ಡಾರ್ಕ್ ಆಕ್ಸಿಜನ್ ಸೃಷ್ಟಿಸಿದ ಕಾತರತೆ ಮತ್ತು ಆತಂಕ

Update: 2024-08-25 04:25 GMT

ಪೆಸಿಫಿಕ್ ಮಹಾಸಾಗರದಲ್ಲಿ 4.5 ಮಿಲಿಯನ್ ಚದರ ಕಿ.ಮೀ.ವ್ಯಾಪಿಸಿರುವ ಕ್ಲಾರಿಯನ್-ಕ್ಲಿಪರ್ಟನ್ ವಲಯದಲ್ಲಿ, ಕಲ್ಲಿದ್ದಲಿನಂತಹ ಖನಿಜ ಶಿಲೆಗಳಿವೆ. ಇದನ್ನು ಪಾಲಿಮೆಟಾಲಿಕ್ ಗಂಟುಗಳು ಎಂದು ಕರೆಯಲಾಗುತ್ತದೆ. ಇವುಗಳು ಸಾಮಾನ್ಯವಾಗಿ ಮ್ಯಾಂಗನೀಸ್ ಮತ್ತು ಕಬ್ಬಿಣವನ್ನು ಹೊಂದಿರುತ್ತವೆ. ಈ ಗಂಟುಗಳು ದ್ಯುತಿಸಂಶ್ಲೇಷಣೆಯ ಪ್ರಕ್ರಿಯೆಯಿಲ್ಲದೆ ಆಮ್ಲಜನಕವನ್ನು ಉತ್ಪಾದಿಸುತ್ತವೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಸಮುದ್ರದ ತಳದ ಕತ್ತಲೆಯಲ್ಲಿ ಆಮ್ಲಜನಕವನ್ನು ಉತ್ಪಾದಿಸುವ ಖನಿಜಗಳು ಭೂಮಿಯ ಮೇಲೆ ಜೀವವು ಹೇಗೆ ಪ್ರಾರಂಭವಾಯಿತು ಎಂಬುದರ ಕುರಿತು ವಿಜ್ಞಾನಿಗಳ ದೃಷ್ಟಿಕೋನವನ್ನು ಬದಲಾಯಿಸಬಹುದು.


ದಶಕಗಳಿಂದಲೂ ವಿಜ್ಞಾನಿಗಳು ಡಾರ್ಕ್ ಮ್ಯಾಟರ್ ಬಗ್ಗೆ ಸಿದ್ಧಾಂತಗಳನ್ನು ಮಂಡಿಸುತ್ತಲೇ ಇದ್ದಾರೆ. ಅನೇಕ ತತ್ವಗಳನ್ನು ಹೇಳುತ್ತಲೇ ಇದ್ದಾರೆ. ಡಾರ್ಕ್ ಮ್ಯಾಟರ್ ಗೆಲಾಕ್ಸಿಗಳನ್ನು ಅದರ ಗುರುತ್ವಾಕರ್ಷಣೆಯಿಂದ ಒಟ್ಟಿಗೆ ಹಿಡಿದಿಟ್ಟುಕೊಳ್ಳುತ್ತದೆ ಎಂಬುದು ಇದುವರೆಗಿನ ತತ್ವ, ಸಿದ್ಧಾಂತಗಳ ಸಾರ. ಡಾರ್ಕ್ ಮ್ಯಾಟರ್‌ನ ಹುಡುಕಾಟ, ಅದರ ಕುರಿತಾದ ಹೇಳಿಕೆಗಳು ಇನ್ನೂ ಮುಂದುವರಿದಿವೆ. ಒಂದೆಡೆ ಖಗೋಳವಿಜ್ಞಾನಿಗಳು ಅಂತರಿಕ್ಷದ ಡಾರ್ಕ್ ಮ್ಯಾಟರ್ ಬಗ್ಗೆ ಸಂಶೋಧನೆಗಳನ್ನು ಮುಂದುವರಿಸಿದ್ದರೆ, ಮತ್ತೊಂದೆಡೆ ಸಾಗರವಿಜ್ಞಾನಿಗಳು ಸಾಗರಗಳ ತಳದಲ್ಲಿ ಡಾರ್ಕ್ ಆಕ್ಸಿಜನ್ ಕಂಡುಹಿಡಿಯುತ್ತಿದ್ದಾರೆ.

