ನದಿಗಳ ನೀರಿನಲ್ಲಿ ಯಂತ್ರ-ತಂತ್ರದಟ್ಟಹಾಸಕ್ಕೆ ಕೊನೆಯುಂಟೇ?

Update: 2023-03-11 19:30 GMT

ಇತ್ತೀಚೆಗೆ ವೈಯಕ್ತಿಕ ಕೆಲಸದ ನಿಮಿತ್ತ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ನಂದಿಗಾವಿ ಗ್ರಾಮಕ್ಕೆ ಹೋಗಿದ್ದೆ. ಇದು ತುಂಗಭದ್ರ ನದಿತಟದ ಒಂದು ಗ್ರಾಮ. ಗ್ರಾಮದ ನೈಋತ್ಯ ದಿಕ್ಕಿನಲ್ಲಿ ಒಂದು ಸಣ್ಣ ದೇವಸ್ಥಾನವಿದೆ. ಇಲ್ಲಿ ನಿತ್ಯವೂ ನದಿಗೆ ಪೂಜೆ ನಡೆಯುತ್ತದೆ. ವಿಪರ್ಯಾಸವೆಂದರೆ ನದಿಯ ಆಚೆಯ ದಡದಲ್ಲಿ ನಿತ್ಯವೂ ಯಂತ್ರಗಳ ಮೊರೆತ ಕೇಳುತ್ತಿದೆ. ನಾಲ್ಕಾರು ಹಿಟಾಚಿ, ಜೆಸಿಬಿಗಳು, ಹತ್ತಾರು ಟಿಪ್ಪರ್ ಲಾರಿಗಳು ನದಿಯ ಒಡಲನ್ನು ಬಗೆದು ಸಾವಿರಾರು ಟನ್ ಮರಳನ್ನು ಎತ್ತುತ್ತಿವೆ. ಇದು ಕೇವಲ ಇಲ್ಲಿಯ ಸನ್ನಿವೇಶ ಮಾತ್ರವಲ್ಲ. ಬಹುತೇಕ ನದಿಗಳ ನದಿಪಾತ್ರಗಳಲ್ಲಿ ನಡೆಯುವ ನದಿಗಳ ಅವ್ಯಾಹತ ಹತ್ಯೆ ಎನ್ನಬಹುದು.

ಭಾರತದಲ್ಲಿನ ನದಿಗಳು ಧಾರ್ಮಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಪ್ರಾಮುಖ್ಯತೆಯನ್ನು ಹೊಂದಿವೆ. ಪ್ರಾಚೀನ ಕಾಲದಿಂದಲೂ ನದಿಗಳನ್ನು ತಾಯಿಯೆಂದು ಗುರುತಿಸಲಾಗುತ್ತಿದೆ. ನಾಗರಿಕತೆ ಬೆಳೆಯಲು ಮತ್ತು ಹಳ್ಳಿಗಳು ನೆಲೆಗೊಳ್ಳಲು ನದಿಗಳೇ ಮುಖ್ಯ ಕಾರಣ ಎಂಬುದನ್ನು ಇತಿಹಾಸದ ಅಧ್ಯಯನದಿಂದ ತಿಳಿದಿದ್ದೇವೆ. ಭಾರತದಲ್ಲಿ ಸುಮಾರು 200ಕ್ಕೂ ಚಿಕ್ಕ ಹಾಗೂ ದೊಡ್ಡ ನದಿಗಳಿವೆ. ಸಾಮಾನ್ಯವಾಗಿ ಗಂಗಾ, ಯಮುನಾ, ಕಾವೇರಿ, ಬ್ರಹ್ಮಪುತ್ರ, ಸರಸ್ವತಿ, ನರ್ಮದಾ ಮುಂತಾದ ನದಿಗಳ ಹೆಸರುಗಳು ಚಿರಪರಿಚಿತ. ಕರ್ನಾಟಕದಲ್ಲೂ ಕಾವೇರಿ, ಕೃಷ್ಣಾ, ತುಂಗಭದ್ರ, ಗೋದಾವರಿ, ಪಾಲಾರ್, ದಕ್ಷಿಣ ಪೆನ್ನಾರ್, ಉತ್ತರ ಪೆನ್ನಾರ್‌ನಂತಹ ಪ್ರಮುಖ ನದಿಗಳಿವೆ. ಅಂತೆಯೇ ಇವುಗಳಿಗೆ ಮಹಾದಾಯಿ, ಶರಾವತಿ, ಕಾಳಿ, ಮಲಪ್ರಭಾ, ಘಟಪ್ರಭಾ, ಅರ್ಕಾವತಿ, ಶಿಂಷಾ, ನೇತ್ರಾವತಿ, ಗಂಗವಲ್ಲಿ, ವಾರಾಹಿ, ಹೇಮಾವತಿ, ಪೆನ್ನಾ, ಲಕ್ಷ್ಮಣ ತೀರ್ಥ, ಮಂಜಿರಾ, ಭೀಮಾ, ಕುಮಾರಧಾರ, ವರದಾ, ಮಾಂಡೋವಿ, ವೇದಾವತಿ, ಅಮರ್ಜಾ, ಸೌಪರ್ಣಿಕಾ, ಪಾಪಾಗ್ನಿ, ಗುರುಪುರ, ಶಾಂಭವಿ, ಯಗಚಿ, ಚಿತ್ರಾವತಿ, ದೂಧಗಂಗಾ, ಹೊನ್ನುಹೊಳೆ, ಚಕ್ರನದಿ, ಕುಬ್ಜಾನದಿ, ಪಂಚಗಂಗಾವಲ್ಲಿ, ದಂಡಾವತಿ, ಸೀತಾ, ಗುಂಡಿಯಾ, ಬೇಡ್ತಿ, ಜಯಮಂಗಲಿ, ಮುಲ್ಲಾಮಾರಿ, ಹಿರೇಹಳ್ಳ ಹೀಗೆ ಅನೇಕ ಉಪನದಿಗಳೂ ಇವೆ. ನದಿಗಳ ನೀರಿನ ಸ್ನಾನ ಮತ್ತು ಪಾನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂಬ ಪ್ರತೀತಿ ಇತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ನದಿಗಳ ನೀರು ಕುಡಿಯಲು ಸೇರಿದಂತೆ ಸ್ನಾನಕ್ಕೂ ಯೋಗ್ಯವಲ್ಲ ಎಂಬ ವರದಿಗಳು ಬೆಚ್ಚಿಬೀಳಿಸಿವೆ.

