ಮಹಿಳಾ ಪ್ರೀಮಿಯರ್ ಲೀಗ್: ಗುಜರಾತ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ 10 ವಿಕೆಟ್ ಜಯ
19 ಎಸೆತಗಳಲ್ಲಿ ಶೆಫಾಲಿ ವರ್ಮಾ ಅರ್ಧಶತಕ, ಮರಿಝಾನ್ ಕಾಪ್‌ಗೆ 5 ವಿಕೆಟ್ ಗೊಂಚಲು
ನವಿ ಮುಂಬೈ, ಮಾ.11: ಶೆಫಾಲಿ ವರ್ಮಾ(ಔಟಾಗದೆ 76 ರನ್, 28 ಎಸೆತ, 10 ಬೌಂಡರಿ, 5 ಸಿಕ್ಸರ್)ಹಾಗೂ ನಾಯಕಿ ಮೆಗ್ ಲ್ಯಾನಿಂಗ್(ಔಟಾಗದೆ 21 ರನ್, 15 ಎಸೆತ, 3 ಬೌಂಡರಿ)ಭರ್ಜರಿ ಜೊತೆಯಾಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶನಿವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್(ಡಬ್ಲುಪಿಎಲ್)ನ 9ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು 10 ವಿಕೆಟ್‌ಗಳ ಅಂತರದಿಂದ ಸೋಲಿಸಿತು.
ಡಿ.ವೈ.ಪಾಟೀಲ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 106 ರನ್ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ 7.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 107 ರನ್ ಗಳಿಸಿ ಸುಲಭ ಜಯ ದಾಖಲಿಸಿತು. ಶೆಫಾಲಿ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಗಮನ ಸೆಳೆದರು.
ಡೆಲ್ಲಿ ತಂಡ ಟೂರ್ನಿಯಲ್ಲಿ ಆಡಿರುವ 4ನೇ ಪಂದ್ಯದಲ್ಲಿ ಮೂರನೇ ಗೆಲುವು ದಾಖಲಿಸಿದೆ. ಒಟ್ಟು ಆರು ಅಂಕ ಗಳಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.
ಇದಕ್ಕೂ ಮುನ್ನ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಗುಜರಾತ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 105 ರನ್ ಗಳಿಸಲಷ್ಟೇ ಶಕ್ತವಾಯಿತು. ಕಿಮ್ ಗರ್ತ್(ಔಟಾಗದೆ 32 ರನ್)ಸರ್ವಾಧಿಕ ಸ್ಕೋರ್ ಗಳಿಸಿದರು. ಜಾರ್ಜಿಯಾ ವೇರ್‌ಹ್ಯಾಮ್(22 ರನ್) ಹಾಗೂ ಹರ್ಲೀನ್ ಡಿಯೊಲ್(20ರನ್, 14 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ಮರಿಝಾನ್ ಕಾಪ್(5-15) ಐದು ವಿಕೆಟ್ ಗೊಂಚಲು ಕಬಳಿಸಿದರೆ, ಶಿಖಾ ಪಾಂಡೆ(3-26) ಮೂರು ವಿಕೆಟ್ ಪಡೆದು ಕಾಪ್‌ಗೆ ಉತ್ತಮ ಸಾಥ್ ನೀಡಿದರು.