ಇದುವರೆಗೂ ಬರೀ ಆಕ್ಸಿಜನ್ ಬಗ್ಗೆ ತಿಳಿದಿದ್ದ ನಮಗೆ ಡಾರ್ಕ್ ಆಕ್ಸಿಜನ್ ಎಂದೊಡನೆ ಏನೇನೋ ಊಹೆಗಳು ಹುಟ್ಟಿಕೊಳ್ಳುತ್ತವೆ. ಡಾರ್ಕ್ ಮ್ಯಾಟರ್‌ನಂತೆ ಇದು ಸಾಗರಗಳಲ್ಲಿನ ಎಲ್ಲವನ್ನೂ ಸ್ವಾಹ ಮಾಡುತ್ತದೆಯೇ ಎಂಬ ಅಳುಕು ಕಾಡದೇ ಇರದು. ಆದರೆ ಡಾರ್ಕ್ ಆಕ್ಸಿಜನ್ ಅಂತಹ ಯಾವುದೇ ಸ್ವಾಹ ಗುಣವನ್ನು ಹೊಂದಿಲ್ಲ. ಬದಲಾಗಿ ಜೀವಪರವಾದಂತಹ ಲಕ್ಷಣಗಳನ್ನು ಹೊಂದಿದೆ ಎಂಬುದು ತಜ್ಞರ ಅಭಿಮತವಾಗಿದೆ.

ಡಾರ್ಕ್ ಆಕ್ಸಿಜನ್ ಸಮುದ್ರದ ಆಳದಲ್ಲಿ ಕಂಡುಬರುವ ಆಣ್ವಿಕ ಆಮ್ಲಜನಕವಾಗಿದೆ. ಸಮುದ್ರದ ತಳವು ಬೆಳಕು ಹಾಯಲಾರದಷ್ಟು ಗಾಢವಾಗಿರುತ್ತದೆ. ಆದರೂ ಅಲ್ಲಿ ಆಮ್ಲಜನಕ ಹೇಗೆ ಉತ್ಪತ್ತಿಯಾಗುತ್ತದೆ ಎಂಬುದನ್ನು ವಿವರಿಸಲು ಕಷ್ಟವಾಗುತ್ತದೆ. ಏಕೆಂದರೆ ಇದುವರೆಗಿನ ನಮ್ಮ ತಿಳುವಳಿಕೆಯ ಪ್ರಕಾರ ದ್ಯುತಿಸಂಶ್ಲೇಷಣೆಯ ಮೂಲಕ ಮಾತ್ರ ಆಮ್ಲಜನಕ ಉತ್ಪಾದನೆಯಾಗುತ್ತದೆ. ದ್ಯುತಿಸಂಶ್ಲೇಷಣೆ ಮೂಲಕ ಉತ್ಪತ್ತಿಯಾಗುವ ಆಮ್ಲಜನಕಕ್ಕೆ ಬೆಳಕಿನ ಅಗತ್ಯವಿರುತ್ತದೆ. ಆದರೆ ಡಾರ್ಕ್ ಆಕ್ಸಿಜನ್ ದ್ಯುತಿಸಂಶ್ಲೇಷಣೆ ಇಲ್ಲದೆ ಉತ್ಪತ್ತಿಯಾಗಿರುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ಭೂ ವಿಜ್ಞಾನ ಸಂಶೋಧನೆಗೆ ಮೀಸಲಾಗಿರುವ ನೇಚರ್ ಜಿಯೋಸೈನ್ಸ್ ನಿಯತಕಾಲಿಕದಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು ಪೆಸಿಫಿಕ್ ಮಹಾಸಾಗರದ ಕ್ಲಾರಿಯನ್-ಕ್ಲಿಪರ್ಟನ್ ವಲಯದ ಸಮುದ್ರದ ಮೇಲ್ಮೈಯಿಂದ 4,000 ಮೀಟರ್ (ಸುಮಾರು 13,000 ಅಡಿ) ಆಳದ ಖನಿಜ ನಿಕ್ಷೇಪಗಳಿಂದ ಹೊರಸೂಸಲ್ಪಟ್ಟ ಆಮ್ಲಜನಕವನ್ನು ತೋರಿಸುತ್ತದೆ. ಈ ಆಳವು ಮೌಂಟ್ ಎವರೆಸ್ಟ್‌ನ ಅತಿ ಎತ್ತರದ ಶಿಖರದ ಅರ್ಧದಷ್ಟು ಆಳದಲ್ಲಿ ಆಮ್ಲಜನಕವು ಪತ್ತೆಯಾಗಿದೆ.