ಕರ್ನಾಟಕದ 15 ನದಿಗಳ ನೀರು ಸ್ನಾನ ಮಾಡಲು ಯೋಗ್ಯವಲ್ಲ, ಈ ನದಿಗಳ ನೀರನ್ನು ಕುಡಿಯಲು ಬಳಸಬೇಡಿ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿ ವರದಿ ಮಾಡಿದೆ. ಕುಮಾರಧಾರಾ ಮತ್ತು ನೇತ್ರಾವತಿ ನದಿಗಳನ್ನು ಹೊರತುಪಡಿಸಿ ಕರ್ನಾಟಕದ ಉಳಿದ ನದಿಗಳು ಡಿ-ವರ್ಗಕ್ಕೆ ಸೇರಿವೆ. ಡಿ-ವರ್ಗ ಅಂದರೆ ಈ ನದಿಗಳ ನೀರು ಕುಡಿಯಲು ಮತ್ತು ಸ್ನಾನ ಮಾಡಲು ಯೋಗ್ಯವಲ್ಲ ಎಂದರ್ಥ. ಕರ್ನಾಟಕದ ನದಿಗಳು ದೈನಂದಿನ ಜೀವನದಲ್ಲಿ ದೊಡ್ಡ ಪಾತ್ರವನ್ನು ವಹಿಸಿವೆ. ಏಕೆಂದರೆ ಅವು ಕೃಷಿ ಮತ್ತು ಕೈಗಾರಿಕೆಗೆ ಅತ್ಯಗತ್ಯ. ಇವೆಲ್ಲವುಗಳಿಗಿಂತ ಮುಖ್ಯವಾಗಿ ಕರ್ನಾಟಕದ ನದಿಗಳು ಜೀವವೈವಿಧ್ಯದ ಮೂಲಗಳಾಗಿವೆ ಎಂಬುದನ್ನು ಮರೆಯುವಂತಿಲ್ಲ. ಕೃಷಿಗೆ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಮಣ್ಣನ್ನು ಒದಗಿಸುತ್ತವೆ. ಅನೇಕ ಪ್ರಭೇದಗಳಿಗೆ, ಪರಿಸರ ವ್ಯವಸ್ಥೆಗೆ ಅತ್ಯಗತ್ಯ. ಕರ್ನಾಟಕದ ನದಿಗಳು ಶ್ರೀಮಂತ ಜೀವವೈವಿಧ್ಯಗಳಿಗೆ ಕಾರಣವಾಗಿವೆ. ಅಲ್ಲದೇ ಅನೇಕ ಜನರು ತಮ್ಮ ಜೀವನ ಮತ್ತು ಜೀವನ ವಿಧಾನಕ್ಕಾಗಿ ನದಿಗಳನ್ನು ಅವಲಂಬಿಸಿದ್ದಾರೆ. ಇಂದು ಬಹುತೇಕ ನದಿಗಳು ಕೈಗಾರಿಕೆಗಳ ತ್ಯಾಜ್ಯಗಳಿಂದ ಕಲುಷಿತಗೊಂಡಿವೆ. ಕೈಗಾರಿಕಾ ತ್ಯಾಜ್ಯಗಳನ್ನು ನದಿಗಳಿಗೆ ಬಿಡುವ ಮೊದಲು ತ್ಯಾಜ್ಯವನ್ನು ಸರಿಯಾಗಿ ಸಂಸ್ಕರಿಸಬೇಕೆಂಬ ನಿಯಮಗಳು ಮಣ್ಣುಪಾಲಾಗಿವೆ.

ಏಕೆಂದರೆ ಕೈಗಾರಿಕೆಗಳ ಒಡೆತನವೆಲ್ಲವೂ ಶ್ರೀಮಂತರ ಪಾಲಾಗಿವೆ. ಇವರ ಜೀವನ ನದಿಗಳ ಒಡನಾಟವನ್ನು ಅವಲಂಬಿಸಿಲ್ಲ. ಅಂದರೆ ನದಿಗಳನ್ನು ಇವರಾರೂ ತಾಯಿ ಎಂಬ ದೃಷ್ಟಿಯಿಂದ ನೋಡಿಯೇ ಇಲ್ಲ. ಹಾಗಾಗಿ ಎಲ್ಲ ನದಿಗಳೂ ಕಲುಷಿತಗೊಂಡಿವೆ. ಇನ್ನು ಬಹುತೇಕ ನದಿಗಳು ಧಾರ್ಮಿಕ ಕ್ಷೇತ್ರಗಳಾಗಿವೆ. ಈ ನದಿಗಳೆಲ್ಲವೂ ಮಾನವನ ವಿವಿಧ ಚಟುವಟಿಕೆಗಳಿಂದ ಕಲುಷಿತಗೊಂಡಿವೆ. ಪ್ರತೀ ಧಾರ್ಮಿಕ ಕ್ಷೇತ್ರದ ನದಿಯೂ ಕೂಡಾ ಮಲಿನ ಹಾಗೂ ತ್ಯಾಜ್ಯ ಬಟ್ಟೆಗಳ ಆಗರಗಳಾಗಿವೆ. ರಾಶಿ ರಾಶಿ ಬಟ್ಟೆಗಳು ನದಿಯ ಒಡಲಿನಲ್ಲಿ ಸೇರುತ್ತಿವೆ. ಅಲ್ಲದೆ ಬಹುತೇಕ ನದಿಗಳಿಗೆ ನಗರಗಳ ಚರಂಡಿ ನೀರನ್ನು ಬಿಡಲಾಗುತ್ತಿದೆ. ಇದರಿಂದಲೂ ನದಿ ನೀರು ಕಲುಷಿತವಾಗುತ್ತಿದೆ. ನದಿಗಳಲ್ಲಿ ಮರಳಿನ ದಂಧೆ ನಿರಂತರ. ಯಂತ್ರಗಳನ್ನು ಬಳಸಿ ನದಿಯ ಒಡಲಿಗೆ ಕನ್ನ ಹಾಕುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಕಠಿಣ ಕಾನೂನುಗಳ ನಡುವೆಯೂ ಇಂತಹ ಕೃತ್ಯಗಳು ನಡೆಯುತ್ತಿರುವುದು ಅಚ್ಚರಿ ಹುಟ್ಟಿಸುತ್ತಿದೆ. ಇನ್ನು ಬಹುತೇಕ ನದಿ ದಡಗಳು ಪ್ಲಾಸ್ಟಿಕ್ ಕಸದ ತೊಟ್ಟಿಗಳಾಗುತ್ತಿರುವುದು ದುರಂತ. ನದಿಗಳು ಜೀವನಾಡಿಗಳಾಗಿ ಉಳಿಯಬೇಕಾದರೆ ಅವುಗಳನ್ನು ನಮ್ಮ ತಾಯಿ ಎಂಬ ಭಾವನೆಯಿಂದ ರಕ್ಷಿಸಲು ಮುಂದಾಗಬೇಕು.

