯ ಮೂರ್ತಿಗೆ ಪತ್ರವನ್ನು ಬರೆದಿದೆ. ಮಾನವಹಕ್ಕುಗಳಿಗಾಗಿ ಹೋರಾಡಿದ ನೂರಾರು ಕಾರ್ಯಕರ್ತರು ಜಾಮೀನು ಸಿಗದೇ ಜೈಲಿನಲ್ಲಿ ಕೊಳೆಯುತ್ತಿದ್ದರೆ ಇತ್ತ, ಕೋಟ್ಯಂತರ ರೂಪಾಯಿ ಅಕ್ರಮ ಎಸಗಿದ ಆರೋಪಿಗೆ ನ್ಯಾಯಾಲಯದಿಂದ ಸುಲಭದಲ್ಲಿ ನಿರೀಕ್ಷಣಾ ಜಾಮೀನು ದೊರಕುತ್ತದೆ. ಅಷ್ಟೇ ಅಲ್ಲ, ಆತನನ್ನು ಬಿಜೆಪಿಯ ಕಾರ್ಯಕರ್ತರೆಂದು ಗುರುತಿಸಲ್ಪಟ್ಟವರು ಹೂ ಹಾರ ಹಾಕಿ ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಾರೆ.ಬಿಜೆಪಿ ಹಿಂದೂಧರ್ಮದ ರಕ್ಷಕ ನಿಜವೇ ಆಗಿದ್ದರೆ ಅಕ್ರಮದಲ್ಲಿ ಭಾಗಿಯಾಗಿರುವ ಶಾಸಕನನ್ನು ಪಕ್ಷದಿಂದ ಹೊರ ಹಾಕಿ, ಹಿಂದೂ ಧರ್ಮದ ವೌಲ್ಯಗಳನ್ನು ಎತ್ತಿ ಹಿಡಿಯಬೇಕಾಗಿತ್ತು. ಆದರೆ ಈವರೆಗೆ ಆತನ ವಿರುದ್ಧ ಬಿಜೆಪಿ ಯಾವುದೇ ಕ್ರಮ ಕೈಗೊಂಡಿಲ್ಲ. ಹಿಂದುತ್ವವನ್ನು ಮುಂದಿಟ್ಟುಕೊಂಡು ಬಿಜೆಪಿ ಯಾಕೆ ಚುನಾವಣೆಯನ್ನು ಎದುರಿಸಲು ಮುಂದಾಗಿದೆ ಎನ್ನುವುದನ್ನು ನಾವು ಈ ಮೂಲಕ ಅರ್ಥ ಮಾಡಿಕೊಳ್ಳಬೇಕು. ''ನೀವು ಅಭಿವೃದ್ಧಿಯ ಬಗ್ಗೆ ಮಾತನಾಡಬೇಡಿ, ಲವ್ ಜಿಹಾದ್ ಬಗ್ಗೆ ಚಿಂತೆ ಮಾಡಿ'' ಎಂದು ಬಿಜೆಪಿಯ ರಾಜ್ಯಾಧ್ಯಕ್ಷರು ಕರೆ ನೀಡಿದ್ದನ್ನು ಕಾರ್ಯಕರ್ತರು ಹೀಗೆ ಅನುಷ್ಠಾನಕ್ಕಿಳಿಸಿದ್ದಾರೆ.
ತಾನು ಪ್ರತಿಪಾದಿಸುವ ಹಿಂದುತ್ವ ಯಾವುದು ಎನ್ನುವುದನ್ನು ಶಾಸಕ ಮಾಡಾಳ್ ಪ್ರಕರಣದ ಮೂಲಕ ಬಿಜೆಪಿ ನಾಡಿಗೆ ಸ್ಪಷ್ಟಪಡಿಸಿದೆ. ಅಶ್ಲೀಲ ಸೀಡಿಗಳಲ್ಲಿ ಭಾಗಿಯಾದವರು ಹಿಂದುತ್ವವನ್ನು ಪ್ರತಿಪಾದಿಸುವ ಬಿಜೆಪಿಯೊಳಗಿದ್ದಾರೆ. ಅವರೆಲ್ಲರನ್ನೂ ಬಿಜೆಪಿ ಕಾಲ ಕಾಲಕ್ಕೆ ರಕ್ಷಿಸುತ್ತಾ ಬಂದಿದೆ. ಗುಜರಾತ್‌ನಲ್ಲಿ ಅಮಾಯಕ ತರುಣಿಯರನ್ನು ಬರ್ಬರವಾಗಿ ಅತ್ಯಾಚಾರಗೈದು, ಕೊಲೆಗೈದ ಆರೋಪಿಗಳನ್ನು ಅಲ್ಲಿನ ಸರಕಾರ ಬಿಡುಗಡೆ ಮಾಡಿತು. ಆ ಆರೋಪಿಗಳನ್ನು ಹೂ ಹಾರ ಹಾಕಿ ಸನ್ಮಾನಿಸಲಾಯಿತು ಮಾತ್ರವಲ್ಲ, ವಿಧಾನಸಭಾ ಚುನಾವಣೆಯಲ್ಲಿ ಅವರನ್ನೇ ಪ್ರಚಾರಕ್ಕೆ ಬಳಸಿಕೊಳ್ಳಲಾಯಿತು. ಈ ಅತ್ಯಾಚಾರ ಆರೋಪಿಗಳೇ ಬಿಜೆಪಿ ಪ್ರತಿಪಾದಿಸುತ್ತಿರುವ ಹೊಸ ಹಿಂದುತ್ವದ ಅಥವಾ ಹಿಂದೂ ಧರ್ಮದ ವೌಲ್ಯಗಳಾಗಿದ್ದಾರೆ. ಇದು ಬಿಜೆಪಿ ತನ್ನ ರಾಜಕೀಯ ದುರುದ್ದೇಶಕ್ಕಾಗಿ ಸನಾತನ ಹಿಂದೂಧರ್ಮಕ್ಕೆ ಮಾಡುತ್ತಿರುವ ದ್ರೋಹವಾಗಿದೆ. ಹಿಂದೂಧರ್ಮದ ಪುನರುತ್ಥಾನಕ್ಕಾಗಿ ದುಡಿದ ಸ್ವಾಮಿ ವಿವೇಕಾನಂದ, ಅರವಿಂದ ಘೋಷ್, ನಾರಾಯಣ ಗುರು ಮೊದಲಾದ ಧಾರ್ಮಿಕ ನಾಯಕರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ತನ್ನ ಕೃತ್ಯಗಳ ಮೂಲಕ ಬಿಜೆಪಿ ಸ್ವತಃ ಭ್ರಷ್ಟವಾಗುತ್ತಿದ್ದರೆ ಅದನ್ನು ಯಾರೂ ಪ್ರಶ್ನಿಸುವ ಅಗತ್ಯವಿರುತ್ತಿಲಿಲ್ಲ. ಆದರೆ ತನ್ನನ್ನು ತಾನು 'ಹಿಂದೂ ಧರ್ಮದ ರಕ್ಷಕ' ಎಂದು ಬಿಂಬಿಸಿಕೊಳ್ಳುವ ಮೂಲಕ, ಅದು ತನ್ನ ಕಳಂಕದಲ್ಲಿ ಹಿಂದೂ ಧರ್ಮವನ್ನೂ ಪಾಲುದಾರವಾಗಿಸುತ್ತಿದೆ.
ಹಿಂದೂ ಧರ್ಮದ ಹತ್ತು ಹಲವು ವೌಢ್ಯ, ಜಾತೀಯತೆಗಳ ವಿರುದ್ಧ ಧ್ವನಿಯೆತ್ತಿದವರು ಸ್ವಾಮಿ ವಿವೇಕಾನಂದ, ನಾರಾಯಣಗುರುಗಳಂತಹ ಮಹಾತ್ಮರು. ಕೇರಳದಲ್ಲಿ ನಂಬೂದಿರಿ ಬ್ರಾಹ್ಮಣರ ಜಾತೀಯತೆಯ ಆಚರಣೆಗೆ ಹೇಸಿ ಆ ರಾಜ್ಯವನ್ನು ಸ್ವಾಮಿ ವಿವೇಕಾನಂದರು 'ಹುಚ್ಚಾಸ್ಪತ್ರೆ' ಎಂದು ಕರೆದಿದ್ದರು. ಹಸಿದವರನ್ನು ಮರೆತು ಗೋವುಗಳ ಕುರಿತಂತೆ ಕಾಳಜಿ ವಹಿಸಿದವರ ವಿರುದ್ಧ ವಿವೇಕಾನಂದರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅವರೇನಾದರೂ ಇಂದು ಜೀವಂತವಿದ್ದಿದ್ದರೆ ಅವರ ತಲೆಗೆ 'ಅರ್ಬನ್ ನಕ್ಸಲ್' ಬಿರುದನ್ನು ಕಟ್ಟಿ ಜೈಲಿಗೆ ಅಟ್ಟುವ ಸಾಧ್ಯತೆಯಿತ್ತು. ಸ್ವಾಮಿ ವಿವೇಕಾನಂದರು, ನಾರಾಯಣ ಗುರುಗಳ ಹಿಂದೂ ಧರ್ಮವನ್ನು ನಾಶ ಮಾಡಿ, ಅಲ್ಲಿ ಮಾಡಾಳ್ ವಿರೂಪಾಕ್ಷಪ್ಪ, ಪ್ರಜ್ಞಾ ಸಿಂಗ್ ಠಾಕೂರ್, ಪ್ರವೀಣ್ ತೊಗಾಡಿಯಾರ ಹಿಂದುತ್ವವನ್ನು ಸ್ಥಾಪಿಸುವ ಬಿಜೆಪಿಯ ಸಂಚನ್ನು ವಿಫಲಗೊಳಿಸುವುದು ಇಂದಿನ ಅಗತ್ಯವಾಗಿದೆ. ಸ್ವಾಮಿ ವಿವೇಕಾನಂದ, ನಾರಾಯಣಗುರು, ರಾಮಕೃಷ್ಣ ಪರಮ ಹಂಸರು ಜಗತ್ತಿಗೆ ಪ್ರತಿಪಾದಿಸಿದ ಹಿಂದೂ ಧರ್ಮವನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಪ್ರಜ್ಞಾವಂತರು ಮುನ್ನಡಿಯಿಡ ಬೇಕಾಗಿದೆ.