ಸ್ಕಾಟಿಷ್ ಅಸೋಸಿಯೇಷನ್ ಫಾರ್ ಮೆರೈನ್ ಸೈನ್ಸ್‌ನ ಪ್ರಾಧ್ಯಾಪಕ ಆಂಡ್ರ್ಯೂ ಸ್ವೀಟ್‌ಮ್ಯಾನ್ ಮತ್ತು ಸಂಸ್ಥೆಯ ಸಮುದ್ರ ತಳ ಪರಿಸರ ಮತ್ತು ಜೈವಿಕ ರಸಾಯನಶಾಸ್ತ್ರ ಸಂಶೋಧನಾ ಗುಂಪಿನ ತಂಡದ ಮುಖ್ಯಸ್ಥರು ನಡೆಸಿದ ಅಧ್ಯಯನವು ದ್ಯುತಿಸಂಶ್ಲೇಷಣೆಯಿಂದ ಉತ್ಪತ್ತಿಯಾಗುವ ಆಮ್ಲಜನಕದ ಹೊರತಾಗಿ ಭೂಗ್ರಹದಲ್ಲಿ ಹೆಚ್ಚುವರಿ ಆಮ್ಲಜನಕದ ಮೂಲವಿದೆ ಎಂಬುದಕ್ಕೆ ಪುರಾವೆಯನ್ನು ಒದಗಿಸುತ್ತದೆ.

ವಿಜ್ಞಾನಿಗಳು ಇಲ್ಲಿಯವರೆಗೆ ಭೂಗ್ರಹದ ಆಮ್ಲಜನಕದ ಏಕೈಕ ಮೂಲವು ಸಸ್ಯಗಳು ಮತ್ತು ಪಾಚಿಗಳಂತಹ ದ್ಯುತಿಸಂಶ್ಲೇಷಕ ಜೀವಿಗಳು ಮಾತ್ರ ಎಂದು ಅರ್ಥಮಾಡಿಕೊಂಡಿದ್ದರು. ಆದರೆ ಈಗ ಅದನ್ನು ಮೀರಿದ ತಿಳುವಳಿಕೆಯೊಂದನ್ನು ಪತ್ತೆ ಹಚ್ಚಲಾಗಿದೆ. ಹಾಗಾದರೆ ಹೊಸದಾಗಿ ಪತ್ತೆಯಾದ ಈ ಡಾರ್ಕ್ ಆಮ್ಲಜನಕದ ಮಹತ್ವವೇನು ಮತ್ತು ಇದು ಭೂಮಿಯ ಮೇಲಿನ ಜೀವ ಉಗಮದ ಬಗ್ಗೆ ಏನಾದರೂ ಮಾಹಿತಿ ನೀಡುತ್ತದೆಯೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ವಿಜ್ಞಾನಿಗಳು ಇಂತಹ ಅನೇಕ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ.