ಕೇವಲ ಕಾನೂನುಗಳಲ್ಲದೇ ಭಾವನಾತ್ಮಕ ದೃಷ್ಟಿಯಿಂದ ಮತ್ತು ನೈಸರ್ಗಿಕ ಹಿತದೃಷ್ಟಿಯಿಂದ ಅವುಗಳನ್ನು ರಕ್ಷಿಸುವ ಹೊಣೆಗಾರಿಕೆ ವಹಿಸಿಕೊಳ್ಳಬೇಕಿದೆ. ಜಾಗತಿಕ ತಾಪಮಾನದಂತಹ ಮಾರಿಯಿಂದ ತಪ್ಪಿಸಿಕೊಳ್ಳಲು ನದಿಗಳನ್ನು ರಕ್ಷಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂಬುದನ್ನು ಎಲ್ಲರೂ ಮನಗಾಣಬೇಕಿದೆ. ನದಿಗಳ ಪರಿಸರ, ಸಾಂಸ್ಕೃತಿಕ ಮತ್ತು ಆರ್ಥಿಕ ಮೌಲ್ಯಗಳನ್ನು ಹೊಂದಿರುವುದರಿಂದ ಅವುಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕಿದೆ. ಪ್ರತಿವರ್ಷ ಮಾರ್ಚ್ 14ನ್ನು ಅಂತರ್‌ರಾಷ್ಟ್ರೀಯ ನದಿ ದಿನವನ್ನಾಗಿ ಆಚರಿಸಲಾಗುತ್ತದೆ. ಭೂಗ್ರಹದ ಜೀವಿಗಳಿಗೆ ಆಶ್ರಯವನ್ನಿತ್ತು ಸಲಹುವ ನದಿಗಳನ್ನು ರಕ್ಷಿಸಲು ಮತ್ತು ನದಿಗಳ ಬಗ್ಗೆ ಜಾಗೃತಿ ಮೂಡಿಸಲು ಮೀಸಲಾದ ದಿನವಾಗಿದೆ.

ನದಿಗಳ ನಿರ್ವಹಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಮತ್ತು ನದಿ ನಿರ್ವಹಣೆಗೆ ಬಿಡುಗಡೆಯಾಗುವ ಹಣ ಸಮರ್ಪಕವಾಗಿ ಬಳಕೆಯಾದಾಗ ಮಾತ್ರ ನದಿ ದಿನ ಅರ್ಥ ಪಡೆದುಕೊಳ್ಳುತ್ತದೆ. ನದಿ ದಿನ ಅರ್ಥ ಪಡೆದುಕೊಳ್ಳಬೇಕಾದರೆ ನದಿ ನಮ್ಮ ತಾಯಿ ಎನ್ನುವ ಭಾವನೆ ಬರಬೇಕು ಅಲ್ಲವೇ? ಎಲ್ಲರೂ ಕೈ ಜೋಡಿಸುವ ಮೂಲಕ ರಾಷ್ಟ್ರೀಯ ನದಿ ಸಂರಕ್ಷಣಾ ಯೋಜನೆಗೆ ಬಲ ತುಂಬುವ ಕಾರ್ಯ ಮಾಡಬೇಕಿದೆ. ನದಿಗೆ ಹರಿಸುವ ಕೊಳಚೆ ನೀರನ್ನು ಸಂಸ್ಕರಿಸಲು ಒಳಚರಂಡಿ ಸಂಸ್ಕರಣಾ ಯೋಜನೆಗಳನ್ನು ರೂಪಿಸುವುದು, ನದಿ ದಡದಲ್ಲಿ ಮಲವಿಸರ್ಜನೆಯನ್ನು ತಡೆಯುವ ನೈರ್ಮಲ್ಯ ಶೌಚಾಲಯಗಳನ್ನು ನಿರ್ಮಿಸುವುದು, ಮಾಲಿನ್ಯಕಾರಕಗಳು ನದಿ ಸೇರುವುದನ್ನು ತಪ್ಪಿಸುವುದು ಸೇರಿದಂತೆ ನದಿಗಳ ಸಂರಕ್ಷಣೆ, ಜಲಚರಗಳ ರಕ್ಷಣೆಗೆ ಸಂಬಂಧಿಸಿದಂತೆ ಜನರಲ್ಲಿ ಅರಿವು ಮತ್ತು ತಿಳುವಳಿಕೆಯನ್ನು ಮೂಡಿಸಲು ಶ್ರಮಿಸಬೇಕಿದೆ. ಆ ಮೂಲಕ ನದಿಗಳಲ್ಲಿ ಯಂತ್ರ-ತಂತ್ರದಟ್ಟಹಾಸವನ್ನು ತಪ್ಪಿಸೋಣವೇ?

Similar News