ಪೆಸಿಫಿಕ್ ಮಹಾಸಾಗರದಲ್ಲಿ 4.5 ಮಿಲಿಯನ್ ಚದರ ಕಿ.ಮೀ.ವ್ಯಾಪಿಸಿರುವ ಕ್ಲಾರಿಯನ್-ಕ್ಲಿಪರ್ಟನ್ ವಲಯದಲ್ಲಿ, ಕಲ್ಲಿದ್ದಲಿನಂತಹ ಖನಿಜ ಶಿಲೆಗಳಿವೆ. ಇದನ್ನು ಪಾಲಿಮೆಟಾಲಿಕ್ ಗಂಟುಗಳು ಎಂದು ಕರೆಯಲಾಗುತ್ತದೆ. ಇವುಗಳು ಸಾಮಾನ್ಯವಾಗಿ ಮ್ಯಾಂಗನೀಸ್ ಮತ್ತು ಕಬ್ಬಿಣವನ್ನು ಹೊಂದಿರುತ್ತವೆ. ಈ ಗಂಟುಗಳು ದ್ಯುತಿಸಂಶ್ಲೇಷಣೆಯ ಪ್ರಕ್ರಿಯೆಯಿಲ್ಲದೆ ಆಮ್ಲಜನಕವನ್ನು ಉತ್ಪಾದಿಸುತ್ತವೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಸಮುದ್ರದ ತಳದ ಕತ್ತಲೆಯಲ್ಲಿ ಆಮ್ಲಜನಕವನ್ನು ಉತ್ಪಾದಿಸುವ ಖನಿಜಗಳು ಭೂಮಿಯ ಮೇಲೆ ಜೀವವು ಹೇಗೆ ಪ್ರಾರಂಭವಾಯಿತು ಎಂಬುದರ ಕುರಿತು ವಿಜ್ಞಾನಿಗಳ ದೃಷ್ಟಿಕೋನವನ್ನು ಬದಲಾಯಿಸಬಹುದು.

ಈ ಸಂಶೋಧನೆಯ ಇತರ ಪರಿಣಾಮವೆಂದರೆ ಇದು ಗ್ರಹದಲ್ಲಿ ಜೀವವು ಎಲ್ಲಿಂದ ಪ್ರಾರಂಭವಾಯಿತು ಎಂಬುದರ ಕುರಿತು ಬೆಳಕು ಚೆಲ್ಲುತ್ತದೆ. ಈ ಆವಿಷ್ಕಾರವು ಬಹಳ ಹಿಂದೆಯೇ ಆಮ್ಲಜನಕದ ಮತ್ತೊಂದು ಮೂಲವನ್ನು ಹೊಂದಿತ್ತು ಮತ್ತು ದ್ಯುತಿಸಂಶ್ಲೇಷಣೆಯ ಉದಯದ ಮೊದಲು ಆಮ್ಲಜನಕವನ್ನು ಉಸಿರಾಡುವ ಜೀವನವು ಮುಂದುವರಿಯಬಹುದೆಂದು ತೋರಿಸಿದೆ. ಅದು ನಮ್ಮ ಭೂಗ್ರಹದಲ್ಲಿ ನಡೆಯುತ್ತಿದ್ದರೆ ಅದು ಇತರ ಗ್ರಹಗಳಲ್ಲಿ ಸಂಭವಿಸಬಹುದು.

ಡಾರ್ಕ್ ಆಮ್ಲಜನಕ ಪತ್ತೆಯ ಹಿಂದೆ 10 ವರ್ಷಗಳ ಪರಿಶ್ರಮ ಇದೆ. 2013ರಲ್ಲಿ ಸಂಶೋಧನಾ ಕಾರ್ಯಾಚರಣೆಯು ಕ್ಲಾರಿಯನ್-ಕ್ಲಿಪರ್ಟನ್ ವಲಯದ ಸಮುದ್ರದ ತಳದಲ್ಲಿ ಜೀವಿಗಳು ಎಷ್ಟು ಆಮ್ಲಜನಕವನ್ನು ಸೇವಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವ ಗುರಿಯನ್ನು ಹೊಂದಿತ್ತು. ಸಮುದ್ರದ ತಳದ 4,000 ಮೀಟರ್‌ಗಳು ಆಳದೊಂದಿಗೆ ನೀರಿನಲ್ಲಿ ಆಮ್ಲಜನಕದ ಮಟ್ಟವು ಹೇಗೆ ಕಡಿಮೆಯಾಗಿದೆ ಎಂಬುದನ್ನು ಪತ್ತೆಹಚ್ಚಲು ಲ್ಯಾಂಡರ್‌ಗಳನ್ನು ಕಳುಹಿಸಲಾಗಿತ್ತು. ಸಮುದ್ರದ ಆಳಕ್ಕೆ ಹೋದಂತೆ ಆಮ್ಲಜನಕದ ಪ್ರಮಾಣ ಕಡಿಮೆ ಇರುತ್ತದೆ ಎಂಬ ಸಾಮಾನ್ಯ ಸಿದ್ಧಾಂತಕ್ಕೆ ವ್ಯತಿರಿಕ್ತವಾದ ಅಂಶಗಳು ಇತ್ತೀಚೆಗೆ ಗೋಚರಿಸಿದವು. ಕ್ಲಾರಿಯನ್-ಕ್ಲಿಪರ್ಟನ್ ವಲಯದಲ್ಲಿ ಕಳೆದ ಹತ್ತು ವರ್ಷಗಳ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಆಮ್ಲಜನಕ ಇರುವುದನ್ನು ಉಪಕರಣಗಳು ಸೂಚಿಸಿದವು.

ಅಳತೆಯ ಉಪಕರಣಗಳು ದೋಷಪೂರಿತವಾಗಿದೆ ಎಂದು ಭಾವಿಸಿದ ಸ್ವೀಟ್‌ಮ್ಯಾನ್ ಉಪಕರಣವನ್ನು ಮರುಮಾಪನ ಮಾಡಿದಾಗಲೂ ಆಮ್ಲಜನಕದ ಪ್ರಮಾಣ ಹೆಚ್ಚಾಗಿರುವುದನ್ನು ಗಮನಿಸಿದರು ಮತ್ತು ಪ್ರಯೋಗವನ್ನು ಹಲವು ಬಾರಿ ಪುನರಾವರ್ತಿಸಿದರು. ಫಲಿತಾಂಶದಲ್ಲಿ ಯಾವುದೇ ಬದಲಾವಣೆಗಳು ಇರಲಿಲ್ಲ. ಹೆಚ್ಚಿನ ಪ್ರಯೋಗಗಳ ಮೂಲಕ ಮ್ಯಾಂಗನೀಸ್ ಗಂಟುಗಳು ಆಮ್ಲಜನಕದ ಉತ್ಪಾದನೆಯ ಮೂಲವೆಂದು ಅವರು ಕಂಡುಹಿಡಿದರು. ವಿವಿಧ ಬ್ಯಾಕ್ಟೀರಿಯಾಗಳು ಮತ್ತು ಆರ್ಕಿಯಾಗಳು ಡಾರ್ಕ್ ಆಮ್ಲಜನಕವನ್ನು ರಚಿಸಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಕೊಂಡರು. ಹೆಚ್ಚಿನ ಪರೀಕ್ಷೆಗಾಗಿ ಗಂಟುಗಳನ್ನು ಪ್ರಯೋಗಾಲಯಕ್ಕೆ ತಂದರು.

ಸ್ವೀಟ್‌ಮ್ಯಾನ್ ಮತ್ತು ಅವರ ತಂಡವು ಪ್ರಯೋಗಾಲಯದಲ್ಲಿ ಕ್ಲಾರಿಯನ್-ಕ್ಲಿಪರ್ಟನ್ ವಲಯದಲ್ಲಿನ ಪರಿಸ್ಥಿತಿಗಳನ್ನು ಮರುಸೃಷ್ಟಿಸಿದರು. ಪಾದರಸದ ಕ್ಲೋರೈಡ್‌ನೊಂದಿಗೆ ಸೂಕ್ಷ್ಮಾಣುಜೀವಿಗಳನ್ನು ಕೊಂದರು. ಆಶ್ಚರ್ಯಕರವಾಗಿ ಆಮ್ಲಜನಕದ ಮಟ್ಟವು ಏರುತ್ತಲೇ ಇತ್ತು. ಈ ಗಂಟುಗಳ ಮೇಲ್ಮೈಯಲ್ಲಿ ಸರಿಸುಮಾರು 0.95 ವೋಲ್ಟ್‌ಗಳ ವೋಲ್ಟೇಜ್ ಅನ್ನು ದಾಖಲಿಸಿಕೊಂಡರು. ಅವುಗಳು ಉದ್ದಕ್ಕೂ ಅನಿಯಮಿತವಾಗಿ ಬೆಳೆಯುತ್ತಿರುವ ವಿವಿಧ ನಿಕ್ಷೇಪಗಳೊಂದಿಗೆ ಬೆಳೆಯುತ್ತಿರುವಾಗ ಚಾರ್ಜ್ ಆಗುವ ಸಾಧ್ಯತೆಯಿದೆ ಮತ್ತು ಸಮುದ್ರದ ನೀರನ್ನು ವಿಭಜಿಸಲು ಈ ನೈಸರ್ಗಿಕ ಚಾರ್ಜ್ ಸಹಾಯಕವಾಗಿದೆ ಎಂಬುದನ್ನು ತಿಳಿದುಕೊಂಡರು.

ವಿಜ್ಞಾನವು ಯಾವಾಗಲೂ ಪರಿಶೀಲನೆಯ ತತ್ವಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಈ ಸಂಶೋಧನೆಗಳನ್ನು ಇತರ ಸ್ವತಂತ್ರ ಪ್ರಯೋಗಗಳಿಂದ ದೃಢೀಕರಿಸುವ ಅಗತ್ಯವಿದೆ. ಅದರಂತೆ ಸ್ವೀಟ್‌ಮ್ಯಾನ್ ಮತ್ತು ಅವರ ತಂಡದವರ ನಿರಂತರ ಪ್ರಯೋಗಾತ್ಮಕ ಸಂಶೋಧನೆಯು ಸೂರ್ಯನ ಬೆಳಕನ್ನು ಬಳಸದೆ, ಕೆಲವು ಖನಿಜಗಳು ಆಮ್ಲಜನಕವನ್ನು ಉತ್ಪಾದಿಸುತ್ತವೆ ಎಂದು ಸೂಚಿಸುತ್ತದೆ. ದ್ಯುತಿಸಂಶ್ಲೇಷಣೆಯ ಹೊರತಾಗಿ ನಾವು ಭೂಗ್ರಹದಲ್ಲಿ ಆಮ್ಲಜನಕದ ಮತ್ತೊಂದು ಮೂಲವನ್ನು ಪಡೆದುಕೊಂಡಿದ್ದೇವೆ ಮತ್ತು ಇದು ಸಂಪೂರ್ಣವಾಗಿ ಆಳವಾದ ಪರಿಣಾಮಗಳನ್ನು ಹೊಂದಿದೆ ಎಂಬುದು ತಿಳಿದುಬಂದಿದೆ.

ಹಸಿರು ಆರ್ಥಿಕತೆಯನ್ನು ಶಕ್ತಿಯುತಗೊಳಿಸಲು ನಾವು ನೆಲದಿಂದ ಅಥವಾ ಆಳವಾದ ಸಾಗರದಿಂದ ಲೋಹಗಳನ್ನು ಹೊರತೆಗೆಯಬೇಕು ಎಂಬುದು ಪ್ರಸಕ್ತ ಸಂಶೋಧನೆಯಿಂದ ಗೊತ್ತಾಗಿದೆ. ಈ ಸಂಶೋಧನೆಯು ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದರಿಂದ ಆಳವಾದ ಸಾಗರ ಗಣಿಗಾರಿಕೆಯು ಮುಂದುವರಿಯುತ್ತದೆಯೇ?, ಆ ಗಣಿಗಾರಿಕೆ ಎಲ್ಲಿ ನಡೆಯಬೇಕು? ಎಂಬುದರ ಕುರಿತು ನಾವು ಎಚ್ಚರಿಕೆಯಿಂದ ಯೋಚಿಸಬೇಕಾಗಿದೆ. ಇದರ ಜೊತೆಯಲ್ಲಿ ಆಮ್ಲಜನಕದ ಉತ್ಪಾದನೆಯ ಮತ್ತೊಂದು ಆಳವಾದ ಸಾಗರ ಮೂಲವನ್ನು ಕಂಡುಹಿಡಿಯುವ ಪರಿಣಾಮಗಳು ಭೂಮಿಯ ಮೇಲೆ ಜೀವನವು ಹೇಗೆ ಪ್ರಾರಂಭವಾಯಿತು ಎಂಬುದನ್ನು ಮರುಪರಿಶೀಲಿಸುವ ಬಾಗಿಲುಗಳನ್ನು ತೆರೆದಿದೆ.

ಈ ಆವಿಷ್ಕಾರವು ಸಮುದ್ರದಾಳದಲ್ಲಿನ ಪಾಲಿಮೆಟಾಲಿಕ್ ಗಂಟುಗಳೊಂದಿಗೆ ಏನು ಮಾಡಬೇಕೆಂಬುದರ ಬಗ್ಗೆ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಅನೇಕ ಮೆಟಲ್ ಕಂಪೆನಿಗಳು ಸಮುದ್ರದಾಳದಲ್ಲಿನ ಪಾಲಿಮೆಟಾಲಿಕ್ ಗಂಟುಗಳ ಗಣಿಗಾರಿಕೆ ಕುರಿತು ಯೋಚಿಸುತ್ತಿವೆ. ವಿಜ್ಞಾನಿಗಳು ಶಕ್ತಿಯ ಸಮಸ್ಯೆಗಳಿಗೆ ಪರ್ಯಾಯವಾಗಿ ಈ ಗಂಟುಗಳನ್ನು ನೋಡುತ್ತಿದ್ದಾರೆ. ಆದರೂ, 25 ದೇಶಗಳ ಅಂತರ್ರಾಷ್ಟ್ರೀಯ ಸಮುದ್ರ ತಳದ ಪ್ರಾಧಿಕಾರ ಕೌನ್ಸಿಲ್, ಮೊರಟೋರಿಯಂ ಅನ್ನು ಜಾರಿಗೆ ತರಲು ಬಯಸಿದೆ. ಕನಿಷ್ಠ ಮುನ್ನೆಚ್ಚರಿಕೆ ವಹಿಸುವ ಕುರಿತು ಚರ್ಚಿಸುತ್ತಿವೆ. ಪ್ರಪಂಚದ ಸಮುದ್ರಗಳು ಈಗಾಗಲೇ ಆಮ್ಲೀಕರಣ, ಡೀಆಕ್ಸಿಜನೀಕರಣ ಮತ್ತು ಮಾಲಿನ್ಯ ಸೇರಿದಂತೆ ಹವಾಮಾನ ಸವಾಲುಗಳನ್ನು ಎದುರಿಸುತ್ತಿರುವುದನ್ನು ಪರಿಗಣಿಸಿ ತೀರ್ಮಾನಗಳನ್ನು ಕೈಗೊಂಡರೆ ಒಳಿತು ಎನಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ಆರ್. ಬಿ. ಗುರುಬಸವರಾಜ

contributor

Similar News